ಸೆ.16 ರಿಂದ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ

Update: 2018-09-12 16:53 GMT

ಬೆಂಗಳೂರು, ಸೆ.12: ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಸೆ.16 ರಿಂದ ಮೂರು ದಿನಗಳ ಕಾಲ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಶ್ರೀನಿವಾಸ, ಕನ್ನಡದ ಮೇರು ನಟರಾದ ವಿಷ್ಣುವರ್ಧನ್‌ರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಈ ಉತ್ಸವವನ್ನು ಮಾಡಲಾಗುತ್ತಿದೆ. ಉತ್ಸವದ ಅಂಗವಾಗಿ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಿಂದ ವಿವಿಪುರಂನಲ್ಲಿರುವ ಕುವೆಂಪು ಕಲಾಕ್ಷೇತ್ರದವರೆಗೂ ಕಲಾತಂಡಗಳು, ಸಿನಿಮಾ ಕಲಾವಿದರು ಸೇರಿದಂತೆ ಸಾವಿರಾರು ಜನರ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಡಾ.ವಿಷ್ಣು ಜಯಂತಿಯನ್ನು ಈ ವರ್ಷದಿಂದ ‘ರಾಷ್ಟ್ರೀಯ ಆದರ್ಶ ದಿನ’ವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಥಿಂಕ್ ಗುಡ್ ಡೂ ಗುಡ್ ಪರಿಕಲ್ಪನೆ ಅಡಿಯಲ್ಲಿ ನೆಹರು ಜಯಂತಿ ಮಕ್ಕಳ ದಿನಾಚರಣೆ ರೀತಿಯಲ್ಲಿಯೇ ವಿಷ್ಣು ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಕನ್ನಡ ನಾಡನ್ನು ಉಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ರಾಷ್ಟ್ರೀಯ ಆದರ್ಶವನ್ನು ಬಿತ್ತುವ ಸಲುವಾಗಿ ಈ ದಿನಾಚರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಉತ್ಸವದಲ್ಲಿ ವಿಷ್ಣು ಅವರ ಬದುಕು ಮತ್ತು ಸಾಧನೆಗಳ ಕುರಿತು ವಿನೂತನವಾಗಿ ಚಿತ್ರಕಲಾ ಕಾರ್ಯಾಗಾರವನ್ನು ಆಯೋಜಿಸಿದ್ದು, ಐದು ವಿಶೇಷ ಚಿತ್ರಗಳನ್ನು ರಚಿಸಲಾಗುತ್ತಿದೆ. ಅನಂತರ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ಹಿರಿಯ ನಟ, ನಟಿಯರು ಹಾಗೂ ಯುವ ನಟರೊಂದಿಗಿನ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. ಪ್ರತಿದಿನ ಸಂಜೆ ಡಾ.ವಿಷ್ಣು ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್ ಉದ್ಘಾಟಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಉದಯ ಗರುಡಾಚಾರ್, ಸಾಹಿತಿ ದೊಡ್ಡ ರಂಗೇಗೌಡ, ಡಾ.ವಿಜಯಮ್ಮ, ಪತ್ರಕರ್ತ ಸದಾಶಿವ ಶೆಣೈ, ಕೆ.ಜೆ.ಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News