ಪನಾಮ ಪೇಪರ್ಸ್‌ ಹಗರಣದಲ್ಲಿ ಎಸ್.ಎಂ ಕೃಷ್ಣರ ಅಳಿಯ ಭಾಗಿ: ಹಿರೇಮಠ್ ಗಂಭೀರ ಆರೋಪ

Update: 2018-09-14 14:50 GMT

ಹುಬ್ಬಳ್ಳಿ, ಸೆ. 14: ಮಾಜಿ ಸಿಎಂ ಎಸ್ಸೆಂ ಕೃಷ್ಣ ಅವರ ಎರಡನೆ ಅಳಿಯ ಉಮೇಶ್ ಮೋಹನ್ ಹಿಂಗೋರಾಣಿ ಅವರು ಇಂಗ್ಲೆಂಡಿನಲ್ಲಿ ಅಕ್ರಮ ಹೂಡಿಕೆ ಮಾಡಿದ್ದಾರೆ. ದೇಶ-ವಿದೇಶಗಳ ಗಣ್ಯರ ಅಕ್ರಮ ಸಂಪತ್ತಿನ ದಾಖಲೆಗಳನ್ನು ಬಹಿರಂಗಗೊಳಿಸಿದ ಪನಾಮ ಪೇಪರ್ಸ್‌ನಲ್ಲಿ ಅವರ ಹೆಸರೂ ಇರುವುದು ಬೆಳಕಿಗೆ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಆರೋಪ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಮೇಶ್ ಮೋಹನ್ ಯುಬಿ ಕಂಪೆನಿಯಲ್ಲಿ ನೌಕರರಾಗಿದ್ದರು. ಅಂತಹ ವ್ಯಕ್ತಿಗೆ ಎಸ್‌ಡಿಯು ವೆಂಚರ್ಸ್ ಹೆಸರಿನಲ್ಲಿ ವಿದೇಶದಲ್ಲಿ ಹೂಡಿಕೆ ಮಾಡುವಷ್ಟು ಹಣ ಎಲ್ಲಿಂದ ಬಂತು ಎಂಬುದು ಪ್ರಶ್ನೆಯಾಗಿದೆ. ಅಲ್ಲದೆ, ಅವರು ಎಂಟು ಕಂಪೆನಿಗಳನ್ನು ಹೊಂದಿದ್ದು, ಎಲ್ಲ ಕಂಪೆನಿಗಳು ಬೆಂಗಳೂರಿನ ವಿಳಾಸ ಹೊಂದಿವೆ. ಈ ಪ್ರಕರಣದ ಬಗ್ಗೆ ಸ್ವತಂತ್ರ ಸಂಸ್ಥೆಯೊಂದರಿಂದ ಉನ್ನತ ಮಟ್ಟದ ತನಿಖೆ ನಡೆಸುವಂತೆ ಪ್ರಧಾನಿ ಮೋದಿ, ಹಣಕಾಸು ಸಚಿವ ಅರುಣ್ ಜೆಟ್ಲಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಉಮೇಶ್ ಮೋಹನ್ ವಿದೇಶದಲ್ಲಿ ಕಂಪೆನಿ ಆರಂಭಿಸಿದ ಸಮಯದಲ್ಲಿ ಎಸ್ಸೆಂ ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದರು. ಆದುದರಿಂದ ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆಯಿಂದ ಮಾತ್ರ ಸತ್ಯ ಹೊರಗೆ ಬರಲು ಸಾಧ್ಯ ಎಂದು ಅವರು ನುಡಿದರು.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಸೇರಿದಂತೆ ದೇಶ-ವಿದೇಶಗಳ ಗಣ್ಯರ ಅಕ್ರಮ ಹೂಡಿಕೆ ವಿಷಯಗಳು ಈ ಹಿಂದೆಯೇ ಬಹಿರಂಗಗೊಂಡಿದ್ದವು, ಆದರೆ ಉಮೇಶ್ ಮೋಹನ್ ಅವರ ವಿಷಯ ಮಾತ್ರ ಗೊತ್ತಾಗದಿರುವುದು ಆಶ್ಚರ್ಯ ತಂದಿದೆ ಎಂದು ಹಿರೇಮಠ್ ಇದೇ ವೇಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News