ಜಾತಿ ಜನಸಂಖ್ಯಾಧಾರಿತ ಮೀಸಲಾತಿ ಇರಲಿ

Update: 2018-09-12 18:34 GMT

ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರವು ಒಬಿಸಿ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಅಕ್ಟೋಬರ್ 2, 2017ರಂದು ದಿಲ್ಲಿ ಹೈಕೋರ್ಟ್ ನ ನಿವೃತ್ತ ಜಸ್ಟಿಸ್ ಜಿ.ರೋಹಿಣಿ ನೇತೃತ್ವದಲ್ಲಿ 5 ಜನರ ಒಬಿಸಿ ಒಳ ಮೀಸಲಾತಿ ಸಮಿತಿಯನ್ನು ರಚಿಸಿತು. ಆದರೆ ಐವರಲ್ಲಿ ಮುಸ್ಲಿಂ, ಕ್ರೈಸ್ತ ಸಮುದಾಯದ ಒಬ್ಬ ಸದಸ್ಯರನ್ನೂ ನೇಮಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರದ ಒಬಿಸಿ ಪಟ್ಟಿಯಲ್ಲಿ ವಿವಿಧ ರಾಜ್ಯ ಹಾಗೂ ರಾಷ್ಟ್ರೀಯ ಒಬಿಸಿ ಆಯೋಗದ ಶಿಫಾರಸಿನಂತೆ ಕೆಲವು ರಾಜ್ಯಗಳಲ್ಲಿ ಮುಸ್ಲಿಂ, ಕ್ರೈಸ್ತರನ್ನು ಹಿಂದುಳಿದ ಜಾತಿಯವರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕೆಲವು ರಾಜ್ಯಗಳ ಒಬಿಸಿ ಆಯೋಗದಲ್ಲಿ ಮುಸ್ಲಿಂ, ಕ್ರೈಸ್ತರನ್ನು ಸದಸ್ಯರನ್ನಾಗಿ ನೇಮಿಸಿದ್ದಾರೆ. ಆದರೆ ರಾಷ್ಟ್ರೀಯ ಸಮಿತಿಗೆ ಮುಸ್ಲಿಂ, ಕ್ರೈಸ್ತರನ್ನು ಸದಸ್ಯರನ್ನಾಗಿ ನೇಮಕ ಮಾಡದಿರುವುದು ತಾರತಮ್ಯದ ನೀತಿ. ಈ ತಾರತಮ್ಯದ ಸಮಿತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ಕೂಡ ನೀಡಿದ್ದಾರೆ.

ಕೇಂದ್ರ ಸರಕಾರದ ಶೇ. 27 ಜಾತಿವಾರು ಮೀಸಲಾತಿಯಲ್ಲಿ ಒಳ ಮೀಸಲಾತಿ ವರ್ಗೀಕರಣಕ್ಕಾಗಿ 11 ವಾರಗಳ ಸಮಯ ನಿಗದಿಪಡಿಸಲಾಗಿತ್ತು. ಸಮಿತಿಯು ಹೆಚ್ಚು ಸಮಯ ಕೇಳಿದ ಕಾರಣ ಅವಧಿಯನ್ನು ಜೂನ್ 6, 2018ವರೆಗೆ ವಿಸ್ತರಿಸಲಾಗಿತ್ತು. ದೇಶದ ಅತ್ಯಂತ ದೊಡ್ಡ ಸಾಮಾಜಿಕ ಸಮುದಾಯವಾದ ಹಿಂದುಳಿದ ಜಾತಿ, ವರ್ಗದ ವಿಚಾರದಲ್ಲಿ ಮೋದಿ ನೇತೃತ್ವದ ಕೇಂದ್ರ ಸರಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಒಬಿಸಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ, ಕಾಳಜಿಯಿರುವ ಹತ್ತಾರು ಹೈಕೋರ್ಟ್ ನ್ಯಾಯಾಧೀಶರು ಒಳ ಮೀಸಲಾತಿ ವರ್ಗೀಕರಣ ಸಮಿತಿಗೆ ಅಧ್ಯಕ್ಷತೆ ವಹಿಸಿಕೊಳ್ಳಲು ಮುಂದೆ ಬಂದಿದ್ದರು. ಆದರೆ ಅನಾಮಧೇಯ ನಿವೃತ್ತ ಜಸ್ಟಿಸ್ ರೋಹಿಣಿಯವರನ್ನು ಒಳ ಮೀಸಲಾತಿ ವರ್ಗೀಕರಣ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿರುವುದು ಆಘಾತಕಾರಿಯಾಗಿದೆ ಮತ್ತು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಭಾರತೀಯ ಸಂವಿಧಾನದ ಅನುಚ್ಛೇದ 340ರ ಪ್ರಕಾರ ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು, ವಿಶೇಷ ನೀತಿ ಜಾರಿಗೊಳಿಸಲು ಅನುವು ಮಾಡಿಕೊಡುತ್ತದೆ.

