ಭಾಷಾ ಪರಿಸರ

Update: 2018-09-16 05:35 GMT

ಅಧ್ಯಯನ ಮತ್ತು ಅರಿವು

ಶಿಕ್ಷಣ ಹೂರಣ ಭಾಗ 8

ಯಾವುದೇ ಅತಿರೇಕದ ಭಾಷೆಗಳು ಮಕ್ಕಳ ಮೇಲೆ ನಕಾರಾತ್ಮಕವಾದ ಪ್ರಭಾವವನ್ನು ಬೀರುತ್ತವೆ. ಅವರ ಭಾವನೆಗಳನ್ನು ರೂಪಿಸುವಲ್ಲಿ ಪಾತ್ರವಹಿಸುತ್ತವೆ. ಅಷ್ಟೇ ಅಲ್ಲದೇ ಮಕ್ಕಳು ತಮ್ಮ ಸಂಬಂಧವನ್ನು ಇತರರೊಂದಿಗೆ ಬೆಳೆಸಿಕೊಳ್ಳುವುದರಲ್ಲಿಯೂ ಈ ಭಾಷೆೆಗಳು ವಿಶೇಷವಾದ ಮತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕಡ್ಡಿ ಮುರಿದಂತೆ ಮಾತಾಡುವುದು ಖಂಡಿತವಾಗಿಯೂ ಸಂವಹನದಲ್ಲಿ ಒಳ್ಳೆಯದೇನಲ್ಲ. ಅದು ಸಂಬಂಧಗಳನ್ನು ಕಡೆಗಣಿಸುತ್ತದೆ. ತನ್ನದೇ ಸರಿ ಎಂಬ ಧೋರಣೆಯನ್ನು ವ್ಯಕ್ತಪಡಿಸುತ್ತದೆ.

ಕಲಿಕೆಯ ವಿಷಯದಲ್ಲಾಗಲಿ, ವ್ಯಕ್ತಿತ್ವದ ವಿಕಸನದ ವಿಷಯದಲ್ಲಾಗಲಿ ಮಕ್ಕಳು ತಪ್ಪು ಮಾಡಬಾರದೆಂದರೆ, ಅವರು ತಪ್ಪು ದಾರಿ ಹಿಡಿಯಬಾರದೆಂದರೆ ನಾವು ತಪ್ಪು ಮಾಡಬಾರದೆಂಬುದು ಪೋಷಕರಿಗೂ ಮತ್ತು ಶಿಕ್ಷಕರಿಗೂ ಆಗಬೇಕಾಗಿರುವ ಮೊದಲ ಜ್ಞಾನೋದಯ. ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಅದೆಷ್ಟು ಪ್ರಗತಿಯನ್ನು ಹೊಂದಿದ್ದರೂ ಕೂಡ ಮಕ್ಕಳ ಜೊತೆಗೆ ಯಾವ ಭಾಷೆೆಯಲ್ಲಿ ಮಾತಾಡಬೇಕೆಂಬುದರ ಬಗ್ಗೆ ಬಹಳಷ್ಟು ಹಿರಿಯರು ಅಜ್ಞಾನಿಗಳೇ ಆಗಿದ್ದಾರೆ. ಹಿರಿಯರು ಉಪಯೋಗಿಸುವ ಒಂದೊಂದು ಪದಗಳೂ ಕೂಡ ಬಹಳ ಮುಖ್ಯವಾಗುತ್ತವೆ. ಶಿಕ್ಷಕರು ಮತ್ತು ಪೋಷಕರು ಉಪಯೋಗಿಸುವ ಪದಗಳು ಮಕ್ಕಳ ಭಾವನಾತ್ಮಕ ನಿಲುವುಗಳನ್ನು, ವೈಚಾರಿಕತೆಯನ್ನು, ವ್ಯಕ್ತಿತ್ವವನ್ನು ರೂಪಿಸುತ್ತವೆ ಅಥವಾ ಹಾನಿಗೊಳಿಸುತ್ತವೆ. ಮಕ್ಕಳೊಂದಿಗೆ ಮಾತಾಡುವುದನ್ನು ಕಲಿತರೆ ಮಾತ್ರವೇ ಅವರೊಂದಿಗೆ ಸಂವಹನ ಸಾಧ್ಯ. ಹಾಗೆಯೇ ಅವರಿಗೆ ಏನನ್ನಾದರೂ ಕಲಿಸಲು ಸಾಧ್ಯ. ನೆನಪಿರಲಿ, ಮಕ್ಕಳ ಭಾಷೆೆ ಕಲಿಯುವುದು ಬಹಳ ಸವಾಲಿನ ಕೆಲಸ ಮತ್ತು ಜೀವನದಲ್ಲೇ ಬಹಳ ಅರ್ಥಪೂರ್ಣವಾದಂತಹ ಕೆಲಸ. ದುರದೃಷ್ಟವಶಾತ್ ಮಕ್ಕಳನ್ನು ಸಾಕುವುದರ ಬಗ್ಗೆ ತಪ್ಪುಗ್ರಹಿಕೆಗಳೇ ಹೇರಳವಾಗಿರುವುದು. ಮೊತ್ತಮೊದಲಾಗಿ ಮಕ್ಕಳು ತಮ್ಮ ಬಗ್ಗೆ ತಾವು ಮತ್ತು ತಾವು ಮಾಡುವ ಕೆಲಸಗಳ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತಹ ಸ್ವಯಂಶಿಸ್ತನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾದ ಜೈವಿಕ ವಾತಾವರಣವನ್ನು ನಿರ್ಮಾಣ ಮಾಡಬೇಕು. ಅಷ್ಟಾದರೆ ಒಂದು ಗಟ್ಟಿ ತಳಪಾಯವನ್ನು ಹಾಕಿದಂತೆ. ಆದರೆ, ಬಹಳಷ್ಟು ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮೇಲೆ ಅಧಿಕಾರ ಸ್ಥಾಪಿಸಲು ಹೆಣಗಾಡುವಂತೆಯೇ ಸದಾ ಕಾಣುತ್ತಿರುತ್ತದೆ.

