ವಿಶ್ವೇಶ್ವರಯ್ಯ ಮ್ಯೂಸಿಯಂ ಜ್ಞಾನ ಭಂಡಾರ

Update: 2018-09-16 05:21 GMT

ಜ್ಯಾಕೋಬ್ಸ್ ಲ್ಯಾಡರ್ ಉಪಕರಣವು ಹೈವೋಲ್ಟೇಜ್ ಮೂಲಕ ದೀಪವು ಹೊತ್ತಿ ಉರಿಯುವುದನ್ನು ನೋಡಬಹುದು. ಮಾನವ ನಿರ್ಮಿತ ಕೃತಕ ಉಪಗ್ರಹಗಳ ಮಾದರಿಗಳು, ‘ಡಿಜಿಟಲ್ ಕೌಂಟರ್’ನಲ್ಲಿ ಯಾವ ರೀತಿಯಲ್ಲಿ ಇಂಗ್ಲಿಷ್ ಸಂಖ್ಯೆಗಳು ಎಣಿಸಲ್ಟಡುತ್ತವೆ ಎಂಬ ಉಪಕರಣ, ಸರ್ಕ್ಯೂಟ್‌ಗಳಲ್ಲಿನ ವಿದ್ಯುತ್ ಪ್ರವಾಹದ ಮಾದರಿ, ವಿದ್ಯುತ್ ಉತ್ಪಾದಿಸುವ ಉಷ್ಣ ಸ್ಥಾವರಗಳ ಮಾದರಿಗಳೆಲ್ಲವು ಸೇರಿದಂತೆ, 1940ರಿಂದ ಇಲ್ಲಿಯವರೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಾದ ಅಗಾಧ ಪ್ರಗತಿಯನ್ನು ಸರಳವಾಗಿ ತೋರಿಸುವ ಮಾದರಿಗಳು ಇಲ್ಲಿವೆ.

ದೊಡ್ಡವರೂ ಸಹ ಬೆರಗಾಗಿ ನೋಡುವ ಪ್ರಪಂಚದ ಯಾವುದೇ ವಸ್ತು ಸಂಗ್ರಹಾಲಯದ ವಿಶೇಷತೆ ಏನೆಂದರೆ ‘ಇದು ಹೇಗೆ ಹೀಗಾಗುತ್ತದೆ’ ಎಂಬ ಪ್ರಶ್ನೆ ಕೂಡಲೇ ಹುಟ್ಟುವುದು. ಹೀಗೆ ವೈಜ್ಞಾನಿಕ ಜಗತ್ತಿನ ಕುತೂಹಲ ಆಸಕ್ತಿಗಳನ್ನು ಕಾರಣಸಮೇತ ತಣಿಸುವ ಒಂದು ಮ್ಯೂಸಿಯಂ ನಮ್ಮಲ್ಲೂ ಇದೆ. ಅದೇ ಬೆಂಗಳೂರಿನ ‘ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ’. ಯಾವುದೇ ವಸ್ತು ಸಂಗ್ರಹಾಲಯಕ್ಕೆ ಹೋದರೂ ಅಲ್ಲಿ ನಿಮಗೆ ಸೂಚನಾ ಫಲಕ ಮೊದಲು ಕಾಣಿಸುತ್ತದೆ. ಅದರಲ್ಲಿ ‘ಏನನ್ನೂ ಮುಟ್ಟಬಾರದು’ ಎಂದು ಬರೆದಿರುತ್ತದೆ. ಆದರೆ ವಿದೇಶಗಳ ಹಲವು ಮ್ಯೂಸಿಯಂಗಳಲ್ಲಿ ಇದೇ ಸೂಚನಾ ಫಲಕಗಳಲ್ಲಿ ‘ನೀವೇ ಮಾಡಿ ನೋಡಿ’ (Do It Yourself') ಎಂದಿರುತ್ತದೆ. ಇಂಥದ್ದೇ ನಾವೇ ಮಾಡಿ ನೋಡುವ ವಿಶೇಷ ಅವಕಾಶ ನಮ್ಮ ಈ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲೂ ಇದೆ. ಇದು ತುಂಬ ಖುಷಿ ಕೊಡುವುದಷ್ಟೇ ಅಲ್ಲದೇ ವಿಜ್ಞಾನದಂಥ ಕಬ್ಬಿಣದ ಕಡಲೆಯನ್ನು ಸುಲಭವಾಗಿ ಅರ್ಥ ಮಾಡಿಸುವ ವೈಜ್ಞಾನಿಕ ಬೋಧನಾ ಕ್ರಮವೂ ಆಗಿದೆ. ಹೀಗಿರುವ ಈ ವಿಶೇಷ ಮ್ಯೂಸಿಯಂನೆಡೆ ಒಂದು ಸುತ್ತು ಹಾಕೋಣ.