ಅನುಚ್ಛೇದ 340ರ ಅನುಗುಣವಾಗಿ ರಚನೆಗೊಂಡಿರುವ ಒಳಮೀಸಲಾತಿ ಸಮಿತಿಯು ಯಾವುದೇ ಕಾನೂನು ಮಾಡುವ ಮೊದಲು ಅ ಕಾನೂನಿನ ವ್ಯಾಪ್ತಿಯಲ್ಲಿ ಬರುವ ಸಮುದಾಯದ ವ್ಯಕ್ತಿ, ಸಂಘ, ಸಂಸ್ಥೆಗಳ ಪ್ರತಿನಿಧಿ ಆ ವರ್ಗದ ಬಗ್ಗೆ ಆಳವಾಗಿ, ವೈಜ್ಞಾನಿಕವಾಗಿ ಅಧ್ಯಯನ ಮಾಡಿರುವ ಸಮಾಜ ವಿಜ್ಞಾನಿಗಳು, ತಜ್ಞರು, ರಾಜಕಾರಣಿಗಳ ಸಲಹೆ ಹಾಗೂ ಅಹವಾಲು ಮನವಿಗಳನ್ನು ವರ್ಗೀಕರಣ ಸಮಿತಿಯು ಪಡೆಯುವುದು ವಾಡಿಕೆ ಮತ್ತು ಕಡ್ಡಾಯ ಪದ್ಧತಿ, ಅದರೆ ಜಸ್ಟಿಸ್ ರೋಹಿಣಿ ನೇತೃತ್ವದ ಸಮಿತಿಯು ಅವೆಲ್ಲ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿದೆ.

ಮುಖ್ಯವಾಗಿ ಕೇಂದ್ರ ಸರಕಾರದ ಈಗಿನ ಮೀಸಲಾತಿ ಪ್ರಮಾಣ ಶೇ. 27ಇದ್ದು ಅದನ್ನು ಒಬಿಸಿಗಳ ಜನಸಂಖ್ಯೆಯ ಅನುಗುಣವಾಗಿ 52ಕ್ಕೆ ಹೆಚ್ಚಿಸಬೇಕೆಂದು ರಾಷ್ಟ್ರದಾದ್ಯಂತ ಒಬಿಸಿ ಸಂಘ, ಸಂಸ್ಥೆಗಳು, ರಾಜಕಾರಣಿಗಳು, ಸಮುದಾಯದ ಮುಖಂಡರು ನಿರಂತರ ಹಕ್ಕ್ಕೊತ್ತಾಯ ಮಾಡುತ್ತಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಮಾಜ ಕಲ್ಯಾಣ ಸಚಿವರು ಹಾಗೂ ಇನ್ನಿತರ ಸಾಂವಿಧಾನಿಕ ಮಾನ್ಯತೆ ಪಡೆದ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ, ನಿರಂತರ ಮೀಸಲಾತಿ ಪ್ರಮಾಣವನ್ನು 52ಕ್ಕೆ ಹೆಚ್ಚಿಸಲು ಆಗ್ರಹಿಸುತ್ತಿದ್ದಾರೆ. ಆದರೆ ಒಳ ಮೀಸಲಾತಿ ವರ್ಗೀಕರಣ ಸಮಿತಿಯು ಇದನ್ನು ದುರುದ್ದೇಶದಿಂದಲೇ ಪರಿಗಣಿಸಿಲ್ಲ.

ಒಬಿಸಿಗಳಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಜಾತಿಗಳಲ್ಲದೆ ಸಿಖ್, ಜೈನ್, ಮುಸ್ಲಿಂ, ಕ್ರೈಸ್ತ ಇತರ ಸಮುದಾಯಕ್ಕೆ ಸೇರಿದ ನೂರಾರು ಕುಶಲ ಕರ್ಮಿ ಜಾತಿಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ಒಬಿಸಿ ಪಟ್ಟಿಯಲ್ಲಿ ಇದ್ದು ಮುಸ್ಲಿಂ, ಕ್ರೈಸ್ತ ಜಾತಿಗಳನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕಬೇಕೆಂದು ಹಿಂದುತ್ವ ಸಂಘಟನೆಗಳು ಮತ್ತು ಬಿಜೆಪಿಯು ಒಳ ಮೀಸಲಾತಿ ವರ್ಗೀಕರಣ ಸಮಿತಿಯ ಮೇಲೆ ತೀವ್ರವಾಗಿ ಒತ್ತಾಯ ಮಾಡುತ್ತಿವೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಧಾರ್ಮಿಕ ಕಾರಣವನ್ನೊಡ್ಡಿ ಮುಸ್ಲಿಂ, ಕ್ರೈಸ್ತರು ಸೇರಿದ ಕುಶಲ ಕರ್ಮಿ ಒಬಿಸಿಗಳನ್ನು ಸಮಿತಿಯು ಒಬಿಸಿ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ನಿಚ್ಚಳವಾಗಿದೆ.
ಅದರೆ ಆಯೋಗವು ಮುಸ್ಲಿಂ, ಕ್ರೈಸ್ತ ಸಮುದಾಯದ ಆತಂಕ ನಿವಾರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ, ಸಮಜಾಯಿಷಿ ನೀಡಿಲ್ಲ.

ಅಲ್ಪಸಂಖ್ಯಾತರ ವಿರೋಧಿ ಒಬಿಸಿ ಮೀಸಲಾತಿ ವಿಚಾರವಾಗಿ, ಕೆನೆ ಪದರ ನೀತಿಯ ಬಗ್ಗೆ ಹಾಗೂ ಮೀಸಲಾತಿ ಹೆಚ್ಚಿಸುವ ಬಗ್ಗೆ ವಿವಿಧ ವ್ಯಕ್ತಿಗಳು, ಸಂಘ, ಸಂಸ್ಥೆಗಳು ಪರ ವಿರೋಧವಾಗಿ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಕೇಸ್ ದಾಖಲಿಸಿದಾಗ ನ್ಯಾಯಾಧೀಶರು ಕೇಂದ್ರ, ರಾಜ್ಯ ಸರಕಾರಗಳಿಗೆ ಒಬಿಸಿ ಹಾಗೂ ಇತರ ವರ್ಗಗಳ ಅಧಿಕೃತ ಜಾತಿಗಣತಿ ಮಾಹಿತಿ ಕೇಳಿತು. ಸರಕಾರಗಳು ಮಾಹಿತಿ ನೀಡಲು ಅಸಮರ್ಥವಾದ ಕಾರಣ ಜಾತಿ ಗಣತಿ ನಡೆಸಲು ನಿರ್ದೇಶಿಸಿತು.
ಅದಲ್ಲದೆ ರಾಷ್ಟ್ರಾದ್ಯಂತ ವಿವಿಧ ಜಾತಿ ಹಾಗೂ ಒಬಿಸಿ ಸಂಘ ಸಂಸ್ಥೆಗಳು ಜಾತಿಗಣತಿ ಮಾಡಿ ಮಾಹಿತಿ ಬಹಿರಂಗಗೊಳಿಸಬೇಕೆಂದು ಆಗ್ರಹಿಸುತ್ತಿತ್ತು. ಕರ್ನಾಟಕದ ಸಿದ್ದರಾಮಯ್ಯ, ಬಿಹಾರದ ಲಾಲು ಪ್ರಸಾದ್‌ಯಾದವ್, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್, ತಮಿಳುನಾಡಿನ ಎಂ.ಕರುಣಾನಿಧಿ ಮತ್ತು ಇತರ ಹಿಂದುಳಿದ ಜಾತಿಯ ದಿಗ್ಗಜರು ಜಾತಿಗಣತಿ ನಡೆಸಲು ತೀವ್ರವಾಗಿ ಒತ್ತಾಯಿಸಿದ ನಂತರ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ 2011ರಲ್ಲಿ ಜಾತಿಗಣತಿ ಕಾರ್ಯ ನಡೆಸಿದರು. ಆದರೆ ಯುಪಿಎ-2 ಸರಕಾರದಲ್ಲಿದ್ದ ಮೇಲ್ಜಾತಿ ಲಾಬಿಗೆ ಮಣಿದು ಆ ಅಂಕಿ ಅಂಶಗಳ ಮಾಹಿತಿಯನ್ನು ಬಿಡುಗಡೆ ಮಾಡದೆ ಒಬಿಸಿಗಳನ್ನು ವಂಚಿಸಿತು.