ಅಧಿಕಾರದ ಭಾಷೆ

ಮಕ್ಕಳ ಮೇಲೆ ಅಧಿಕಾರ ಚಲಾಯಿಸುವಂತೆ ಪೋಷಕರು ಮತ್ತು ಶಿಕ್ಷಕರು ಸದಾ ಮಾತಾಡುತ್ತಿದ್ದರೆ, ಮಕ್ಕಳು ಸ್ವತಂತ್ರವಾಗಿ ತಮ್ಮ ದನಿಗಳನ್ನು ಎತ್ತುವುದಿಲ್ಲ ಅಥವಾ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ಹೇಳುವುದಿಲ್ಲ. ಏಕೆಂದರೆ, ಅಧಿಕಾರಕ್ಕೆ ಒಳಗಾಗಿಸುವುದಕ್ಕೇ ಹಿರಿಯರು ಯತ್ನಿಸುತ್ತಿದ್ದರೆ, ಸಹಜವಾಗಿ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಅಲ್ಲದೇ, ಅಧಿಕಾರದಿಂದ ನೀಡುವ ಆಜ್ಞೆಯ ಹಿಂದೆ ವಿಧೇಯವಾಗಿರಬೇಕು ಎಂಬ ನಿರೀಕ್ಷೆಯನ್ನು ಸ್ಪಷ್ಟವಾಗಿ ಹೊಂದಿರುತ್ತದೆ. ಇದರಿಂದಾಗಿ ಮಕ್ಕಳು ಒಂದೋ ಮುಖವಾಡವನ್ನು ಹೊಂದಿರುತ್ತಾರೆ ಅಥವಾ ಅವರಿಗೆ ತಡೆಯಲಾಗದೇ ಹೋದಾಗ ಎಲ್ಲದಕ್ಕೂ ಬಂಡಾಯವೇಳುತ್ತಿರುತ್ತಾರೆ.

