ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ 10 ಕೋಟಿ ರೂ.ದೇಣಿಗೆ: ಮುಖ್ಯಮಂತ್ರಿ

Update: 2018-09-14 15:32 GMT

ಬೆಂಗಳೂರು, ಸೆ.14: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಗುರು ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರು 10 ಕೋಟಿ ರೂ. ದೇಣಿಗೆಯನ್ನು ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪೈಕಿ 8 ಕೋಟಿ ರೂ.ಗಳನ್ನು ಅವರೇ ಗುರುತಿಸಿರುವ ಸಂತ್ರಸ್ತ ಕುಟುಂಬಗಳಿಗೆ ತಲಾ 65 ಸಾವಿರ ರೂ.ಗಳಂತೆ ಹಂಚಿಕೆ ಮಾಡಲಿದ್ದಾರೆ. ಇನ್ನುಳಿದ ಎರಡು ಕೋಟಿ ರೂ.ಗಳನ್ನು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ನೀಡುತ್ತಿದ್ದಾರೆ ಎಂದರು.

ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇನ್ನಿತರೆಡೆ ನೆರೆ ಹಾವಳಿಯಿಂದ ಸಂಭವಿಸಿದ ಹಾನಿ ಕುರಿತು ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಎರಡು ದಿನ ಅಧ್ಯಯನ ಮಾಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ದಕ್ಷಿಣ ಭಾರತದ ಎಲ್ಲ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಸೆ.18ರಂದು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣ ನೀಡಿರುವ ತೀರ್ಪಿನ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಕಾನೂನು ಹಾಗೂ ನೀರಾವರಿ ತಜ್ಞರ ಸಭೆ ಕರೆದಿದ್ದೇನೆ. ಅಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಸದ್ಯದಲ್ಲಿಯೇ ಸರ್ವಪಕ್ಷಗಳ ಮುಖಂಡರ ಸಭೆಯನ್ನು ಕರೆಯುವುದಾಗಿ ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News