ಮ್ಯೂಸಿಯಂ ತುಂಬಾ ಮಕ್ಕಳ ನಗು ಕೇಕೆಯೇ ತುಂಬಿರುವ ಈ ಫನ್ ವರ್ಲ್ಡ್, ಬೆಂಗಳೂರು ನಗರದ ಕಸ್ತೂರಬಾ ರಸ್ತೆಯಲ್ಲಿದ್ದು, ಕಬ್ಬನ್ ಉದ್ಯಾನಕ್ಕೆ ಹೊಂದಿಕೊಂಡಿದೆ. ಪ್ರವೇಶ ದರ 5 ವರ್ಷದ ಒಳಗಿನ ಮಕ್ಕಳಿಗೆ ಉಚಿತ, ದೊಡ್ಡವರಿಗೆ 50 ರೂ., ಸರಕಾರಿ ಶಾಲಾ ಮಕ್ಕಳಿಗೆ 10ರೂ., ಖಾಸಗಿ ಶಾಲಾ ಮಕ್ಕಳಿಗೆ 30 ರೂ. ಶುಲ್ಕ ನಿಗದಿಯಾಗಿದೆ. ಕಾರ್ಪೊರೇಷನ್ ಶಾಲೆಗಳು ಮತ್ತು ಸರಕಾರಿ ಶಾಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಲಾಗುತ್ತದೆ. ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳಂದು ಮಾತ್ರ ರಜೆ ಹೊಂದಿರುವ ಈ ಸಂಗ್ರಹಾಲಯ ಉಳಿದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ಭೇಟಿಯ ಸಮಯ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಇರುತ್ತದೆ. ಇದು ಒಟ್ಟು ಎಂಟು ಪ್ರದರ್ಶನ ಗ್ಯಾಲರಿಗಳನ್ನು ಹೊಂದಿರುವ ಮ್ಯೂಸಿಯಂನಲ್ಲಿ ಯಾಂತ್ರಿಕ ಕೈ ಶಾಲೆ ಗ್ಯಾಲರಿ, ಡೈನೊಸಾರ್ ಗ್ಯಾಲರಿ, ಜೈವಿಕ ತಂತ್ರಜ್ಞಾನ ಗ್ಯಾಲರಿ ಸ್ಟೇಸ್ ಗ್ಯಾಲರಿ, ಬಿಇಎಲ್ ಇಲೆಕ್ಟ್ರಾನಿಕ್ ಗ್ಯಾಲರಿ ಸೇರಿದಂತೆ ಹಲವಾರು ಆಕರ್ಷಣೆಗಳನ್ನು ಹೊಂದಿದೆ. ನಿಜವಾಗಿ ಇದರ ಇನ್ನೊಂದು ವಿಶೇಷತೆ ಎಂದರೆ ಹೊಸ ಆವಿಷ್ಕಾರಗಳನ್ನು ಸೇರಿಸಿ ಅಪ್ ಡೇಟ್ ಮಾಡುತ್ತಿರುವುದು.

ನಾಡು ಕಂಡ ಮೇಧಾವಿ ಆಡಳಿತಗಾರ-ತಂತ್ರಜ್ಞ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವದ ಅಂಗವಾಗಿ 1962 ರಲ್ಲಿ ಈ ಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ಪ್ರತಿವರ್ಷ ಸುಮಾರು ಹತ್ತು ಲಕ್ಷದಷ್ಟು ಜನರು ವೀಕ್ಷಿಸುವ ಈ ಸಂಗ್ರಹಾಲಯವನ್ನು ಮ್ಯಾನೇಜ್ ಮಾಡುವುದು ಸಾಮಾನ್ಯದ ಮಾತಲ್ಲ. ಈ ಕೆಲಸವನ್ನು ‘ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತು’ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.