ಸ್ವೇಚ್ಛಾಚಾರದ ಭಾಷೆ

ಇನ್ನೂ ಕೆಲವು ಪೋಷಕರು ಮಕ್ಕಳಿಗೆ ಅತಿಯಾದ ಸ್ವಾತಂತ್ರ ಕೊಟ್ಟಿರುತ್ತಾರೆ. ಆ ಮಕ್ಕಳು ಮನಸ್ಸಿಗೆ ಬಂದಂತೆ ಮಾತಾಡುತ್ತಿರುತ್ತಾರೆ. ಅವರಿಗೆ ಅಂಕೆಯೂ ಇರುವುದಿಲ್ಲ. ಇತಿಮಿತಿಗಳೂ ಇರುವುದಿಲ್ಲ. ಅಂತಹ ಮಕ್ಕಳು ಸದಾ ತಮ್ಮ ಮೂಗಿನ ನೇರಕ್ಕೇ ಮಾತಾಡಿಕೊಂಡಿದ್ದು, ಅದಕ್ಕೆ ಪೋಷಕರು ಕೂಡ ‘‘ನಮ್ಮ ಮಗು ಎಲ್ಲವನ್ನೂ ನೇರವಾಗಿ ಮಾತಾಡುತ್ತದೆ’’ ಎಂದು ಅದನ್ನು ಸಮರ್ಥಿಸಿಕೊಳ್ಳುವುದು ಕೂಡಾ ಉಂಟು. ನೇರವಾಗಿ ಮಾತಾಡುವುದೆಂದರೆ, ಮನಸ್ಸಿಗೆ ಬಂದಂತೆಲ್ಲಾ ಮಾತಾಡುವುದಲ್ಲ. ತಾನು ಯಾವುದಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ, ಯಾರೊಂದಿಗೆ ಮಾತಾಡುತ್ತಿದ್ದೇನೆ, ಏನನ್ನು ಹೇಳಬೇಕೆಂಬ ಉದ್ದೇಶವಿದೆ, ನಾನು ಹೇಳುವುದರಿಂದ ಯಾವ ಪರಿಣಾಮಗಳು ಉಂಟಾಗುವುದು ಎಂಬೆಲ್ಲಾ ಪ್ರಜ್ಞೆಯನ್ನು ಮಕ್ಕಳು ಹೊಂದಿರಬೇಕು. ಬಾಯಿಗೆ ಬಂದಂತೆ ಮಾತಾಡುವುದು, ಇತರರಿಗೆ ಅಪಮಾನಿಸುವಂತೆ, ಅವಹೇಳನ ಮಾಡುವಂತೆ ಮಾತಾಡುವುದು, ಇತ್ಯಾದಿಗಳನ್ನು ಮಾಡಬಾರದು. ಇದು ನೇರವಾಗಿ ಮಾತಾಡುವುದಲ್ಲ.

