ದಾದ್ರಿ ಹತ್ಯೆ, ಅವಾರ್ಡ್ ವಾಪಸಿ ಹೊರತಾಗಿಯೂ ನಮಗೇ ಜಯ: ಅಮಿತ್ ಶಾ

Update: 2018-09-11 16:28 GMT

ಜೈಪುರ, ಸೆ. 11: ದಾದ್ರಿ ಗುಂಪಿನಿಂದ ಥಳಿಸಿ ಹತ್ಯೆ ಹಾಗೂ ಅವಾರ್ಡ್ ವಾಪಸಿಯ ಹೊರತಾಗಿಯೂ ಪಕ್ಷ ರಾಜಸ್ಥಾನ ಚುನಾವಣೆಯಲ್ಲಿ ಜಯ ಗಳಿಸಲಿದೆ ಎಂದು ಬಿಜೆಪಿ ವರಿಷ್ಠ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.

ಚುನಾವಣೆ ಬಂದಾಗ ಅಖ್ಲಾಕ್ ಹತ್ಯೆ, ಅವಾರ್ಡ್ ವಾಪಸಿಯ ವಿಷಯ ಎತ್ತಲಾಗುತ್ತದೆ. ಆದರೂ ನಾವು ಚುನಾವಣೆಯಲ್ಲಿ ಜಯ ಗಳಿಸಿದ್ದೇವೆ ಹಾಗೂ ಜಯ ಗಳಿಸಲಿದ್ದೇವೆ ಎಂದು ಜೈಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಮಿತ್ ಶಾ ಹೇಳಿದರು. 2015 ಸೆಪ್ಟಂಬರ್‌ನಲ್ಲಿ ದಾದ್ರಿಯ ಗ್ರಾಮದಲ್ಲಿ ಗೋ ಹಂತಕನೆಂದು ಶಂಕಿಸಿ 52 ವರ್ಷದ ಮುಹಮ್ಮದ್ ಅಖ್ಲಾಕ್ ಅವರನ್ನು ಹತ್ಯೆಗೈಯಲಾಗಿತ್ತು.

ಈ ಘಟನೆಯನ್ನು ಪ್ರತಿಪಕ್ಷಗಳು ಹಾಗೂ ನಾಗರಿಕ ಸಮಾಜ ಖಂಡಿಸಿ ಪ್ರತಿಭಟನೆ ನಡೆಸಿತ್ತು. ಬುದ್ಧಿಜೀವಿಗಳು ಪ್ರಶಸ್ತಿ ಹಿಂದಿರುಗಿಸಿದ್ದರು. ಆದರೂ, ಕಳೆದ ವರ್ಷ ಬಿಜೆಪಿ ಚುನಾವಣೆಯಲ್ಲಿ ಜಯ ಗಳಿಸಿತ್ತು. ರಾಜಸ್ಥಾನದಲ್ಲಿ ಇಂತಹ ಸರಣಿ ದಾಳಿಗೆ ಸಾಕ್ಷಿಯಾಗಿದೆ. ಜುಲೈಯಲ್ಲಿ ರಾಜಸ್ಥಾನದ ಅಲ್ವಾರ್‌ನಲ್ಲಿ ಅಕ್ಬರ್ ಖಾನ್ ಅವರನ್ನು ಅಕ್ರಮ ಗೋಸಾಗಾಟಗಾರನೆಂದು ಹತ್ಯೆಗೈಯಲಾಗಿತ್ತು. ಇದಕ್ಕಿಂತ ಮೊದಲು ಅಲ್ವಾರ್‌ನಲ್ಲಿ ಗುಂಪೊಂದು 55 ವರ್ಷದ ಹೈನೋದ್ಯಮಿ ಪೆಹ್ಲು ಖಾನ್ ಅವರನ್ನು ಥಳಿಸಿ ಹತ್ಯೆಗೈದಿತ್ತು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗಿ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News