ಸರಕಾರಿ ಅಧಿಕಾರಿಗಳಿಂದ ವಾಹನಗಳ ದುರ್ಬಳಕೆ: ಆರೋಪ

Update: 2018-09-14 16:30 GMT

ಬೆಂಗಳೂರು, ಸೆ.14: ಐಎಎಸ್‌ನಿಂದ ಹಿಡಿದು ಕೆಳಹಂತದ ಅಧಿಕಾರಿಗಳವರೆಗೂ ಸರಕಾರದ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸರಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟ ಆರೋಪಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ.ಎನ್.ವೇಣುಗೋಪಾಲ್, ಸರಕಾರಿ ಅಧಿಕಾರಿಗಳ ವಾಹನ ದುರ್ಬಳಕೆಯಿಂದ ವರ್ಷಕ್ಕೆ 3ಸಾವಿರ ಕೋಟಿಯಷ್ಟು ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಶೇ.25ರಷ್ಟು ಸರಕಾರದ ಕೆಲಸಕ್ಕೆ, ಶೇ.75ರಷ್ಟು ಸ್ವಂತ ಕೆಲಸಕ್ಕೆ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನೌಕರರನ್ನು ಸರಕಾರದ ಕೆಲಸದ ವೇಳೆಯಲ್ಲಿ (ಬೆಳಗ್ಗೆ 9.30 ರಿಂದ ಸಂಜೆ 5.30) ಮಾತ್ರ ಚಾಲಕರನ್ನು ಬಳಸಿಕೊಳ್ಳದೆ, ರಾತ್ರಿ 10 ವರೆಗೂ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಮನೆಗೂ ಹೋಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರಾಜ್ಯದಾದ್ಯಂತ 60 ಸಾವಿರ ಹೊರಗುತ್ತಿಗೆ ವಾಹನ ಚಾಲಕರಿದ್ದಾರೆ. ಕಡಿಮೆ ವೇತನವನ್ನು ಚಾಲಕರಿಗೆ ಪಾವತಿಸುತ್ತಾ ಬ್ಯಾಂಕ್ ಖಾತೆಗಳ ಮೂಲಕವಾಗಿ ವೇತನವನ್ನು ವಿತರಿಸದೆ ನಗದು ರೂಪದಲ್ಲಿ ಮಾಸಿಕ ಕೇವಲ 10 ಸಾವಿರ ರೂ.ಗಳನ್ನು ಮಾತ್ರ ನೀಡಿ ಮಿಕ್ಕ 8 ಸಾವಿರ ರೂ.ಗಳನ್ನು ಗುತ್ತಿಗೆದಾರರು ಹಾಗೂ ವೇತನ ವಿತರಣಾ ಅಧಿಕಾರಿ ಹಂಚಿಕೊಂಡು ವಂಚಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ತಿಂಗಳಿಗೆ 18 ಸಾವಿರ ರೂ. ನೀಡಬೇಕು. ಮಧ್ಯವರ್ತಿಗಳ ಹಾವಳಿಯಿಂದ 8-10 ಸಾವಿರ ರೂ. ಸಿಗುತ್ತಿದೆ ಎಂದು ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು.

ಹೈಕೋರ್ಟ್ ಆದೇಶದಂತೆ ಅವರನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ. ಆದರೂ, ಕೆಲಸದಿಂದ ವಜಾ ಮಾಡುತ್ತಿದ್ದಾರೆ. ಸರಕಾರ ಈ ಬಗ್ಗೆ ಗಮನಹರಿಸಬೇಕಿದೆ. ಚಾಲಕರಿಗೆ ಆಗುತ್ತಿರುವ ಅನ್ಯಾಯಗಳಿಗೆ ಪರಿಹಾರ ನೀಡಬೇಕಿದೆ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News