ಪ್ರಾಥಮಿಕ ಶಾಲೆಯ ಒಂದು ಮಗು ತರಗತಿಯಲ್ಲಿ ತನ್ನ ಸಹಪಾಠಿಗೆ ‘‘ನೀನು ಕಪ್ಪಗೆ ಗಲೀಜಾಗಿ ಕಾಣಿಸ್ತೀಯ. ನಿನ್ನ ಪಕ್ಕ ಕೂತ್ಕೊಳ್ಳಕ್ಕೆ ಅಸಹ್ಯ ಆಗತ್ತೆ. ನೀನು ಬೇರೆ ಕಡೆ ಕೂತ್ಕೋ’’ ಎಂದು ಹೇಳಿದ್ದ. ನಾನು ಆ ಹುಡುಗನಿಗೆ ‘‘ಯಾಕೆ ಹಾಗೆ ಮಾತಾಡಿದೆ’’ ಎಂದು ಕೇಳಿದಕ್ಕೆ ‘‘ನನಗೆ ಕಪ್ಪಗೆ ಇರುವವರನ್ನು ಕಂಡರೆ ಅಸಹ್ಯ, ನಾನು ಕಪ್ಪಗಿರುವ ನಾಯಿಯ ಮರಿಯನ್ನೂ ಮನೆಗೆ ತರಕ್ಕೆ ಇಷ್ಟಪಡಲ್ಲ’’ ಎಂದ. ಇನ್ನು ಈ ಮಗುವಿಗೆ ದೀರ್ಘಕಾಲದ ಮತ್ತು ನಿಧಾನಗತಿಯ ಸಮಾಲೋಚನೆ ಬೇಕೆಂದೆನಿಸಿ, ಅವರ ಮನೆಯವರಿಗೆ ಹೇಳಿ ಕಳುಹಿಸಿದೆ. ಅವನ ತಾಯಿ, ‘‘ಅಯ್ಯೋ, ಅವನು ಹಾಗೇನೇ ಸರ್. ಏನಿದ್ರೂ ಡೈರೆಕ್ಟಾಗಿ ಹೇಳಿಬಿಡ್ತಾನೆ. ಮುಖದ್ಮೇಲೆ ಹೊಡೆದಂಗೆ ಮಾತಾಡ್ತಾನೆ. ನಾವೂ ಅಂತೀವಿ. ನಿನಗೆ ಅಸಹ್ಯ ಆದ್ರೆ ನೀನೇ ಬೇರೆ ಕಡೆ ಕೂತ್ಕೋ. ಸ್ಕೂಲಲ್ಲಿ ಎಲ್ಲಾ ತರ ಮಕ್ಕಳೂ ಬರ್ತಾರೆ. ನಮ್ಮ ದೇಶದಲ್ಲಿ ಕಪ್ಪಗಿರೋರ್ನ ಸೇರಿಸಿಕೊಳ್ಳಲ್ಲ ಅಂತ ಹೇಳಕ್ಕಾಗಲ್ವಲ್ಲಾ. ನೀನು ಯಾರ ಜೊತೆ ಕೂತ್ಕೊಳ್ಳಕ್ಕೆ ಇಷ್ಟಪಡ್ತೀಯೋ ಅವರ ಜೊತೆ ಕೂತ್ಕೋ ಅಂತ ಹೇಳ್ತೀವಿ. ನೋಡಿ ಸರ್, ನೀವೇ ಅವನು ಯಾರ ಜೊತೆ ಕೂತ್ಕೊಳ್ಳಕ್ಕೆ ಇಷ್ಟ ಪಡ್ತಾನೋ ಅವರ ಜೊತೆ ನೋಡ್ಕೊಂಡು ಕೂಡ್ಸಿ. ಅವನಿಗೆ ಕಪ್ಪಗಿರೋವರನ್ನ ಕಂಡರೆ, ಸ್ವಲ್ಪ ಅಂಗೇ ಇಂಗೇ ಗಲೀಜಾಗಿರೋವರನ್ನ ಕಂಡರೆ ಅವನಿಗೆ ಆಗಲ್ಲ. ಏನು ಮಾಡೋದು?’’ ಅಂದರು. ನನಗೆ ಇನ್ನೂ ಆಘಾತವೇ ಆಯಿತು. ಸಮಾಲೋಚನೆಯನ್ನು ಪ್ರಾರಂಭಿಸಬೇಕಾಗಿರುವುದು ಯಾರಿಂದ ಎಂಬುದು ಸ್ಪಷ್ಟವಾಯಿತು. ಆ ತಾಯಿ ನನ್ನೊಂದಿಗೆ ಮಾತಾಡುವಾಗಲೇ ಉಪಯೋಗಿಸಿದ ಭಾಷೆೆಯನ್ನು ನೋಡಿದರೆ, ಇನ್ನು ಮನೆಯಲ್ಲಿ ಮುಕ್ತವಾಗಿ ಎಷ್ಟರ ಮಟ್ಟಿಗೆ ಭಾಷಾ ಪ್ರಯೋಗಗಳು ನಡೆದಿರಬಹುದೆಂದು ಊಹಿಸಿದೆ. ಇಲ್ಲಿ ಕಾನೂನಾತ್ಮಕವಾಗಿ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವುದಕ್ಕಿಂತ ಅವರಿಗೆ ವ್ಯಕ್ತಿಗತವಾಗಿ ಅರಿವನ್ನು ಮೂಡಿಸುವ ಬಗ್ಗೆ ನಾವು ಆಲೋಚಿಸಬೇಕಾಯಿತು. ಇರಲಿ, ಇಲ್ಲಿ ನಾನು ಹೇಳಬಯಸುತ್ತಿರುವುದೇನೆಂದರೆ, ಮಕ್ಕಳು ಪೋಷಕರು ತಮ್ಮ ಜೊತೆ ಅಥವಾ ತಮ್ಮ ಮುಂದೆ, ತಾವಿರುವ ವಾತಾವರಣದಲ್ಲಿ ಆಡುವಂತಹ ಮಾತುಗಳನ್ನು ಸ್ವೀಕರಿಸಿರುತ್ತಾರೆ. ಅದು ಅವರ ಧೋರಣೆ, ಮನಸ್ಥಿತಿ ಮತ್ತು ವ್ಯಕ್ತಿತ್ವವನ್ನಾಗಿಯೇ ರೂಪಿಸುತ್ತಾ ಹೋಗಿರುತ್ತದೆ.