ಭಾರತದ ಅತ್ಯುನ್ನತ ಮ್ಯೂಸಿಯಂಗಳಲ್ಲಿ ಒಂದಾದ ಈ ಮ್ಯೂಸಿಯಂನ ಪ್ರವೇಶವಾಗುವಲ್ಲೇ ಡೈನೋಸಾರ್, ರಾಕೆಟ್, ವಿಮಾನಗಳು ವೆಲ್ ಕಂ ಮಾಡುತ್ತವೆ. ಅಲ್ಲಿಂದ ಒಳಗೆ ಹೋದೊಡನೆ ದೊಡ್ಡ ಸ್ಪೈನೊಸಾರಸ್ ಘೀಳಿಡುತ್ತಿದ್ದಂತೆಯೇ ಮೈಯೆಲ್ಲಾ ಜುಮ್ಮೆನ್ನಿಸುತ್ತದೆ. ನಂತರ ಸಿಗುವ ‘ಇಂಜಿನ್ ಹಾಲ್’ ನಲ್ಲಿ ಅನೇಕ ರೀತಿಯ ಯಂತ್ರಗಳ ಸರಳ ಉಪಯೋಗಗಳ ಡೆಮೊ ನೀಡಲಾಗಿದೆ. ಬಹುಮಹಡಿಯಲ್ಲಿರುವ ಮ್ಯೂಸಿಯಂನಲ್ಲಿ ವಿಸ್ಮಯಗೊಳಿಸುವ ವಿಜ್ಞಾನ ಪರೀಕ್ಷೆಗಳು, ತ್ರೀಡಿ ದೃಶ್ಯಾವಳಿಗಳು ಇಲ್ಲಿದ್ದು ಚಕಿತಗೊಳಿಸುತ್ತವೆ. ಇಲ್ಲಿ ಮೊದಲ ಪ್ರದರ್ಶನವನ್ನು ‘ಇಲೆಕ್ಟ್ರೊ ಟೆಕ್ನಿಕ್’ ಮೇಲೆ ಜುಲೈ 27, 1965ರಲ್ಲಿ ಆಯೋಜಿಸಲಾಯಿತು.

ಇಲ್ಲಿರುವ ಜ್ಯಾಕೋಬ್ಸ್ ಲ್ಯಾಡರ್ ಉಪಕರಣವು ಹೈವೋಲ್ಟೇಜ್ ಮೂಲಕ ದೀಪವು ಹೊತ್ತಿ ಉರಿಯುವುದನ್ನು ನೋಡಬಹುದು. ಮಾನವ ನಿರ್ಮಿತ ಕೃತಕ ಉಪಗ್ರಹಗಳ ಮಾದರಿಗಳು, ‘ಡಿಜಿಟಲ್ ಕೌಂಟರ್’ನಲ್ಲಿ ಯಾವ ರೀತಿಯಲ್ಲಿ ಇಂಗ್ಲಿಷ್ ಸಂಖ್ಯೆಗಳು ಎಣಿಸಲ್ಟಡುತ್ತವೆ ಎಂಬ ಉಪಕರಣ, ಸರ್ಕ್ಯೂಟ್‌ಗಳಲ್ಲಿನ ವಿದ್ಯುತ್ ಪ್ರವಾಹದ ಮಾದರಿ, ವಿದ್ಯುತ್ ಉತ್ಪಾದಿಸುವ ಉಷ್ಣ ಸ್ಥಾವರಗಳ ಮಾದರಿಗಳೆಲ್ಲವು ಸೇರಿದಂತೆ, 1940ರಿಂದ ಇಲ್ಲಿಯವರೆಗೆ ವಿಜ್ಞಾನ ಹಾಗೂ ತಂತ್ರಜ್ಞಾನ ದಲ್ಲಾದ ಅಗಾಧ ಪ್ರಗತಿಯನ್ನು ಸರಳವಾಗಿ ತೋರಿಸುವ ಮಾದರಿಗಳು ಇಲ್ಲಿವೆ. ದಿನವಿಡೀ ನೋಡಿದರೂ ಮುಗಿಯದ ಜ್ಞಾನ ಭಂಡಾರವಾದ ಈ ಮ್ಯೂಸಿಯಂಗೆ ಹೋಗುವಾಗ ಮಕ್ಕಳನ್ನು ಕರೆದೊಯ್ಯಲು ಮರೆಯಬೇಡಿ. ಈ ಸಂಗ್ರಹಾಲಯವು ಸೈನ್ಸ್ ಫಾರ್ ಫನ್ ಎಂದಷ್ಟೇ ಅಲ್ಲದೇ, ಕಾರಣವಿಲ್ಲದೇ ಯಾವುದೂ ಸಂಭವಿಸುವುದಿಲ್ಲ ಎಂಬ ವಾಸ್ತವದ ಮೆಸೇಜ್ ನೀಡುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ.

Writer - ಆಶಾ ಸಿಂಗ್

contributor

Editor - ಆಶಾ ಸಿಂಗ್

contributor

Similar News