ಬುಡಕಟ್ಟು ಸಮುದಾಯ ಅರಣ್ಯ ಹಕ್ಕು ಕಾಯ್ದೆ ಸದುಪಯೋಗ ಪಡೆಯಬೇಕು: ಲಕ್ಷ್ಮಿ ನಾರಾಯಣ

Update: 2018-09-14 16:57 GMT

ಬೆಂಗಳೂರು, ಸೆ. 14: ರಾಜ್ಯದಲ್ಲಿರುವ ಬುಡಕಟ್ಟು ಸಮುದಾಯಗಳು ಅರಣ್ಯದಲ್ಲಿ ಎರಡು ಎಕರೆ ಉಳುಮೆ ಮಾಡಿದರೆ ಸರಕಾರ ಅವರ ಹೆಸರಿಗೆ ಮಾಡಿಕೊಡುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿ ನಾರಾಯಣ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಮಾಸ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಬುಡಕಟ್ಟು ಜನರು ಎಕರೆ ಜಮೀನು ಸಾಗುವಳಿ ಮಾಡಿದ್ದರೆ, ಆ ಜಮೀನನ್ನು ಸರಕಾರ ಅವರ ಹೆಸರಿಗೆ ಮಾಡಿಕೊಡುತ್ತದೆ. ಬುಡಕಟ್ಟು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈಗಾಗಲೇ ಸರಕಾರ 46 ಸಾವಿರ ಎಕರೆ ಜಮೀನು ಬುಡಕಟ್ಟು ಜನರಿಗೆ ನೀಡಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಆದಿವಾಸಿ ಮತ್ತು ಬುಡಕಟ್ಟು ವರ್ಗದ ಜನರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಲು ಸಾಕಷ್ಟು ಮಾರ್ಗಗಳಿವೆ. ಆದರೆ, ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರದ ಬಗ್ಗೆ ಸರಿಯಾದ ಮಾಹಿತಿಯ ಕೊರತೆ ಇದೆ. ಬುಡಕಟ್ಟು ಜನರು 6ತಿಂಗಳು ತಮ್ಮ ಆಹಾರ ಸಂಗ್ರಹಿಸಿಟ್ಟು ಕೊಳ್ಳುವ ಪರಿಸ್ಥಿತಿ ಇದೆ. ಸರಕಾರ ಅವರಿಗೆ ಆರು ತಿಂಗಳಿಗೆ ಆಗುವಷ್ಟು ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಬುಡಕಟ್ಟು ಜನರಿಗೆ ಸರಕಾರ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ನೀಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಬುಡಕಟ್ಟು ಜನರು ಸಂಗ್ರಹಿಸಿರುವ ಕಾಡು ಉತ್ಪನ್ನಗಳನ್ನು ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಮಾರುಕಟ್ಟೆಯ ಸಮಸ್ಯೆ ಇದೆ. ಅವರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಬುಡಕಟ್ಟು ನಿರ್ದೇಶನಾಲಯದಿಂದ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಬುಡಕಟ್ಟು ಮಕ್ಕಳನ್ನು ಏಕಲವ್ಯ, ರಾಣಿಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸೇರಿಸಿದರೆ ಸರಕಾರ ಎಲ್ಲ ರೀತಿಯ ಸೌಕರ್ಯ ನೀಡುತ್ತದೆ. ಬುಡಕಟ್ಟು ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಆಸಕ್ತರಿರುತ್ತಾರೆ. ಅಂತ ಮಕ್ಕಳಿಗೆ ಸರಕಾರ ಪ್ರೋತ್ಸಾಹ ನೀಡುತ್ತದೆ. ಈ ಬಗ್ಗೆ ಬುಡಕಟ್ಟು ನಿರ್ದೇಶನಾಲಯ ಪ್ರಯತ್ನ ನಡೆಸಬೇಕು ಎಂದರು.

ಬುಡಕಟ್ಟು ಜನರ ಆರೋಗ್ಯಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡಿದೆ. ಅವರ ಆರೋಗ್ಯ ಚಿಕಿತ್ಸೆಗೆ ಮೊಬೈಲ್ ಚಿಕಿತ್ಸಾ ಕೇಂದ್ರದ ಮೂಲಕ ಚಿಕಿತ್ಸೆ ಕೊಡಲಾಗುತ್ತದೆ ಎಂದ ಅವರು, ಬುಡಕಟ್ಟು ಜನರಿಗೆ ಏನಾದರೂ ಸಮಸ್ಯೆ ಇದ್ದರೆ ದೂರು ನೀಡಿದರೂ ಸರಕಾರ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮಹಿಳೆಯರ ಸಮಸ್ಯೆಗಳ ಬಗ್ಗೆ ಬುಡಕಟ್ಟು ಜನರು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅವರು ಇದೇ ವೇಳೆ ಸೂಚಿಸಿದರು.

ಬುಡಕಟ್ಟು ವ್ಯವಹಾರ ನಿರ್ದೇಶನಾಲಯದ ನಿರ್ದೇಶಕ ಸಂಗಪ್ಪ, ವಸತಿ ಶಾಲೆಗಳ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಜಿ.ಬಿ.ನಂದಕುಮಾರ್, ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ.ಟಿ. ಬಸನಗೌಡ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕಿ ಡಾ.ಆಶಾ ಬೆಣಕಪ್ಪ, ಸಿಎಫ್‌ಟಿಆರ್‌ಐ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಜ್ಯೋತಿ, ತಾಂತ್ರಿಕ ಅಧಿಕಾರಿ ಚೇತನಾ, ಎಚ್.ಡಿ.ಗೃಹ ವಿಜ್ಞಾನ ಸಂಸ್ಥೆಯ ಆಹಾರ ಮತ್ತು ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಉಷಾದೇವಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News