ಡೆಬಿಟ್ ಕಾರ್ಡ್‌ಗಳನ್ನು ಯಾವಾಗ ಬಳಸಬೇಕು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಯಾವಾಗ ಬಳಸಬಾರದು?

Update: 2018-09-11 11:46 GMT

ಇಂದಿನ ಡಿಜಿಟಲ್ ಯುಗದಲ್ಲಿ ಯಾವುದೇ ವ್ಯವಹಾರದಲ್ಲಿ ನಗದು ಹಣ ಪಾವತಿಸುವ ಅಗತ್ಯವೇ ಇಲ್ಲ. ಹಣ ಪಾವತಿಗೆ ಡೆಬಿಟ್ ಕಾರ್ಡ್,ಕ್ರೆಡಿಟ್ ಕಾರ್ಡ್,ಪ್ರಿಪೇಡ್ ಕಾರ್ಡ್,ಮೊಬೈಲ್ ವ್ಯಾಲೆಟ್ ಇತ್ಯಾದಿ ಹಲವಾರು ಆಯ್ಕೆಗಳು ನಮಗೆ ಲಭ್ಯವಿವೆ. ಈ ಪೈಕಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಅತ್ಯಂತ ಹೆಚ್ಚು ಚಾಲ್ತಿಯಲ್ಲಿರುವ ವಿಧಾನಗಳಾಗಿವೆ. ಆದರೆ ಕ್ರೆಡಿಟ್ ಕಾರ್ಡ್‌ಗಳನ್ನು ಯಾವಾಗ ಬಳಸಬೇಕು ಮತ್ತು ಡೆಬಿಟ್ ಕಾರ್ಡ್‌ಗಳನ್ನು ಯಾವಾಗ ಬಳಸಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಂತಿಲ್ಲ.

 ನೀವು ಅನಗತ್ಯವಾಗಿ ವೆಚ್ಚಗಳನ್ನು ಮಾಡುವವರ ವರ್ಗಕ್ಕೆ ಸೇರಿದ್ದರೆ ಮತ್ತು ಆ ಚಟದಿಂದ ಪಾರಾಗಲು ಬಯಸಿದ್ದರೆ ಡೆಬಿಟ್ ಕಾರ್ಡ್ ನಿಮ್ಮ ಪಾಲಿಗೆ ಸುರಕ್ಷಿತ ಆಯ್ಕೆಯಾಗುತ್ತದೆ. ಅದು ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇರುವಷ್ಟೇ ಹಣವನ್ನು ವ್ಯಯಿಸಲು ನಿಮಗೆ ಅನುಮತಿ ನೀಡುತ್ತದೆ. ಆದರೆ ಕ್ರೆಡಿಟ್ ಕಾರ್ಡ್‌ನ್ನು ವಿವೇಚನೆಯಿಂದ ಬಳಸಲು ನಿಮಗೆ ಗೊತ್ತಿದ್ದರೆ ಮತ್ತು ಮಾಸಿಕ ಬಿಲ್‌ಗಳನ್ನು ಸಕಾಲದಲ್ಲಿ ಪಾವತಿಸುವ ಹೊಣೆಗಾರಿಕೆಯನ್ನು ಅರಿತುಕೊಂಡಿದ್ದರೆ ಧಾರಾಳವಾಗಿ ಕ್ರೆಡಿಟ್ ಕಾರ್ಡ್ ಬಳಸಬಹುದು.

ಡೆಬಿಟ್ ಕಾರ್ಡ್ ನಿಮ್ಮ ವೆಚ್ಚಗಳ ಮೇಲೆ ಹಿಡಿತವಿರಿಸಲು ನಿಮಗೆ ನೆರವಾಗುತ್ತದೆ ಎನ್ನುವುದಷ್ಟೇ ಅದರ ಪ್ರಮುಖ ಲಾಭ. ಆದರೆ ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಿನ ಲಾಭಗಳೊಂದಿಗೆ ಬರುತ್ತವೆ ನಿಮ್ಮ ಕಾರ್ಡ್‌ನ್ನು ಲಿಂಕ್ ಮಾಡಬಹುದಾದ ಸಾಕಷ್ಟು ರಿವಾರ್ಡ್ ಪಾಯಿಂಟ್‌ಗಳು ಮತ್ತು ಲಾಯಲ್ಟಿ ಯೋಜನೆಗಳಿವೆ. ಜೊತೆಗೆ ಚಿಲ್ಲರೆ ಕ್ಷೇತ್ರ,ಪ್ರವಾಸ,ಇ-ಕಾಮರ್ಸ್,ಇಲೆಕ್ಟ್ರಾನಿಕ್ ರಿಟೇಲ್‌ನಲ್ಲಿ ವಿವಿಧ ವ್ಯಾಪಾರಿಗಳಿಂದ ಕ್ಯಾಷ್‌ಬ್ಯಾಕ್ ಮತ್ತು ರಿಯಾಯಿತಿಗಳೂ ದೊರೆಯುತ್ತವೆ. ಹಲವು ಕ್ರೆಡಿಟ್ ಕಾರ್ಡ್‌ಗಳು ಜಾಯ್ನಿಂಗ್ ಬೋನಸ್‌ನ್ನೂ ನೀಡುತ್ತವೆ. ಹೀಗಾಗಿ ನೀವು ಹೆಚ್ಚಿನ ರಿವಾರ್ಡ್‌ಗಳು ಮತ್ತು ಲಾಭಗಳನ್ನು ನಿರೀಕ್ಷಿಸಿದ್ದರೆ ಕ್ರೆಡಿಟ್ ಕಾರ್ಡ್ ಬಳಕೆ ಸೂಕ್ತವಾಗುತ್ತದೆ.

