200 ಮೀ. ಓಟದಲ್ಲಿ ಚಿನ್ನ ಗೆದ್ದ ಭಾರತದ 102 ವರ್ಷದ ಮನ್ ಕೌರ್

Update: 2018-09-14 11:25 GMT

ಹೊಸದಿಲ್ಲಿ, ಸೆ. 14: ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಸಾಬೀತು ಪಡಿಸಿದ್ದಾರೆ ಭಾರತದ ಅತ್ಯಂತ ಹಿರಿಯ ಮಹಿಳಾ ಅಥ್ಲೀಟ್, 102 ವರ್ಷದ ಮನ್ ಕೌರ್.

ಪಂಜಾಬ್ ರಾಜ್ಯದ ಪಟಿಯಾಲದವರಾದ ಇವರು ಸ್ಪೇನ್ ದೇಶದ ಮಲಗ ಎಂಬಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ನಲ್ಲಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ದೇಶಕ್ಕೆ ಹೆಮ್ಮೆಯುಂಟು ಮಾಡಿದ್ದಾರೆ. ಕೌರ್ ಅವರು 100-104 ವಯೋಮಿತಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ತಾವು 93 ವರ್ಷದವರಿದ್ದಾಗ ಅಥ್ಲೆಟಿಕ್ಸ್ ನಲ್ಲಿ ಆಸಕ್ತಿ ವಹಿಸಿದ ಕೌರ್ ಗೆ ಅವರ 78 ವರ್ಷದ ಪುತ್ರ ಗುರು ದೇವ್ ಆವರೇ ಸ್ಫೂರ್ತಿಯಾಗಿದ್ದಾರೆ. ಗುರುದೇವ್  ಹಿರಿಯ ನಾಗರಿಕರ ಒಲಿಂಪಿಕ್ಸ್ ಎಂದೇ ಪರಿಗಣಿತವಾಗಿರುವ ವಲ್ಡ್ ಮಾಸ್ಟರ್ಸ್ ಚಾಂಪಿಯನ್‍ಶಿಪ್ ನಲ್ಲಿ ಸ್ಪರ್ಧಿಸಿದವರಾಗಿದ್ದರು.

ಕೌರ್ ಕುರಿತಂತೆ ಹಿಸ್ಟರಿ ಟಿವಿ18 ವೀಡಿಯೊವೊಂದನ್ನು ಶೇರ್ ಮಾಡಿದ್ದು ಆಕೆ ಅಥ್ಲೆಟಿಕ್ಸ್ ನಲ್ಲಿ ಆಸಕ್ತಿ ವಹಿಸಿದ್ದು ಹೇಗೆ ಎಂದು ಅದರಲ್ಲಿ ವಿವರಿಸಲಾಗಿದೆ. ಕೌರ್ ಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ. ಮೊದಲ ಬಾರಿ ಆಕೆ 100 ಮೀಟರ್ ಓಟವನ್ನು ಒಂದು ನಿಮಿಷ ಒಂದು ಸೆಕೆಂಡ್ ಅವಧಿಯಲ್ಲಿ ಪೂರೈಸಿದ್ದರು ಎಂದು ಅವರ ಪುತ್ರ ಹೇಳಿದ್ದು ವೀಡಿಯೊದಲ್ಲಿ ದಾಖಲಾಗಿದೆ.

ಈ ಅಜ್ಜಿಯ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಕಳೆದ ವರ್ಷ ನ್ಯೂಝಿಲೆಂಡ್ ದೇಶದ ಆಕ್ಲೆಂಡ್ ನಲ್ಲಿ ನಡೆದ ವಲ್ಡ್ ಮಾಸ್ಟರ್ಸ್ ಗೇಮ್ಸ್ ನಲ್ಲಿ ಕೌರ್ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News