2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ-ಎನ್‌ಡಿಎ ಸರಕಾರವು ಕೂಡ 2011ರ ಜಾತಿಗಣತಿ ಮಾಹಿತಿ ಬಿಡುಗಡೆ ಮಾಡಲಿಲ್ಲ. ಹತ್ತಾರು ಬಾರಿ ಪಾರ್ಲಿಮೆಂಟಿನಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಲೋಕಸಭಾ ಸದಸ್ಯರು ಜಾತಿಗಣತಿ ಮಾಹಿತಿ ಬಿಡುಗಡೆ ಮಾಡಲು ಒತ್ತಾಯ ಮಾಡಿ ಆಗ್ರಹಿಸಿದರು. ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರಕಾರವು ದುರುದ್ದೇಶದಿಂದ ಮಾಹಿತಿ ಬಿಡುಗಡೆ ಮಾಡಲಿಲ್ಲ. 2019 ಚುನಾವಣೆಗೆ ಇನ್ನೂ 9 ತಿಂಗಳು ಇರುವಾಗ ಒಬಿಸಿ ಒಳ ಮೀಸಲಾತಿ ವರ್ಗೀಕರಣಕ್ಕೆ ಚಾಲನೆ ನೀಡಿರುವುದು ದೊಡ್ಡ ಷಡ್ಯಂತ್ರವಾಗಿದೆ. ಜಾತಿಗಣತಿ ಬಿಡುಗಡೆ ಮಾಡದೆ ಮೀಸಲಾತಿ ವರ್ಗೀಕರಣ ಮಾಡುವುದು ಅವೈಜ್ಞಾನಿಕ, ಅಸಂವಿಧಾನಿಕ.

