ತೆರಿಗೆ ಸಂಗ್ರಹದಲ್ಲಿ ಇಲಾಖೆಗಳು ಗುರಿ ಮೀರಿ ಸಾಧನೆ ಮಾಡಲು ಸಿಎಂ ಸೂಚನೆ

Update: 2018-09-14 14:58 GMT

ಬೆಂಗಳೂರು, ಸೆ.14: ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಗುರಿ ಮೀರಿ ಸಾಧನೆ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ತೆರಿಗೆ ಸಂಗ್ರಹದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಸೂಚಿಸಿದರು. ಜಿಎಸ್‌ಟಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಪರಿಶೀಲನಾ ಕಾರ್ಯ ನಡೆಸುವಂತೆ ಸೂಚಿಸಿದ ಮುಖ್ಯಮಂತ್ರಿ, ಸರಕಾರದ ದೂರದೃಷ್ಟಿಯುಳ್ಳ ಯೋಜನೆಗಳು ಯಶಸ್ವಿಯಾಗಲು ತೆರಿಗೆ ಸಂಗ್ರಹ ಪರಿಣಾಮಕಾರಿಯಾಗಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ತೆರಿಗೆ ಇಲಾಖೆಗಳು ಕಾರ್ಯೋನ್ಮುಖವಾಗಿರುವುದು ಉತ್ತಮ ಬೆಳವಣಿಗೆ ಎಂದರು.

ತೆರಿಗೆ, ರಾಜಸ್ವ ಸಂಗ್ರಹದಲ್ಲಿ ಜನಸ್ನೇಹಿಯಾಗಿ, ಆದರೆ ಸರಕಾರಕ್ಕೆ ನಾಗರಿಕರು ಪಾವತಿಸಬೇಕಾದ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸುವಂತೆ ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 2018ನೆ ಸಾಲಿನ ಎಪ್ರಿಲ್ನಿಂದ ಆಗಸ್ಟ್‌ವರೆಗೆ ಒಟ್ಟು 28,537 ಕೋಟಿ ರೂ.ಗಳು ಸಂಗ್ರಹವಾಗಿದ್ದು, ಸೆಪ್ಟೆಂಬರ್‌ರಿಂದ ಮಾರ್ಚ್‌ವರೆಗೆ 38,383 ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗುವ ಅಂದಾಜಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ.18.7ರಷ್ಟು ಹೆಚ್ಚಳವಾಗಿದೆ.

ಅಬಕಾರಿ ಇಲಾಖೆಯಲ್ಲಿ 19,750 ಕೋಟಿ ರೂ.ಗಳ ವಾರ್ಷಿಕ ಗುರಿ ಇದ್ದು, ಆಗಸ್ಟ್ ತಿಂಗಳ ಅಂತ್ಯಕ್ಕೆ 8150.45 ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 996.73 ಕೋಟಿ ರೂ.ಗಳ ಹೆಚ್ಚಳವಾಗಿದೆ. ಸಾರಿಗೆ ಇಲಾಖೆಯಲ್ಲಿ ಎಪ್ರಿಲ್ ನಿಂದ ಆಗಸ್ಟ್ ವರೆಗೆ 2377.67 ಕೋಟಿ ರೂ.ಗಳಷ್ಟು ರಾಜಸ್ವ ಸಂಗ್ರಹವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ 161.15 ಕೋಟಿ ರೂ.ಗಳ ಹೆಚ್ಚಳವಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಲ್ಲಿ ರಾಜಸ್ವ ಸಂಗ್ರಹದಲ್ಲಿ 3 ನೇ ಸ್ಥಾನದಲ್ಲಿದೆ. ಆಗಸ್ಟ್ ವರೆಗೆ 4300 ಕೋಟಿ ರೂ.ಗಳ ಗುರಿಯಿದ್ದು, 4332 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ವಾರ್ಷಿಕ ಗುರಿ 3000 ಕೋಟಿ ರೂ.ಗಳಿದ್ದು, ಜುಲೈವರೆಗೆ ರಾಜಸ್ವ ಸಂಗ್ರಹಣೆ ಒಟ್ಟು 728.15 ಕೋಟಿ ರೂ.ಗಳಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಸಭೆಯಲ್ಲಿ ಮಾಹಿತಿ ನೀಡಿದರು. 

ಸಭೆಯಲ್ಲಿ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಡಾ.ಸುಬ್ರಹ್ಮಣ್ಯ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಹಾಗೂ ಸಂಬಂಧಪಟ್ಟ ಇಲಾಖೆಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News