ಅತಿರೇಕದ ಭಾಷೆಗಳು

ಯಾವುದೇ ಅತಿರೇಕದ ಭಾಷೆೆಗಳು ಮಕ್ಕಳ ಮೇಲೆ ನಕಾರಾತ್ಮಕವಾದ ಪ್ರಭಾವವನ್ನು ಬೀರುತ್ತವೆ. ಅವರ ಭಾವನೆಗಳನ್ನು ರೂಪಿಸುವಲ್ಲಿ ಪಾತ್ರವಹಿಸುತ್ತವೆ. ಅಷ್ಟೇ ಅಲ್ಲದೇ ಮಕ್ಕಳು ತಮ್ಮ ಸಂಬಂಧವನ್ನು ಇತರರೊಂದಿಗೆ ಬೆಳೆಸಿಕೊಳ್ಳುವುದರಲ್ಲಿಯೂ ಈ ಭಾಷೆೆಗಳು ವಿಶೇಷವಾದ ಮತ್ತು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕಡ್ಡಿ ಮುರಿದಂತೆ ಮಾತಾಡುವುದು ಖಂಡಿತವಾಗಿಯೂ ಸಂವಹನದಲ್ಲಿ ಒಳ್ಳೆಯದೇನಲ್ಲ. ಅದು ಸಂಬಂಧಗಳನ್ನು ಕಡೆಗಣಿಸುತ್ತದೆೆ. ತನ್ನದೇ ಸರಿ ಎಂಬ ಧೋರಣೆಯನ್ನು ವ್ಯಕ್ತಪಡಿಸುತ್ತದೆ. ತನ್ನದೇ ನಡೆಯಬೇಕು ಎಂದೂ ಧ್ವನಿಸುತ್ತದೆ. ನಾನು ಇರುವುದೇ ಹೀಗೆ ಸ್ವೀಕರಿಸಿದರೆ ಸ್ವೀಕರಿಸು ಬಿಟ್ಟರೆ ಬಿಡು. ನನಗೇನೂ ನಿನ್ನ ಅಗತ್ಯವಿಲ್ಲ. ನಿನಗೆ ಬೇಕಾದರೆ ನನಗೆ ಬೇಕಾದಂತೆ ಇರು; ಹೀಗೆ ಏನೇನೆಲ್ಲಾ ಭುಸುಗುಡುತ್ತದೆ.

ಎಂಥಾ ಭಾಷೆ ಬೇಕು?

