×
Ad

ಬೆಂಗಳೂರು: ಅಬ್ಬರದ ಮಳೆಗೆ ಹಲವು ಮರಗಳು ಧರೆಗೆ; ಇನ್ನೂ 3 ದಿನ ಮಳೆ ಸಾಧ್ಯತೆ

Update: 2018-09-15 21:39 IST

ಬೆಂಗಳೂರು, ಸೆ.15: ಕಳೆದ ಎರಡು ದಿನದಿಂದ ನಗರಾದ್ಯಂತ ಅಬ್ಬರದ ಮಳೆಯಾಗುತ್ತಿದ್ದು, ಶನಿವಾರ ಸುರಿದ ಮಳೆಗೆ ಮೂರಕ್ಕೂ ಅಧಿಕ ಮರಗಳು ಧರೆಗುರುಳಿವೆ. ಹಲವೆಡೆ ನೀರು ಶೇಖರಣೆ, ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಜಾಮ್‌ನಿಂದ ಸಾರ್ವಜನಿರು ಪರದಾಡಬೇಕಾಯಿತು.

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಾಮರಾಜಪೇಟೆಯ ಉಮಾ ಚಲನಚಿತ್ರ ಮಂದಿರ ಬಳಿ, ಜೆ.ಸಿ.ರಸ್ತೆ, ರಾಜರಾಜೇಶ್ವರಿನಗರದಲ್ಲಿ ತಲಾ ಒಂದೊಂದು ಮರ ಧರೆಗುರುಳಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಲ್ಲ. ಪಾಲಿಕೆ ಅರಣ್ಯ ಘಟಕದ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ಧಾವಿಸಿ ಬಿದ್ದಿರುವ ಮರಗಳನ್ನು ತೆರವು ಮಾಡಿದರು.

ನಗರಾದ್ಯಂತ ಇನ್ನೂ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಾಜಿನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೊರೇಷನ್, ಕೆ.ಆರ್. ಮಾರುಕಟ್ಟೆ, ಯಲಹಂಕ, ಹಲಸೂರು, ಯಶವಂತಪುರ, ರಾಜರಾಜೇಶ್ವರಿನಗರ, ಲಾಲ್‌ಭಾಗ್, ವಿಜಯನಗರ, ಉತ್ತರಹಳ್ಳಿ, ಎಚ್‌ಎಸ್‌ಆರ್ ಬಡಾವಣೆ, ಕೆಂಗೇರಿ, ನಾಗರಭಾವಿ, ಅಗ್ರಹಾರ ದಾಸರಹಳ್ಳಿ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ.

ಓಕಳೀಪುರ, ಕೆಂಪೇಗೌಡ ಬಸ್ ನಿಲ್ದಾಣ, ಶೇಷಾದ್ರಿಪುರ ರಸ್ತೆ ಸೇರಿ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಮಳೆ ನೀರಿನ ಹರಿವಿಗೆ ಸರಿಯಾದ ವ್ಯವಸ್ಥೆಗಳಿಲ್ಲದೆ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಯಿತು.

ಸಾರ್ವಜನಿಕರ ಪರದಾಟ: ರಾಜಧಾನಿಯಲ್ಲಿ ಸುರಿದ ಭಾರೀ ಮಳೆಯಿಂದ ಸಾರ್ವಜನಿಕರು ಹಲವು ಸಮಸ್ಯೆ ಎದುರಿಸಿದರು. ನೀರು ತುಂಬಿದ ರಸ್ತೆಗಳಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಯಿತು. ಕೆಲವರು ಮೇಲುಸೇತುವೆ ಕೆಳಗೆ ಆಶ್ರಯ ಪಡೆದರೆ, ಇನ್ನು ಕೆಲವರು ಬಸ್ ನಿಲ್ದಾಣಗಳ ಬಳಿ ಆಶ್ರಯ ಪಡೆದರು. ಮಾರುಕಟ್ಟೆ ಸ್ಥಳಗಳಲ್ಲಿದ್ದ ಜನ ಮಳೆ ಸಂಪೂರ್ಣವಾಗಿ ನಿಲ್ಲುವವರೆಗೆ ಕಾದು ನಂತರ ಮನೆಗಳತ್ತ ಸಾಗಿದರು.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ: ಬೆಂಗಳೂರು ಪೂರ್ವ ವಲಯದ ಮದ್ದೂರಲ್ಲಿ 107.5 ಮೀ.ಮೀ., ರಾಜನಕುಂಟೆ 76 ಮಿ.ಮೀ., ಹೆಸರುಘಟ್ಟ 10.5 ಮಿ.ಮೀ., ಶಿವನಕೋಟೆ 26 ಮಿ.ಮೀ., ಸೋಮನಹಳ್ಳಿ 25.5 ಮಿ.ಮೀ., ರಾಜರಾಜೇಶ್ವರಿನಗರ 14 ಮಿ.ಮೀ., ಕೋರಮಂಗಲ 19 ಮಿ.ಮೀ., ಎಚ್‌ಎಸ್‌ಆರ್ ಲೇಔಟ್ 29 ಮಿ.ಮೀ., ಸಾರಕ್ಕಿ 19 ಮಿ.ಮೀ., ಕೆಂಗೇರಿ 10.5 ಮಿ.ಮೀ., ತಾವರೆಕೆರೆ 7ಮಿ.ಮೀ. ಮಳೆಯಾಗಿದೆ.

ಬಿಟಿಎಂ ಲೇಔಟ್ 26 ಮಿ.ಮೀ., ವಿದ್ಯಾರಣ್ಯಪುರ 21ಮಿ.ಮೀ., ವಿದ್ಯಾಪೀಠ 13.5 ಮಿ.ಮೀ., ಚನ್ನೇನಹಳ್ಳಿ 14.5 ಮಿ.ಮೀ., ಉತ್ತರಹಳ್ಳಿ 18 ಮಿ.ಮೀ., ಬೊಮ್ಮನಹಳ್ಳಿ 17 ಮಿ.ಮೀ., ಕೋಣನಕುಂಟೆ 13.5 ಮಿ.ಮೀ., ಕೆ.ಆರ್.ಪುರ 21.5 ಮಿ.ಮೀ., ಮಹದೇವಪುರದಲ್ಲಿ 7.5 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News