ಸಣ್ಣ ಮಳಿಗೆಗಳಲ್ಲಿ ಚಿಲ್ಲರೆ ವ್ಯಾಪಾರ ಮಾಡಿದ್ದರೆ ನೀವು ಡೆಬಿಟ್ ಕಾರ್ಡ್ ಬಳಸಬಹುದು ಮತ್ತು ವೆಚ್ಚದಾಯಕ ಖರೀದಿಗಳಿಗಾಗಿ ಕ್ರೆಡಿಟ್ ಕಾರ್ಡ್‌ನ್ನು ಮೀಸಲಿಡಬಹುದು. ಇದರಿಂದಾಗಿ ನಿಮ ್ಮ ಕ್ರೆಡಿಟ್ ಕಾರ್ಡ್ ಖಾತೆಯಲ್ಲಿ ಬೀಳುವ ಖರ್ಚಿನ ಮೊತ್ತವೂ ಕಡಿಮೆಯಾಗುತ್ತದೆ. ಕ್ರೆಡಿಟ್ ಕಾರ್ಡ್‌ಗೆ ಹೋಲಿಸಿದರೆ ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ವ್ಯಾಪಾರಿಗಳು ಪಾವತಿಸಬೇಕಾದ ಶುಲ್ಕ ಕಡಿಮೆಯಾಗಿರುವುದರಿಂದ ಅವರು ಡೆಬಿಟ್ ಕಾರ್ಡ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ವಿದೇಶ ಪ್ರವಾಸಗಳ ಸಂದರ್ಭ ಕ್ರೆಡಿಟ್ ಕಾರ್ಡ್ ಆದ್ಯತೆ ಪಡೆಯುತ್ತದೆ,ಅಲ್ಲದೆ ಹೆಚ್ಚಿನ ರಾಷ್ಟ್ರಗಳಲ್ಲಿ ಬುಕಿಂಗ್‌ಗಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.

ಕ್ರೆಡಿಟ್ ಮತ್ತು ಡೆಬಿಟ್ ಇವೆರಡೂ ಕಾರ್ಡ್‌ಗಳು ಭಾರತದಲ್ಲಿ ಬಳಕೆಗೆ ಸುರಕ್ಷಿತವಾಗಿವೆ. ಏಕೈಕ ಅನನುಕೂಲವೆಂದರೆ ಡೆಬಿಟ್ ಕಾರ್ಡ್ ವಂಚನೆ ನಡೆದರೆ ನಾವು ಎಚ್ಚರಿಕೆ ವಹಿಸುವ ಮುನ್ನವೇ ವಂಚಕ ನಮ್ಮ ಬ್ಯಾಂಕ್ ಖಾತೆಯನ್ನು ಬರಿದುಗೊಳಿಸಬಹುದು. ಆದರೆ ಕ್ರೆಡಿಟ್ ಕಾರ್ಡ್ ವಂಚನೆಯಾದರೆ ಹಾನಿಯನ್ನು ತುಂಬಿಕೊಳ್ಳಲು ಕ್ರೆಡಿಟ್ ಕಾರ್ಡ್ ಬಿಲ್ ಸಿದ್ಧಗೊಳ್ಳುವವರೆಗೆ ನಿಮಗೆ ಸಮಯಾವಕಾಶವಿರುತ್ತದೆ.

 ಇಂದು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಇಎಂಐ ಸೌಲಭ್ಯ ಕೂಡ ಸಿಗುತ್ತಿದೆ. ವಾಸ್ತವದಲ್ಲಿ ಇವೆರಡೂ ಕಾರ್ಡ್‌ಗಳು ಕೆಲವು ಅತ್ಯಂತ ಉಪಯೋಗಕರ ಲಾಭಗಳನ್ನು ಒದಗಿಸುತ್ತವೆ. ಆದರೆ ಕ್ರೆಡಿಟ್ ಕಾರ್ಡ್‌ಗಳನ್ನು ಜಾಣತನದಿಂದ ಬಳಸದಿದ್ದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿಯನ್ನುಂಟು ಮಾಡಬಹುದು ಮತ್ತು ನೀವು ವಿಳಂಬ ಪಾವತಿ ದಂಡ ಹಾಗೂ ಹೆಚ್ಚುವರಿ ಬಡ್ಡಿಗಳನ್ನು ಪಾವತಿಸಬೇಕಾಗಬಹುದು. ಡೆಬಿಟ್ ಕಾರ್ಡ್‌ಗಳ ಮಟ್ಟಿಗೆ ಹೇಳುವುದಾದರೆ ನೀವು ವೆಚ್ಚ ಮಾಡಲು ಬಯಸಿರುವ ಮೊತ್ತ ನಿಮ್ಮ ಖಾತೆಯಲ್ಲಿ ಇರುವಂತೆ ನೋಡಿಕೊಂಡರೆ ಸಾಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News