ಹಾಗಾದರೆ, ಮಕ್ಕಳೊಂದಿಗೆ ಎಂಥಾ ಭಾಷೆೆಯಲ್ಲಿ ಮಾತಾಡಬೇಕು? ಯಾವ ಭಾಷೆೆಯಲ್ಲಿ ಮಾತಾಡಿದರೆ ಅವರ ಕಲಿಕೆಗೆ ಮತ್ತು ವ್ಯಕ್ತಿತ್ವದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ? ನೇರವಾಗಿ ಸ್ಪಷ್ಟವಾಗಿ ತಿಳಿದುಕೊಳ್ಳೋಣ ಹದವಾಗಿ ಮತ್ತು ಮನವರಿಕೆಯಾಗುವಂತೆ ಮಾತಾಡುವುದು. ಭಾಷೆೆಯಲ್ಲಿ ಸಲಿಲತೆ ಇರಬೇಕು. ಅಂದರೆ ಫ್ಲೆಕ್ಸಿಬಲಿಟಿ ಇರಬೇಕು. ಮಗುವಿಗೆ ತಾನೊಪ್ಪದ ವಿಷಯವೇ ಆದರೂ ಅದನ್ನು ಕೇಳುವ ಮತ್ತು ಗ್ರಹಿಸುವಂತೆ ಮಾಡಲು ಭಾಷೆೆ ಆಕ್ರಮಣಕಾರಿಯಾಗಿರಬಾರದು. ಅದೇ ರೀತಿಯಲ್ಲಿ ನೀನು ಕೇಳುವುದಿಲ್ಲ ಬಿಡು ಎನ್ನುವಂತೆ ತಳ್ಳಿಹಾಕುವಂತಹ ಭಾಷೆೆಯಲ್ಲಿ ಹಗುರವಾಗಿ ಮಾತಾಡಬಾರದು. ಗೌರವವಾದ ರೀತಿಯ ಭಾಷೆೆಯನ್ನು ಉಪಯೋಗಿಸಬೇಕು. ಆಡುವ ಭಾಷೆೆಯು ಸದಾ ಕಲಿಕೆಯ ಮತ್ತು ಪ್ರಕ್ರಿಯೆಯ ರೀತಿಯಲ್ಲಿ ಇರಬೇಕೇ ಹೊರತು, ಹೀಗೇ ಇರುವುದು ಅಥವಾ ಇರಬೇಕು, ಎಂಬಂತೆ ನಿರ್ದಿಷ್ಟ ಚೌಕಟ್ಟಿಗೆ ಬಂಧಿಸುವಂತೆ ಮಾತಾಡಬಾರದು. ಮಗುವಿಗೆ ತನ್ನ ಮಾತನ್ನು ಹೇಳಲು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಕಷ್ಟು ಅವಕಾಶವಿದೆ ಎಂಬುದಾಗಿರಬೇಕು. ಮಕ್ಕಳಿಗೆ ನಮ್ಮ ಮಾತಿನ ನಂತರ ಆಯ್ಕೆಗೆ ಅವಕಾಶವಿರುವಂತಿರಬೇಕು. ಅವರ ಭಾವನೆಗಳಿಗೆ ಗೌರವ ನೀಡುವಂತಿರಬೇಕು. ಅವರಿಗೆ ಅನುಭವ ಮತ್ತು ಅರಿವು ಬಹಳಷ್ಟು ವಿಷಯಗಳಲ್ಲಿ ಇಲ್ಲದಿರುವ ಕಾರಣ ನಾವು ಏನನ್ನು ಹೇಳುತ್ತಿದ್ದೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವಂತಹ ಭಾಷೆೆ ನಮ್ಮದಾಗಿರಬೇಕು. ಅವರಿಂದ ನಿರೀಕ್ಷಿಸಲಾಗದ ಮತ್ತು ಬೇಡದ ವರ್ತನೆಗಳ ಬಗ್ಗೆ ಖಂಡನೆಯನ್ನೂ ಕೂಡ ಖಡಾಖಂಡಿತವಾಗಿ ಕಠಿಣವಾಗಿ ಖಂಡಿಸದೇ ಅದರ ಕಾರಣ ಮತ್ತು ಪರಿಣಾಮಗಳನ್ನು ಸ್ಪಷ್ಟವಾಗಿ ತಿಳಿಸುವ ಭಾಷೆೆಯಲ್ಲಿ ಮಾತಾಡಬೇಕು.

ಏನೇ ಆಗಲಿ, ಮಕ್ಕಳ ಆತ್ಮಸ್ಥೈರ್ಯವನ್ನು ಕಸಿಯುವಂತಹ ಹಾಗೂ ಅವರನ್ನು ನಮ್ಮ ಅಧೀನಕ್ಕೆ ಒಳಗಾಗಿಸುವಂತಹ ಭಾಷೆೆಯನ್ನು ಉಪಯೋಗಿಸಬಾರದು.

