ಇಂಗ್ಲಿಷ್ ಭಾಷೆ ಬ್ರಿಟಿಷರು ಭಾರತದಲ್ಲಿ ಬಿಟ್ಟುಹೋದ ರೋಗ: ವೆಂಕಯ್ಯ ನಾಯ್ಡು

Update: 2018-09-15 03:53 GMT

ಹೊಸದಿಲ್ಲಿ, ಸೆ. 15: ಇಂಗ್ಲಿಷ್ ಭಾಷೆ ಬ್ರಿಟಿಷರು ಭಾರತದಲ್ಲಿ ಬಿಟ್ಟುಹೋದ ರೋಗ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬಣ್ಣಿಸಿದ್ದಾರೆ. ಹಿಂದಿ ಭಾಷೆ ಭಾರತದಲ್ಲಿ "ಸಾಮಾಜಿಕ, ರಾಜಕೀಯ ಮತ್ತು ಭಾಷಾ ಏಕತೆಯ ಸಂಕೇತ" ಎಂದು ಅವರು ವಿಶ್ಲೇಷಿಸಿದ್ದಾರೆ.

ಇಲ್ಲಿನ ವಿಜ್ಞಾನ ಭವನದಲ್ಲಿ ನಡೆದ ಹಿಂದಿ ದಿವಸ್ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, "ಯಹ್ ಬಿಮಾರಿ ಜೊ ಅಂಗ್ರೇಜಿವಾಲಾ ಛೋಡ್ ಕರ್ ಗಯಾ, ಇಸ್ ಬಿಮಾರಿ ಸೇ ಹಮೀನ್ ಮುಕ್ತ್ ಕರ್ನಾ ಚಾಹಿಯೇ (ಇದು ಇಂಗ್ಲಿಷರು ಬಿಟ್ಟುಹೋದ ರೋಗ. ನಾವೇ ಈ ರೋಗದಿಂದ ಗುಣಮುಖರಾಗಬೇಕು) ಎಂದು ಹೇಳಿದರು.

ಸಂವಿಧಾನವನ್ನು ರೂಪಿಸಿದ ಸಂವಿಧಾನ ರಚನಾ ಸಮಿತಿ ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ 1949ರ ಸೆಪ್ಟೆಂಬರ್ 14ರಂದು ಆಂಗೀಕರಿಸಿದೆ ಎಂದು ವಿವರಿಸಿದರು. ಆದರೆ ನಾವು ಸಂವಿಧಾನ ರಚನಾ ಸಮಿತಿಯ ಆಶಯವನ್ನು ಈಡೇರಿಸಿದ್ದೇವೆಯೇ ಎಂದು ಅವರು ಪ್ರಶ್ನಿಸಿದರು. ಭಾರತೀಯರು ಮಾತೃಭಾಷೆಗೆ ಉತ್ತೇಜನ ನೀಡುವುದೂ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಆದರೆ ಕುತೂಹಲದ ವಿಚಾರವೆಂದರೆ ಸಂವಿಧಾನ ರಚನಾ ಸಮಿತಿ ಇಂಗ್ಲಿಷ್ ಭಾಷೆಯನ್ನು ಕೂಡಾ ಅಧಿಕೃತ ಭಾಷೆಯಾಗಿ ಅದೇ ಸಭೆಯಲ್ಲಿ ಮಾನ್ಯ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News