ನಾಮ ಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ ವಿಚಾರ: ವಿವರಣೆ ನೀಡಲು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

Update: 2018-09-14 17:15 GMT

ಬೆಂಗಳೂರು, ಸೆ.14: ನಗರ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳು ಅಳವಡಿಸುವ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಹೊರಡಿಸಿರುವ ಸುತ್ತೋಲೆ ವಿವಾದವಾಗಿ ಮಾರ್ಪಟ್ಟಿದೆ.

ಸುತ್ತೋಲೆಯನ್ನು ರದ್ದುಪಡಿಸುವಂತೆ ಕೋರಿ ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘ ಹಾಗೂ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರೀಟೇಲ್ ಲಿಮಿಟೆಡ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ.

ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಜಿ. ನರೇಂದರ್ ಅವರಿದ್ದ ಪೀಠ, ಯಾವ ಕಾನೂನಿನ ಆಧಾರದ ಮೇಲೆ ಇಂತಹ ಸುತ್ತೋಲೆ ಹೊರಡಿಸಿದ್ದೀರಿ ಎಂದು ವಿವರಣೆ ನೀಡುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ. ಇದೇ ವೇಳೆ ಬಿಬಿಎಂಪಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಭಾಷೆಯನ್ನು ಪ್ರಚುರಪಡಿಸಲು ವಾಣಿಜ್ಯ ಸಂಸ್ಥೆಗಳ ಮೇಲೆ ಒತ್ತಡ ಹೇರುವುದು ಸರಿಯಾದ ವಿಧಾನ ಅಲ್ಲ ಎಂದು ಟೀಕಿಸಿದೆ.

ಅಲ್ಲದೆ, ಭಾಷೆಯು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅದನ್ನು ಪ್ರಚುರಪಡಿಸಬೇಕಿದ್ದರೆ ಶಾಲಾ ಕಾಲೇಜುಗಳ ಮೂಲಕ ಭಾಷೆಯ ಶ್ರೀಮಂತಿಕೆಯನ್ನು ತಿಳಿಯಪಡಿಸಿ. ಅದನ್ನು ಬಿಟ್ಟು ವಾಣಿಜ್ಯ ಸಂಸ್ಥೆಗಳ ಮೇಲೆ ಏಕೆ ಒತ್ತಡ ಹೇರುತ್ತೀರಿ ಎಂದು ಸಲಹೆ ನೀಡಿದೆ. ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದೆ. ಅದರಂತೆ ಬಿಬಿಎಂಪಿಯು ಸಹ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿಕೊಂಡಿದೆ. ಹೀಗಾಗಿ ಪಾಲಿಕೆ ವತಿಯಿಂದ ಕೈಗೊಳ್ಳುವ ಯಾವುದೇ ಕಾಮಗಾರಿಗಳ ಬಗ್ಗೆ ಕಾಮಗಾರಿ ಮುಗಿದ ನಂತರ ಅದರ ವಿವರಗಳನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪ್ರಕಟಿಸಬೇಕು.

ಅಲ್ಲದೆ, ಪಾಲಿಕೆಯ ಆರೋಗ್ಯ ವಿಭಾಗದಿಂದ ವಾಣಿಜ್ಯ ಪರವಾನಗಿ ನೀಡುವಾಗ ಆಯಾ ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗಳು, ಕಂಪೆನಿಗಳು ಹಾಗೂ ಪರವಾನಗಿ ಪಡೆದಿರುವ ಇತರೆ ವ್ಯಾಪಾರಿಗಳು ತಮ್ಮ ಶಾಖೆಯ ಮುಂದೆ ಅಳವಡಿಸುವ ಮತ್ತು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಪ್ರಧಾನವಾಗಿ ಇರುವುದು ಕಡ್ಡಾಯ. ಅಂದರೆ ಶೇಕಡಾ 60 ರಷ್ಟು ಕನ್ನಡ ಪದಗಳು ಬಳಸಬೇಕಿದ್ದು, ಸ್ಪಷ್ಟವಾಗಿ ಎದ್ದು ಕಾಣುವಂತಿರಬೇಕು. ಶೇಕಡಾ 40 ರಷ್ಟು ಅನ್ಯ ಭಾಷೆ ಪದಗಳನ್ನು ಬಳಸಬಹುದು. ಒಂದು ವೇಳೆ ಕನ್ನಡ ಅಗ್ರಸ್ಥಾನದಲ್ಲಿ ಇರದಿದ್ದರೆ ಆ ವಾಣಿಜ್ಯ ಸಂಸ್ಥೆಯ ಪರವಾನಗಿ ರದ್ದು ಪಡಿಸುವುದಾಗಿ ಸೂಚಿಸಿ ಬಿಬಿಎಂಪಿ 2017 ರ ಜು.27 ರಂದು ಸುತ್ತೋಲೆ ಹೊರಡಿಸಿತ್ತು.

ಈ ಸುತ್ತೋಲೆ ಆಧರಿಸಿ ಅರ್ಜಿದಾರರಿಗೆ ಬಿಬಿಎಂಪಿ ಕಳೆದ ಆ.10 ರಂದು ನೋಟಿಸ್ ಜಾರಿ ಮಾಡಿತ್ತು. ಮುಂದಿನ ಏಳು ದಿನಗಳಲ್ಲಿ ಸುತ್ತೋಲೆಯಂತೆ ನಾಮಫಲಕಗಳಲ್ಲಿ ಕನ್ನಡ ಅಳವಡಿಸಬೇಕು ಎಂದು ಸೂಚಿಸಿತ್ತು. ತಪ್ಪಿದ್ದಲ್ಲಿ ಪರವಾನಗಿ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು ಬಿಬಿಎಂಪಿ ಸುತ್ತೋಲೆ ಕಾನೂನು ಬಾಹಿರ ಆಗಿದೆ, ನ್ಯಾಯ ಸಮ್ಮತವಾಗಿಲ್ಲ. ಹೀಗಾಗಿ, ಬಿಬಿಎಂಪಿ ಸುತ್ತೋಲೆ ಹಾಗೂ ತಮಗೆ ಜಾರಿ ಮಾಡಿರುವ ನೋಟಿಸ್ ರದ್ದು ಗೊಳಿಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News