ಒಬಿಸಿಗಳ ಬಹುದಿನಗಳ ಬೇಡಿಕೆಯಾದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನ ಸ್ಥಾನಮಾನವನ್ನು ನೀಡಬೇಕೆನ್ನುವ ಹಕ್ಕೊತ್ತಾಯವನ್ನು ಅಗಸ್ಟ್ 3, 2018ರಂದು ಪಾರ್ಲಿಮೆಂಟಿನ ರಾಜ್ಯಸಭಾ ಹಾಗೂ ಲೋಕಸಭೆಯಲ್ಲಿ ಸರ್ವಾನುಮತದಿಂದ ಸಂವಿಧಾನದ 123 ತಿದ್ದುಪಡಿ ಮಾಡುವ ಮೂಲಕ ಎನ್‌ಡಿಎ ಸರಕಾರ ಈಡೇರಿಸಿದೆ. ಇದು ಸಂತಸದ ವಿಚಾರವಾದರೂ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಹಿಂದುಳಿದ ವರ್ಗಗಳ ಆಯೋಗವು ತಮಗಿರುವ ವಿಶೇಷ ಅಧಿಕಾರದಿಂದ ವಂಚಿತವಾಗುತ್ತವೆ. ಇಷ್ಟು ವರ್ಷಗಳ ಕಾಲ ಯಾವುದಾದರೂ ಜಾತಿಯನ್ನು ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಲು ಹಾಗೂ ಪಟ್ಟಿಯಿಂದ ತೆಗೆದು ಹಾಕುವ ಅಧಿಕಾರವು ರಾಜ್ಯ ಹಿಂದುಳಿದ ಆಯೋಗಕ್ಕೆ ಇತ್ತು ಮತ್ತು ರಾಜ್ಯ ಆಯೋಗ ಶಿಫಾರಸು ಮಾಡಿರುವ ಜಾತಿಗಳನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು(NCBC) ಕೇಂದ್ರ ಸರಕಾರದ ಒಬಿಸಿ ಪಟ್ಟಿಗೆ ಸೇರಿಸಿಕೊಳ್ಳುತ್ತಿತು, ಈಗ ಯಾವುದಾದರೂ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಅಥವಾ ತೆಗೆದು ಹಾಕಲು ಪಾರ್ಲಿಮೆಂಟಿನ ರಾಜ್ಯಸಭೆ, ಲೋಕಸಭೆಗೆ ಮಾತ್ರವೇ ಅಧಿಕಾರ ಇರುತ್ತದೆ. ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ದಿಲ್ಲಿ, ರಾಜ್ಯಗಳ ಅತ್ಯಂತ ಪ್ರಬಲ ಜಾತಿಗಳಾದ ಜಾಟ್, ಗುಜರಾತ್‌ನ ಪಟೇಲ್, ಮಹಾರಾಷ್ಟ್ರದ ಮರಾಠ, ಆಂಧ್ರಪ್ರದೇಶ, ತೆಲಂಗಾಣದ ಕಾಪು ಇಂತಹವೆಲ್ಲ ಪ್ರಬಲ ಹಾಗೂ ಮುಂದುವರಿದ ಮೇಲ್ಜಾತಿಗಳು ಹಿಂದುಳಿದ ಪಟ್ಟಿಗೆ ಸೇರಿಸಬೇಕೆಂದು ಹಿಂಸಾತ್ಮಕ ಪ್ರತಿಭಟನೆಗಳನ್ನು ಮಾಡುತ್ತಿವೆ. ಕೇಂದ್ರದ ಬಿಜೆಪಿ ಸರಕಾರವು ಇವೆಲ್ಲ ಜಾತಿಗಳನ್ನು ಹಿಂದುಳಿದ ಪಟ್ಟಿಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದೆ. ಈ ಬಗ್ಗೆ ವೌನವಹಿಸಿದರೆ ಲೋಕಸಭೆಯಲ್ಲಿ ಬಹುಮತ ಇರುವ ಬಿಜೆಪಿ ಸರಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಪ್ರಮಾಣ ಹೆಚ್ಚಿಸಬಹುದು.

ಮೀಸಲಾತಿಯ ಬಗ್ಗೆ ಸರಕಾರಗಳು ಖಚಿತ ನಿಲುವು ತೆಗೆದುಕೊಳ್ಳದ ಕಾರಣ ದೇಶದಾದ್ಯಂತ ನಡೆದ ಮೀಸಲಾತಿ ಪ್ರತಿಭಟನೆಗಳಲ್ಲಿ ಹತ್ತಾರು ಜನ ಸಾವನ್ನಪ್ಪಿದ್ದಾರೆ ಹಾಗೂ ಸಾವಿರಾರು ಕೋಟಿ ರೂ. ನಷ್ಟ ಆಗಿದೆ. ಹಳ್ಳಿಗಳಲ್ಲಿ ಪ್ರತಿ ದಿನ ಮೀಸಲಾತಿ ವಿಚಾರವಾಗಿ ಗಲಾಟೆಗಳು ನಡೆಯುವುದು ಸರ್ವೇ ಸಾಮಾನ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾತಿ, ಧರ್ಮದ ಜನಸಂಖ್ಯೆಯ ಅನುಗುಣವಾಗಿ ಎಲ್ಲಾ ಕ್ಷೇತ್ರದಲ್ಲೂ ಮೀಸಲಾತಿ ವರ್ಗೀಕರಣ ಮಾಡುವುದೊಂದೇ ಮೀಸಲಾತಿ ಸಮಸ್ಯೆಗೆ ಪರಿಹಾರ.

Writer - ಸೂರ್ಯಪ್ರಕಾಶ ಕೊಲಿ

contributor

Editor - ಸೂರ್ಯಪ್ರಕಾಶ ಕೊಲಿ

contributor

Similar News