ಮುಂದಿನ ವರ್ಷದಿಂದ ಪಿಒಪಿ ಗಣೇಶಮೂರ್ತಿ ನಿಷೇಧ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2018-09-14 16:14 GMT

ಬೆಂಗಳೂರು, ಸೆ.14: ಮುಂದಿನ ವರ್ಷದಿಂದ ಪಿಒಪಿ ಮತ್ತು ಬಣ್ಣದ ಗಣೇಶಮೂರ್ತಿಗಳನ್ನು ನಿಷೇಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಗಣೇಶ ಚತುರ್ಥಿಗೂ ಒಂದು ತಿಂಗಳು ಮುನ್ನವೇ ಸಾರ್ವಜನಿಕರಿಗೆ ಬಣ್ಣದ ಮತ್ತು ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡಬಾರದು. ಪರಿಸರ ಕಾಪಾಡುವ ಉದ್ದೇಶದಿಂದ ನಾಗರಿಕರು ಮಣ್ಣಿನ ಗಣಪಗಳನ್ನೇ ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಗುರುವಾರ ಒಂದೇ ದಿನದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.

ಬಿಬಿಎಂಪಿ ಮನವಿಗೆ ಸಾರ್ವಜನಿಕರು ಸ್ಪಂದಿಸದಿರುವುದು ವಿಷಾದನೀಯ. ಹೀಗಾಗಿ ಅನಿವಾರ್ಯವಾಗಿ ಮುಂದಿನ ವರ್ಷದಿಂದ ಪಿಒಪಿ ಗಣೇಶಮೂರ್ತಿಗಳನ್ನು ಬ್ಯಾನ್ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದಾಗ್ಯು ನಾಗರಿಕರು ಬಣ್ಣದ ಗಣಪಗಳನ್ನೇ ಪ್ರತಿಷ್ಠಾಪನೆ ಮಾಡಿದರೆ ಅಂತಹ ವಿಗ್ರಹಗಳನ್ನು ನಗರದ ಕೆರೆಗಳಲ್ಲಿ ಹಾಗೂ ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ಪರಿಸರ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇದಕ್ಕಾಗಿ ಸರಕಾರದೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಮುಂದಿನ ವರ್ಷವಾದರೂ ಪಿಒಪಿ ಗಣೇಶಮೂರ್ತಿಗಳನ್ನು ಖರೀದಿಸಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಗಣೇಶ ಚತುರ್ಥಿ ದಿನವಾದ ಗುರುವಾರ ಒಂದೇ ದಿನ ನಗರದ ಕೆರೆ ಮತ್ತು ಮೊಬೈಲ್ ಟ್ಯಾಂಕ್‌ಗಳಲ್ಲಿ ಸರಿಸುಮಾರು 50ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಯಡಿಯೂರು ಕೆರೆ ಒಂದರಲ್ಲಿಯೆ ಸುಮಾರು 6ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶಮೂರ್ತಿ ವಿಸಜಿಸರ್ಲಾಗಿದೆ ಎಂದು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News