ಬ್ಲಾಕ್‌ಮೇಲ್ ಮಾಡುವ ಜಾರಕಿಹೊಳಿ ಸಹೋದರರನ್ನು ಪಕ್ಷದಿಂದ ಹೊರ ಹಾಕಿ: ಶಂಕರ ಮುನವಳ್ಳಿ

Update: 2018-09-14 15:36 GMT

ಬೆಳಗಾವಿ, ಸೆ. 14: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಲು ಬ್ಲಾಕ್‌ಮೇಲ್ ಮಾಡುತ್ತಿರುವ ಜಾರಕಿಹೊಳಿ ಸಹೋದರರನ್ನು ಕೂಡಲೇ ಪಕ್ಷದಿಂದ ಹೊರ ಹಾಕಬೇಕು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಿನಾಲ್ಕು ಮಂದಿ ಶಾಸಕರೊಂದಿಗೆ ಪಕ್ಷ ತೊರೆಯುವ ಬೆದರಿಕೆಯೊಡ್ಡುತ್ತಿರುವವರನ್ನು ಇನ್ನೂ ಏಕೆ ಇಟ್ಟುಕೊಂಡಿದ್ದೀರಿ ? ಅವರನ್ನು ಕಿತ್ತುಹಾಕಲು ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೆ ಧೈರ್ಯ ಇಲ್ಲವೇ? ಎಂದು ಪ್ರಶ್ನಿಸಿದರು.

ಜಾರಕಿಹೊಳಿ ಸಹೋದರರ ಇಂತಹ ನಡೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಪಕ್ಷ ಸಂಘಟನೆಯಲ್ಲಿ ಹಿನ್ನಡೆಯಾಗುತ್ತದೆ. ಆದುದರಿಂದ ಕೂಡಲೇ ಅವರನ್ನು ಪಕ್ಷದ ಹೈಕಮಾಂಡ್ ನಿಯಂತ್ರಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪರಿಶ್ರಮದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಷ ಬೆಳೆಸಲು ಸಾಕಷ್ಟು ತ್ಯಾಗ ಮಾಡಿದ್ದಾರೆಂದ ಅವರು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಡಿ.ಕೆ.ಶಿವಕುಮಾರ್ ಬೆಳಗಾವಿಯಲ್ಲಿ ಪಕ್ಷ ಕಟ್ಟಲು ದುಡಿದಿದ್ದಾರೆ. ಅವರು ಜಿಲ್ಲೆಗೆ ಏಕೆ ಬರಬಾರದು? ಅವರಿಗೆ ಬರಬೇಡಿ ಎಂದು ಹೇಳಲು ಇವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕರ್ತರನ್ನು ಜಾರಕಿಹೊಳಿ ಸಹೋದರರು ಬೆದರಿಸಲು ಪ್ರಯತ್ನಿಸುತ್ತಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ನಾವು ಅವರ ಕೆಲಸಗಾರರೂ ಅಲ್ಲ. ಪಕ್ಷಕ್ಕಾಗಿ ದುಡಿದಿದ್ದೇವೆ ಅಷ್ಟೇ ಎಂದು ಶಂಕರ ಮುನವಳ್ಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News