ಹಸಿಗೋಡೆಯಲ್ಲಿ ಹರಳು ನೆಟ್ಟಂತೆ

ಕೆಲವು ಪೋಷಕರು ಮತ್ತು ಶಿಕ್ಷಕರು ಕಿರುಚಾಡುತ್ತಲೇ ಇರುತ್ತಾರೆ. ಅವರ ಕಿರುಚಾಟಕ್ಕೆ ಮಕ್ಕಳು ಹೊಂದಿಕೊಂಡುಬಿಟ್ಟಿರುತ್ತಾರೆ. ಹಾಗಾಗಿ ಅವರು ಯಾವಾಗಲೂ ಕಿರುಚುತ್ತಿರುತ್ತಾರೆ, ಅದು ಇದ್ದುದ್ದೇ, ನಾವೇನು ಮಾಡಿದರೂ, ಮಾಡದಿದ್ದರೂ ಅವರು ಕಿರುಚೋದು ಇದ್ದೇ ಇರತ್ತೆ ಎಂಬಂತೆ ಮಕ್ಕಳು ತಮ್ಮ ಪೋಷಕರ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದನ್ನು ಶಾಶ್ವತವಾಗಿ ಕೇಳುವುದನ್ನು ನಿಲ್ಲಿಸಿಬಿಟ್ಟಿರುತ್ತಾರೆ. ವೌಖಿಕವಾಗಿರುವ ತಾಂತ್ರಿಕ ನಿರ್ದೇಶನಗಳನ್ನು ಅನುಸರಿಸುವುದೆಂದರೆ ಮಾತು ಕೇಳುವುದಂತಲ್ಲ. ಕೇಳುವ ಮಾತು ಅರಿವಾಗಿ ಅಥವಾ ತಿಳುವಳಿಕೆಯಾಗಿ ಮಾರ್ಪಾಡಾಗಬೇಕು. ಆದರೆ ಅದೇಕೆ ಆಗುವುದಿಲ್ಲವೆಂದರೆ, ಅವರ ಹಿರಿಯರು ಅವರೊಂದಿಗೆ ಮಕ್ಕಳೊಂದಿಗೆ ಮಾತಾಡುವ ಭಾಷೆೆಯನ್ನು ಉಪಯೋಗಿಸಿರುವುದಿಲ್ಲ. ನಿಸರ್ಗದಲ್ಲಿ ಪ್ರಾಣಿಗಳಿಗೆ, ಪಕ್ಷಿಗಳಿಗೆ, ಗಿಡ ಮರಗಳಿಗೆ ಅನ್ವಯವಾಗುವಂತಹ ಸೂಕ್ಷ್ಮ ಸಂವೇದನೆಯ ಭಾಷೆೆಯಿರುವಂತೆ, ಮಕ್ಕಳಿಗೂ ಕೂಡ ಅಂತಹ ಭಾಷೆೆಯಿದ್ದು, ಅದರಲ್ಲಿಯೇ ಮಾತಾಡಬೇಕು. ಮಕ್ಕಳು ಮುಕ್ತ ಮತ್ತು ಆನಂದದ ವಾತಾವರಣದಲ್ಲಿ ಹೆಚ್ಚೆಚ್ಚು ತೆರೆದುಕೊಳ್ಳುತ್ತಾರೆ. ಅವರು ಹಾಗೆ ತೆರೆದುಕೊಳ್ಳುವಂತಹ ವಾತಾವರಣ ನಿರ್ಮಾಣವಾಗುವುದೇ ಹಿರಿಯರು ಅವರೊಂದಿಗೆ ಬಳಸುವ ಭಾಷೆೆಗಳಿಂದ. ಆ ಭಾಷಾಪರಿಸರದಲ್ಲಿ ಮಕ್ಕಳು ಅರಿತುಕೊಳ್ಳಲು ಸಾಧ್ಯವಾಗುವಂತೆ ಗ್ರಹಣಶಕ್ತಿಯು ವೃದ್ಧಿಯಾಗುತ್ತದೆ ಮತ್ತು ಸ್ವತಂತ್ರವಾಗಿ ತಾವೇ ತಿಳುವಳಿಕೆಯನ್ನು ಸ್ವೀಕರಿಸಲು ಅವರು ಸಿದ್ಧರಾಗುತ್ತಾರೆ. ಇಂಥಾ ಭಾಷಾ ಪರಿಸರವನ್ನು ನಿರ್ಮಿಸುವುದು ಹೇಗೆ ಮತ್ತು ಅವುಗಳ ಪರಿಣಾಮಗಳೇನು ಎಂಬುದನ್ನು ಮುಂದೆ ನೋಡೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News