ಮಲ್ಯಾ ವಿದೇಶ ಪಲಾಯನದಲ್ಲಿ ಸಿಬಿಐ ಕೈಚಳಕ: ವರದಿ

Update: 2018-09-14 18:05 GMT

ಹೊಸದಿಲ್ಲಿ, ಸೆ.14: ಭಾರತೀಯ ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ಹಣ ಬಾಕಿಯಿರಿಸಿ ವಿದೇಶಕ್ಕೆ ಪಲಾಯನ ಮಾಡಿರುವ ದೇಶಭ್ರಷ್ಟ ಮದ್ಯದ ದೊರೆ ವಿಜಯ್ ಮಲ್ಯಾ ವಿದೇಶಕ್ಕೆ ಪರಾರಿಯಾಗುವಲ್ಲಿ ಸಿಬಿಐ ಪ್ರಮುಖ ಪಾತ್ರವಹಿಸಿತ್ತು. ಆದರೆ ಈ ಬಗ್ಗೆ ತನಿಖಾ ಸಂಸ್ಥೆಯ ಅಂದಿನ ಮುಖ್ಯಸ್ಥರಾಗಿದ್ದ ಅನಿಲ್ ಸಿನ್ಹಾರಿಗೆ ಮಾಹಿತಿ ಇರಲಿಲ್ಲ ಎಂದು ಆಂಗ್ಲ ಸುದ್ದಿ ಮಾಧ್ಯಮ ವರದಿ ಮಾಡಿದೆ.

2016ರ ಮಾರ್ಚ್ 3ರಂದು ನಡೆದ ಸಿಬಿಐ ಹಾಗೂ ಬ್ಯಾಂಕರ್‌ಗಳ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಕೂಡಾ ಭಾಗವಹಿಸಿದ್ದರು. ಕೆಲವೇ ಗಂಟೆಗಳ ಹಿಂದೆ ಮಲ್ಯಾ ದೇಶ ತೊರೆದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲ ಬ್ಯಾಂಕರ್‌ಗಳೂ ಸಿಬಿಐ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಲ್ಯಾ ವಿರುದ್ಧ 2015ರ ಜುಲೈಯಲ್ಲೇ ಎಫ್‌ಐಆರ್ ದಾಖಲಾಗಿರುವಾಗ ಅವರನ್ನು ಹೇಗೆ ದೇಶ ತೊರೆಯಲು ಅವಕಾಶ ನೀಡಿದಿರಿ ಎಂದು ಎಲ್ಲರೂ ಸಿನ್ಹಾರನ್ನು ಪ್ರಶ್ನೆಸಿದ್ದರು ಎಂದು ವರದಿ ತಿಳಿಸಿದೆ.

ಮಲ್ಯಾ ವಿರುದ್ಧ ಮೊದಲ ನೋಟಿಸ್ 2015ರ ಅಕ್ಟೋಬರ್ 16ರಂದು ಜಾರಿ ಮಾಡಲಾಗಿತ್ತು. ಆದರೆ ಅದನ್ನು ನವೆಂಬರ್ 24ರಂದು ಬದಲಾಯಿಸಲಾಗಿತ್ತು. ಈ ಬದಲಾವಣೆಯನ್ನು ಸಿಬಿಐಯ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರ ಮಟ್ಟದಲ್ಲಿ ಮಾಡಲಾಗಿದ್ದು ಪೊಲೀಸ್ ವರಿಷ್ಠಾಧಿಕಾರಿ ಹರ್ಶಿತ ಅಟ್ಟಲುರಿ ಮತ್ತು ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ಸುಮನ್ ಕುಮಾರ್ ಅವರಿಗೆ ಕಳುಹಿಸಲಾಗಿತ್ತು.

60 ಕೋಟಿ ರೂ. ಮೊತ್ತದ ಹಗರಣದಲ್ಲಿ ಹೊರಡಿಸಲಾಗುವ ನೋಟಿಸ್‌ಗಳನ್ನು ಬದಲಾಯಿಸುವ ಅಧಿಕಾರ ಮಾತ್ರ ಜಂಟಿ ನಿರ್ದೇಶಕರಿಗೆ ಇರುತ್ತದೆ ಎಂದು ನಿಯಮ ಹೇಳುತ್ತದೆ. ಆದರೆ ಮಲ್ಯಾ ವಿಷಯದಲ್ಲಿ 9,000 ಕೋಟಿ ರೂ. ಮೊತ್ತದ ಹಗರಣವಿದ್ದರೂ ಎ.ಕೆ.ಶರ್ಮಾ, ಮಲ್ಯಾ ವಿರುದ್ಧದ ಬಂಧನ ನೋಟಿಸನ್ನು ಮಾಹಿತಿ ನೋಟಿಸ್ ಆಗಿ ಮಾರ್ಪಡಿಸಿದ್ದರು ಎಂದು ಸುದ್ದಿ ಮಾಧ್ಯಮದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News