ಬೀದಿ ನಾಯಿಗಳ ಹಾವಳಿ: ಬಿಬಿಎಂಪಿ ಆಯುಕ್ತರ ವಿರುದ್ಧ ಲೋಕಾಗೆ ದೂರು

Update: 2018-09-14 16:44 GMT

ಬೆಂಗಳೂರು, ಸೆ.14: ನಗರದೆಲ್ಲೆಡೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ

ಶುಕ್ರವಾರ ನಗರದ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ ಲೋಕ್ ತಾಂತ್ರಿಕ್ ಜನತಾದಳ ಕಾರ್ಯಕರ್ತರು, ದೂರು ಸಲ್ಲಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದರು.

ಈ ಕುರಿತು ಎಲ್ಜೆಡಿ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಮಾತನಾಡಿ, ಬಿಬಿಎಂಪಿ ಪಶುಪಾಲನಾ ವಿಭಾಗ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಇದೇ ಕಾರಣಕ್ಕಾಗಿ 2017-18ನೇ ಸಾಲಿನ ಬಿಬಿಎಂಪಿ ಬಜೆಟ್ನಲ್ಲಿ 3.5 ಕೋಟಿ ರೂ. ಹಣ ವೆಚ್ಚ ಮಾಡಿದೆ ಎಂದಿದೆ. ಅದೇ ರೀತಿ, ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ. ಹಣ ಖರ್ಚು ಮಾಡಿದರೂ ಯಾವುದೇ ನಿಯಂತ್ರಣವಾಗಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗಳು ಬೀದಿ ನಾಯಿಗಳ ಸಂತಾನಹರಣ ಮಾಡುವುದರ ಮೂಲಕ ನಾಯಿಗಳ ಸಂಖ್ಯೆ ಕಡಿಮೆಗೊಳಿಸುತ್ತಿದ್ದೇವೆ ಎಂಬ ಸಬೂಬು ನೀಡುತ್ತಾರೆ. ಆದರೆ, ಬೀದಿ ನಾಯಿಗಳ ಸಂಖ್ಯೆ ಏರಿಕೆ ಆಗುತ್ತಿದೆ. 2009ರಿಂದ ಇದುವರೆಗೂ ಒಂದು ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಹೇಳಿದರು.

ಪ್ರತಿ 5 ವರ್ಷಕ್ಕೂಮ್ಮೆ ಪಾಲಿಕೆಯ ಪಶುಪಾಲನಾ ವಿಭಾಗ ನಾಯಿಗಳನ್ನು ಹಿಡಿದು ನಾಯಿ ಗಣತಿಗಾಗಿ ಅವುಗಳ ಕಿವಿಯ ಭಾಗದಲ್ಲಿ ಗುರುತು ಹಾಕುವುದು ವಾಡಿಕೆ. ದುರಂತ ಎಂದರೆ, 2012ರಲ್ಲಿ ಈ ರೀತಿಯ ಗಣತಿ ಮಾಡಿದಾಗ ಬೀದಿನಾಯಿಗಳ ಸಂಖ್ಯೆ 1,85,454 ಇತ್ತು. ತದನಂತರ ಯಾವುದೇ ರೀತಿಯ ಗಣತಿ ನಡೆದಿಲ್ಲ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿಗಳ ದಾಳಿ ಪ್ರಕರಣಗಳಿಗೆ ನೇರವಾಗಿ ಅಧಿಕಾರ ವರ್ಗವೇ ಕಾರಣವಾಗಿದೆ. ಜೊತೆಗೆ, ಇದಕ್ಕಾಗಿಯೇ ಮೀಸಲಿಟ್ಟಿದ್ದ ಹಣ ದುರ್ಬಳಕೆ ಯಿಂದಾಗಿ ಇಂತಹ ದುರ್ಘಟನೆಗಳು ಮರುಕಳಿಸುತ್ತಿವೆ. ಹೀಗಾಗಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮತ್ತು ಹಣ ಲೂಟಿ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ನಾಗೇಶ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News