ಹೈನುಗಾರಿಕೆ ಅಭಿವೃದ್ಧಿ ಯೋಜನೆಗಳಿಗೆ ನಬಾರ್ಡ್‌ನಿಂದ 440 ಕೋಟಿ ರೂ.ನೆರವು

Update: 2018-09-14 16:50 GMT

ಬೆಂಗಳೂರು, ಸೆ. 14: ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ಜಾರಿಗೆ ತರುತ್ತಿರುವ ಐದು ಯೋಜನೆಗಳಿಗೆ ನಬಾರ್ಡ್‌ನಿಂದ 440 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಹೊಸದಿಲ್ಲಿಯಲ್ಲಿ ನಡೆದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಾ ಮೋಹನ್ ಸಿಂಗ್, ಡೈರಿ ಪ್ರೊಸೆಸಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಫಂಡ್ (ಡಿಐಡಿಎಫ್)ನ್ನು ಉದ್ಘಾಟನೆ ಮಾಡಿ ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಮೊದಲ ಕಂತಿನ 440 ಕೋಟಿ ರೂ.ಹಣದ ಚೆಕ್ಕನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ಅಧ್ಯಕ್ಷ ದಿಲೀಪ್ ರಾತ್ ಅವರಿಗೆ ಹಸ್ತಾಂತರಿಸಿದರು.

ಈ ಹಣವನ್ನು ಕರ್ನಾಟಕದ ಐದು ಮತ್ತು ಪಂಜಾಬ್‌ನ ಒಂದು ಹಾಲು ಉತ್ಪಾದನಾ ಸಂಸ್ಥೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ. ರಾಜ್ಯದ ಮೈಸೂರಿನ ಮೈಸೂರು, ಉಡುಪಿ, ಕೋಲಾರ-ಚಿಕ್ಕಬಳ್ಳಾಪುರ(ಕೋಲಾರ), ರಾಮನಗರ ಮತ್ತು ಚನ್ನರಾಯಪಟ್ಟಣ ಹಾಲು ಒಕ್ಕೂಟ ಹಾಗೂ ಪಂಜಾಬಿನ ರೋಪರ್‌ನ ರೋಪರ್ ಹಾಲು ಒಕ್ಕೂಟದಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಈ ಹಣವನ್ನು ವೆಚ್ಚ ಮಾಡಲಾಗುತ್ತದೆ.

ಕರ್ನಾಟಕ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಕೈಗೆತ್ತಿಕೊಂಡಿರುವ ಒಟ್ಟು 1148.58 ಕೋಟಿ ರೂ.ಗಳ 15ಯೋಜನೆಗಳ ಪೈಕಿ ನಬಾರ್ಡ್ ಇದುವರೆಗೆ 843.81 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಪ್ರಸಕ್ತ ಹಣಕಾಸು ಸಾಲಿನ ಅಂತ್ಯದ ವೇಳೆಗೆ ಈ ಮಂಜೂರಾತಿ ಪ್ರಮಾಣ 3800 ಕೋಟಿ ರೂ.ಗಳಾಗಲಿದೆ. ಎಂದು ತಿಳಿಸಲಾಗಿದೆ.

ಇದೇ ವೇಳೆ ಮಾತನಾಡಿದ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ದೇಶದಲ್ಲಿ ಹೈನುಗಾರಿಕೆ ಅತ್ಯುತ್ತಮವಾಗಿ ಸಾಗುತ್ತಿದ್ದು, ತಲಾ ಒಬ್ಬರಿಗೆ ಪ್ರತಿದಿನ 377ಗ್ರಾಂ ಹಾಲು ಲಭ್ಯವಾಗುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರ ಆದಾಯವನ್ನು ಹೈನುಗಾರಿಕೆ ಹೆಚ್ಚಿಸುತ್ತಿದೆ. ಈ ದಿಸೆಯಲ್ಲಿ ಡಿಐಡಿಎಫ್ 50 ಸಾವಿರ ಗ್ರಾಮಗಳ 95 ಲಕ್ಷಕ್ಕೂ ಅಧಿಕ ಡೈರಿ ರೈತರಿಗೆ ಗಾಂವ್, ಗರೀಬ್ ಮತ್ತು ಕಿಸಾನ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ನೆರವಿನ ಹಸ್ತ ಚಾಚುತ್ತಿದೆ ಎಂದರು.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ ಮಾತನಾಡಿ, ಸಹಕಾರ ಕ್ಷೇತ್ರ ನಮ್ಮ ದೇಶದ ಹೆಮ್ಮೆ. ಈ ಕ್ಷೇತ್ರ ದೇಶದ ಎಲ್ಲ್ಲ ವರ್ಗದ ಜನರನ್ನು ಒಟ್ಟುಗೂಡಿಸುತ್ತದೆ. ಅದರಲ್ಲೂ ಪ್ರಮುಖವಾಗಿ ರೈತರನ್ನು ಒಟ್ಟುಗೂಡಿಸುತ್ತಿದ್ದು, ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News