ಬಿಎಸ್‌ವೈ, ಈಶ್ವರಪ್ಪ, ಪ್ರಭಾಕರ್ ಕೋರೆ ‘ಕಿಂಗ್‌ಪಿನ್’ಗಳು: ದಿನೇಶ್‌ ಗುಂಡೂರಾವ್

Update: 2018-09-14 14:32 GMT

ಬೆಂಗಳೂರು, ಸೆ.14: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಬೀಳಿಸುವ ಹುನ್ನಾರದ ಹಿಂದೆ ಇರುವ ಕಿಂಗ್‌ಪಿನ್‌ಗಳು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಗಂಭೀರ ಆರೋಪ ಮಾಡಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಅಧಿಕಾರದ ದಾಹ ಎಷ್ಟರ ಮಟ್ಟಿಗೆ ಏರಿದೆ ಅಂದರೆ ಸುಸ್ಥಿರ ಸರಕಾರ ಬೀಳಿಸಲು ಅನೈತಿಕ ಚಟುವಟಿಕೆಗಳಿಗೆ ಇಳಿದಿದ್ದಾರೆ ಎಂದು ದೂರಿದರು.

ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಿಗದೆ ಇದ್ದರೂ ಸರಕಾರ ರಚನೆಗೆ ಮುಂದಾಗಿ ಕಡೆಗೆ ವಿಫಲವಾಗಿದ್ದರು. ಬಿಜೆಪಿ ನಡೆಸುವ ಪ್ರಯತ್ನಗಳನ್ನು ರಾಜ್ಯದ ಜನ ನೋಡಿದ್ದಾರೆ. ಈಗ ನಮ್ಮ ಸಮ್ಮಿಶ್ರ ಸರಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ದಿನೇಶ್‌ ಗುಂಡೂರಾವ್ ಕಿಡಿಕಾರಿದರು.

ಸರಕಾರವನ್ನು ಬೀಳಿಸಲು ಯಡಿಯೂರಪ್ಪ ಸೇರಿದಂತೆ ಶಾಸಕರಾದ ಡಾ.ಸಿ.ಎನ್.ಅಶ್ವಥ್‌ ನಾರಾಯಣ, ಸತೀಶ್ ರೆಡ್ಡಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಸೇರಿದಂತೆ ಹಲವರಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಕಾಂಗ್ರೆಸ್ ಶಾಸಕರಾದ ಸಿ.ಎಸ್.ಶಿವಳ್ಳಿ, ಬಿ.ಸಿ.ಪಾಟೀಲ್, ಅನಿಲ್ ಕುಮಾರ್(ಅನಿಲ್ ಚಿಕ್ಕಮಾದು), ವಿ.ಮುನಿಯಪ್ಪ ಸೇರಿದಂತೆ ಇನ್ನಿತರರಿಗೆ ನೂರಾರು ಕೋಟಿ ರೂ.ಗಳನ್ನು ನೀಡುವ ಆಮಿಷ ಒಡ್ಡಲಾಗುತ್ತಿದೆ. ಶಾಸಕರನ್ನು ಖರೀದಿಸುವ ಸಂಬಂಧ ಈಗಲೂ ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ ಎಂದು ದಿನೇಶ್‌ ಗುಂಡೂರಾವ್ ದೂರಿದರು.

ಕೆಲವು ಫೈನಾನ್ಸರ್‌ಗಳನ್ನು ಬಳಸಿಕೊಂಡು ಬಿಜೆಪಿಯವರು ಶಾಸಕರ ಖರೀದಿಗೆ ಹಣದ ಹೊಳೆ ಹರಿಸಲು ಸಿದ್ಧವಾಗುತ್ತಿದ್ದಾರೆ. ಆದುದರಿಂದ, ಇಂತಹ ಫೈನಾನ್ಸರ್ ಹಾಗೂ ನಮ್ಮ ಶಾಸಕರಿಗೆ ಹಣದ ಆಮಿಷವನ್ನು ಒಡ್ಡುತ್ತಿರುವ ಬಿಜೆಪಿ ಶಾಸಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆದಾಯ ತೆರಿಗೆ ಇಲಾಖೆಗೆ ಪಕ್ಷದ ವತಿಯಿಂದ ದೂರು ನೀಡಲಾಗಿದೆ ಎಂದು ಅವರು ಹೇಳಿದರು.

ಬಿಎಸ್‌ವೈಗೆ ಮತ್ತೆ ಮುಖಭಂಗ: ನಮ್ಮ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ಒಬ್ಬ ಶಾಸಕನಿಂದ ರಾಜೀನಾಮೆ ಕೊಡಿಸಿ ನೋಡೋಣ? ಎಷ್ಟು ಸಾವಿರ ಕೋಟಿ ರೂ.ಗಳನ್ನು ನೀಡಿದರೂ ನಮ್ಮ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಈ ಪ್ರಯತ್ನದಲ್ಲಿ ಯಡಿಯೂರಪ್ಪಗೆ ಮತ್ತೆ ಮುಖಭಂಗವಾಗುವುದು ನಿಶ್ಚಿತ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಆಪರೇಷನ್ ಕಮಲಕ್ಕೆ ಮುಂದಾಗಿರುವ ಯಡಿಯೂರಪ್ಪ ನಡೆಗೆ ಅವರ ಪಕ್ಷದಲ್ಲೆ ವಿರೋಧವಿದೆ. ಆದರೂ, ಯಡಿಯೂರಪ್ಪ ಹಾಗೂ ಅವರ ತಂಡ ಹೇಗಾದರೂ ಮಾಡಿ ಸರಕಾರವನ್ನು ಬೀಳಿಸಲು ಮುಂದಾಗಿದೆ. ಇಂತಹ ಕೀಳುಮಟ್ಟದ ರಾಜಕಾರಣ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಅವರು ತಿಳಿಸಿದರು.

50-100 ಕೋಟಿ ರೂ.ಗಳು ಸಣ್ಣ ಮೊತ್ತವೇನಲ್ಲ. ನಮಗೆ ಬಿಜೆಪಿ ಬಗ್ಗೆ ಯಾವುದೇ ಭಯವಿಲ್ಲ. ಆಪರೇಷನ್ ಕಮಲಕ್ಕೆ ವಿರೋಧವಿರುವ ಬಿಜೆಪಿಯ ಕೆಲ ನಾಯಕರು ನಮ್ಮ ಜೊತೆ ಕೈ ಜೋಡಿಸುತ್ತಾರೆ. ಆದುದರಿಂದ, ಯಡಿಯೂರಪ್ಪ ನಡೆಸುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ. ಈ ಸಂಬಂಧ ಎಸಿಬಿಗೆ ದೂರು ನೀಡುತ್ತೇವೆ. ತನಿಖೆ ನಡೆದರೆ ಸತ್ಯಾಂಶ ಹೊರಗಡೆ ಬರುತ್ತದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಗೊಂದಲಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಜಾರಕಿಹೊಳಿ ಸಹೋದರರು ಎಲ್ಲಿಯೂ ತಾವು ಪಕ್ಷ ತ್ಯಜಿಸುತ್ತೇವೆ ಎಂದು ಹೇಳಿಕೆ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ದಿನೇಶ್ ಗುಂಡೂರಾವ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News