ಸರಕಾರದ ಮೇಲಿನ ಹಿಡಿತ ಕಳೆದುಕೊಂಡಿರುವ ಸಿಎಂ: ಎನ್.ರವಿಕುಮಾರ್

Update: 2018-09-14 15:15 GMT

ಬೆಂಗಳೂರು, ಸೆ.14: ರಾಜ್ಯ ಸರಕಾರದ ಮೇಲಿನ ಹಿಡಿತವನ್ನು ಕಳೆದುಕೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ವಿರುದ್ಧ ಆರೋಪಿಸುವುದನ್ನೆ ಕಾಯಕವನ್ನಾಗಿಸಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಆಡಳಿತ ನಡೆಸುವುದನ್ನು ಬಿಟ್ಟು, ತಮ್ಮ ದಿನದ ಬಹುತೇಕ ಸಮಯವನ್ನು ಬಿಜೆಪಿ ಮತ್ತು ಅದರ ನಾಯಕರನ್ನು ನಿಂದಿಸುವುದಕ್ಕೆ ಮೀಸಲಿಟ್ಟಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವಿನ ಹೊಂದಾಣಿಕೆಯ ಕೊರತೆಯೇ ಪ್ರಸಕ್ತ ರಾಜಕಾರಣದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಲು ಕಾರಣ. ಆದರೆ, ಮುಖ್ಯಮಂತ್ರಿ ಎಲ್ಲ ಗೊಂದಲಗಳಿಗೂ ಬಿಜೆಪಿ ಕಾರಣ ಎನ್ನುವಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಮುಖ್ಯಮಂತ್ರಿಯ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ. ಸಮ್ಮಿಶ್ರ ಸರಕಾರದೊಳಗಿನ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯವಿಲ್ಲದ ಅವರು, ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಖಚಿತ ಮಾಹಿತಿ ಇದ್ದರೆ ನೇರವಾಗಿ ಕ್ರಮ ಜರುಗಿಸಬಹುದಾದ ಉನ್ನತ ಸ್ಥಾನದಲ್ಲಿ ಅವರಿದ್ದಾರೆ. ಆದರೆ, ಅವರೀಗ, ಸಾಮಾನ್ಯ ವ್ಯಕ್ತಿಯಂತೆ ಬೀದಿಯಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಓಡಾಡುತ್ತಿದ್ದಾರೆ. ಇದು ಅವರ ಹತಾಶೆಯ ಪ್ರತೀಕ. ಕಾಂಗ್ರೆಸ್ ಶಾಸಕರನ್ನು ನಿಭಾಯಿಸುವುದು ಮುಖ್ಯಮಂತ್ರಿಗೆ ಸವಾಲಿನ ಕೆಲಸವಾಗಿದೆ. ಅಷ್ಟೇ ಅಲ್ಲ, ಸ್ವತಃ ತಮ್ಮ ಪಕ್ಷದ ಶಾಸಕರ ಮೇಲೂ ಅವರು ನಿಯಂತ್ರಣ ಕಳೆದುಕೊಂಡಿರುವುದರ ಸೂಚನೆ ಇದು ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಿರುದ್ಧ ನಿರಾಧಾರವಾಗಿ ಮಾತನಾಡುವ ಮುಖ್ಯಮಂತ್ರಿ ವರ್ತನೆ ಖಂಡನಾರ್ಹ. ಇಂತಹ ಹೊಣೆಗೇಡಿ ವರ್ತನೆ ತೋರುವ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರವಿಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News