ದಸಂಸ ವತಿಯಿಂದ ಸೆ.15 ರಿಂದ ರಾಜ್ಯಮಟ್ಟದ ಅಧ್ಯಯನ ಶಿಬಿರ

Update: 2018-09-12 16:49 GMT

ಬೆಂಗಳೂರು, ಸೆ.12: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ 126 ನೆ ಜನ್ಮದಿನಾಚರಣೆಯ ಅಂಗವಾಗಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರವನ್ನು ಸೆ.15 ಮತ್ತು 16 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಹೇಳಿದರು

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಪೂರಕವಾಗಿ ಬೆಳೆದ ಹಲವು ಸಾಹಿತಿ, ಲೇಖಕರು, ಚಿಂತಕರು, ಕಲಾವಿದರು ಚಳವಳಿಗೆ ಬೆನ್ನೆಲುಬಾಗಿದ್ದರು. ಕಾಲಕ್ರಮೇಣ ಇವರೆಲ್ಲವೂ ಚಳವಳಿಯಿಂದ ದೂರ ಸರಿದಿದ್ದಾರೆ. ಅಂತಹವರನ್ನೆಲ್ಲಾ ಒಂದು ಕಡೆ ಸೇರಿಸಿ, ಚಳವಳಿ ಬಲಿಷ್ಠ ಮಾಡುವ ನಿಟ್ಟಿನಲ್ಲಿ ಈ ಅಧ್ಯಯನ ಶಿಬಿರ ನಡೆಯುತ್ತಿದೆ ಎಂದರು.

ಅಧ್ಯಯನ ಶಿಬಿರವನ್ನು ಎನ್‌ಎಪಿಎಂನ ರಾಷ್ಟ್ರೀಯ ಸಂಚಾಲಕ ಡಾ.ಸುನೀಲಂ ಉದ್ಘಾಟಿಸಲಿದ್ದು, ನಳಂದ ಬುದ್ಧ ವಿಹಾರದ ಭಂತೆ ಬುದ್ಧರತ್ನ ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ವಿಜ್ಞಾನ ಪರಿಷತ್‌ನ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮೂರು ದಿನಗಳ ಅಧ್ಯಯನ ಶಿಬಿರದಲ್ಲಿ ಮತಾಂಧತೆಯ ವಿರುದ್ಧ ಶೋಷಿತ ಸಮುದಾಯಗಳ ಏಕತೆ ಮತ್ತು ಸಂಘಟನೆ ವಿಷಯ ಕುರಿತು ಲೇಖಕ ಶ್ರೀಪಾದ್ ಭಟ್, ಜಿ.ವಿ.ಸುಂದರ್ ವಿಷಯ ಮಂಡಿಸಲಿದ್ದಾರೆ. ಡಾ.ಅಂಬೇಡ್ಕರ್‌ರ ದೃಷ್ಟಿಕೋನದಲ್ಲಿ ಆರ್ಥಿಕ, ರಾಜಕೀಯ, ಶೈಕ್ಷಣಿಕ-ಸಾಮಾಜಿಕ ನಡೆ ವಿಷಯ ಕುರಿತು ಪ್ರಾಧ್ಯಾಪಕ ಡಾ.ಎಸ್.ಆರ್.ಕೇಶವ ವಿಷಯ ಮಂಡಿಸಲಿದ್ದಾರೆ.

ಪ್ರಸ್ತುತ ಸಂದರ್ಭದ ಬಿಕ್ಕಟ್ಟುಗಳು ವಿಷಯದ ಬಗ್ಗೆ ವಾರ್ತಾಭಾರತಿಯ ಅಂಕಣಕಾರ ಸನತ್‌ಕುಮಾರ್ ಬೆಳಗಲಿ ವಿಷಯ ಮಂಡನೆ ಮಾಡಲಿದ್ದಾರೆ. ಶೋಷಿತರ ವಿಮೋಚನೆ, ಭೂಮಿ, ವಸತಿ, ಮೀಸಲಾತಿ ಬಗ್ಗೆ ಚಿಂತಕ ರುದ್ರಪ್ಪ ಹನಗವಾಡಿ ವಿಷಯ ಮಂಡಿಸಲಿದ್ದಾರೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳ್ಳುತ್ತಿರುವ ಸಂದರ್ಭ ವಿಷಯದ ಬಗ್ಗೆ ವಕೀಲ ಬಿ.ಟಿ.ವೆಂಕಟೇಶ್ ವಿಷಯ ಮಂಡಿಸುವರು. ಜೊತೆಗೆ ಮತ್ತಿತರೆ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News