‘ರಾಷ್ಟ್ರೀಯ ಪೋಷಣ್ ಮಾಸ’: ಸೆ.14ಕ್ಕೆ ವಿಚಾರ ಸಂಕಿರಣ

Update: 2018-09-12 16:47 GMT

ಬೆಂಗಳೂರು, ಸೆ. 12: ಬುಡಕಟ್ಟು ಜನರ ಆಹಾರದಲ್ಲಿನ ಪೌಷ್ಟಿಕಾಂಶದ ಮಹತ್ವ ತಿಳಿಸಲು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಸೆ.14 ರಂದು ರಾಷ್ಟ್ರೀಯ ಪೋಷಣ್ ಮಾಸ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ಕೇಂದ್ರ ಬುಡಕಟ್ಟು ಮಂತ್ರಾಲಯದ ನಿರ್ದೇಶನದಂತೆ ಮೈಸೂರಿನಲ್ಲಿರುವ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವಸಂತನಗರದಲ್ಲಿರುವ ಅಂಬೇಡ್ಕರ್ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಉದ್ಘಾಟಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ಸಿಎಸ್‌ಐಆರ್‌ನ ಹಿರಿಯ ವಿಜ್ಞಾನಿ ಡಾ.ಎ.ಜ್ಯೋತಿ ಲಕ್ಷ್ಮಿ, ಎಚ್‌ಡಿ ಇನ್‌ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್‌ನ ಪೌಷ್ಟಿಕ ಆಹಾರ ಮತ್ತು ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಉಷಾದೇವಿ, ಸಿಎಸ್‌ಐಆರ್‌ನ ತಾಂತ್ರಿಕ ತಜ್ಞ ಡಾ. ಚೇತನ್, ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್‌ನ ನಿರ್ದೇಶಕಿ ಡಾ.ಆಶಾ ಬೆನಕಪ್ಪವಿಷಯ ಮಂಡನೆ ಮಾಡಲಿದ್ದಾರೆ.

ರಾಜ್ಯದಲ್ಲಿನ ಅರಣ್ಯ ಮತ್ತು ಅರಣ್ಯದಂಚು, ಗುಡ್ಡಗಾಡು, ಬೆಟ್ಟ ಪ್ರದೇಶ, ಹಾಡಿ, ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಿಗೆ ಪೌಷ್ಟಿಕತೆ, ನೈರ್ಮಲ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ರಾಜ್ಯದಲ್ಲಿ 119 ಗಿರಿಜನ ಆಶ್ರಮಗಳು, 10 ಏಕಲವ್ಯ ಮಾದರಿ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನದ ಮುಖಾಂತರ ಅರಿವು ಮೂಡಿಸಲಾಗುವುದು.

ರಾಜ್ಯದ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯಗಳಿಗೆ ರಾಷ್ಟ್ರೀಯ ಪೋಷಣ್ ಅಭಿಯಾನದ ಮಹತ್ವ ತಿಳಿಸಿ ಕೊಡಲು ಈ ವಿಚಾರ ಸಂಕಿರಣದ ಮೂಲಕ ಪ್ರಯತ್ನಿಸಲಾಗುತ್ತಿದೆ. ಅಲ್ಲದೆ, ಜಿಲ್ಲಾ ಮಟ್ಟದಲ್ಲಿಯೂ ಆಶ್ರಮ ಶಾಲೆ ಮತ್ತು ಏಕಲವ್ಯ ಮಾದರಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬುಡಕಟ್ಟು ಆಹಾರದ ಪೌಷ್ಟಿಕತೆಯ ಮೌಲ್ಯ ತಿಳಿಸಲು ಸೆಪ್ಟೆಂಬರ್ 3ನೆ ವಾರದಲ್ಲಿ ಟ್ರೈಫೆಡ್ ಸಹಯೋಗದೊಂದಿಗೆ ಬುಡಕಟ್ಟು ಆಹಾರ ಮೇಳ ಮತ್ತು ಪ್ರದರ್ಶನ ಏರ್ಪಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಪ್ರಟಕಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News