ತಾಳ ಬಂದೋ.... ತಂಬೂರಿ ಬಂದೋ...

Update: 2018-09-16 05:47 GMT

  ರಾಜೇಗೌಡ ಹೊಸಹಳ್ಳಿ

ತಂಬೂರಿ ಸಂಪ್ರದಾಯದ ಸಾಹಿತ್ಯ ಮತ್ತು ಜನಸಮುದಾಯ ಕುರಿತ ವಿಶ್ಲೇಷಣಾತ್ಮಕ ಸಂಶೋಧನೆಯನ್ನು ಶ್ರೀ ರಾಜೇಗೌಡ ಅವರು ವಿಸ್ತಾರವಾಗಿ ಮಾಡಿದ್ದಾರೆ. ಹಾಸನ ಜಿಲ್ಲೆಯ ಸುತ್ತಮುತ್ತ ಮಾತ್ರವೇ ಹೆಚ್ಚು ಕಾಣಸಿಗುವ ತಂಬೂರಿ ಸಂಪ್ರದಾಯದ ಹಾಡುಗಾರರ ಬಗೆಗಿನ ಈ ಅಧ್ಯಯನವು ಅನೇಕ ಕಾರಣಗಳಿಂದಾಗಿ ವೈಶಿಷ್ಟ್ಯಪೂರ್ಣವೂ, ಮಹತ್ವದ್ದೂ ಆಗಿದೆ. ಕ್ಷೇತ್ರ ಅಧ್ಯಯನ ಅರ್ಥಪೂರ್ಣಗೊಳ್ಳುವ ಬಗೆ ಹೇಗೆ? ಎನ್ನುವುದಕ್ಕೆ ಈ ಸಂಶೋಧನಾ ಪ್ರಬಂಧವನ್ನು ಒಂದು ಮಾನದಂಡವಾಗಿ ಮಾಡಿಕೊಳ್ಳಬಹುದು. ಏಕೆಂದರೆ ಗಾಯಕ ಸಮುದಾಯಗಳ ನೆಲೆಗಳನ್ನು ಅರಸಿ, ಅವರು ಹಾಡುವ ಹಾಡುಗಳನ್ನು ಸಂಗ್ರಹಿಸಿ, ಆಚರಣೆಗಳ ಹಿನ್ನೆಲೆಗಳನ್ನು ಗುರುತಿಸಿ, ತಂಬೂರಿಯವರು ಹಾಗೂ ಅವರ ಸಾಹಿತ್ಯವನ್ನು ಕುರಿತಂತೆ ಅನೇಕ ಹೊಸ ಅಂಶಗಳತ್ತ ಜಾನಪದ ವಿದ್ವಾಂಸರ ಗಮನವಷ್ಟೇ ಅಲ್ಲದೇ, ಮಾನವ ಶಾಸ್ತ್ರಜ್ಞರು ಹಾಗೂ ಚರಿತ್ರಕಾರರ ನೋಟವನ್ನು ಸೆಳೆಯುವಷ್ಟು ಪ್ರಮುಖ ಅಂಶಗಳನ್ನು ಶ್ರೀ ರಾಜೇಗೌಡರು ಇಲ್ಲಿ ಮಂಡಿಸಿದ್ದಾರೆ. ಹೊಸ ಸಂವಾದ ಹಾಗೂ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂಥ ಅಂಶಗಳಲ್ಲಿ ಪ್ರಮುಖವಾದ ಕೆಲವನ್ನು ಇಲ್ಲಿ ಚರ್ಚಿಸಲು ಬಯಸುತ್ತೇನೆ.

ಜನಪದ ಗಾಯಕರನ್ನು ಲೌಕಿಕ ವೃತ್ತಿ ಗಾಯಕರು ಹಾಗೂ ಧಾರ್ಮಿಕ ವೃತ್ತಿ ಗಾಯಕರು ಎಂದು ವಿಭಜಿಸಿ ನೋಡಲಾಗುವ ಪರಿಕಲ್ಪನೆಯನ್ನು ರಾಜೇಗೌಡರು ತಮ್ಮ ಬರಹದಲ್ಲಿ ವಿಮರ್ಶಿಸಿದ್ದಾರೆ. ಜೀ. ಶಂ. ಪರಮಶಿವಯ್ಯ ಅವರು ತಮ್ಮ ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು ಎನ್ನುವ ಸಂಶೋಧನಾ ಪ್ರಬಂಧದಲ್ಲಿ, ಮುಖ್ಯವಾಗಿ ಇಂಥ ವಿಭಜನೆಯನ್ನು ಮಾಡಿಯೇ ಹಾಡುಗಾರರನ್ನು ಗುರುತಿಸಿದ್ದಾರೆ. ಲೌಕಿಕ ಮತ್ತು ಧಾರ್ಮಿಕ ಇವೆರಡೂ ತತ್ವಗಳಿಗೆ ನಾವು ಕೊಡುವ ಸೀಮಿತ ಅರ್ಥಗಳು ಅವೆರಡನ್ನೂ ಪರಸ್ಪರ ವಿರೋಧವೆಂಬಂತೆ ನೋಡಲು ಪ್ರೇರೇಪಿಸಿವೆ; ಅಥವಾ ಒಂದಕ್ಕೊಂದು ಸಂಬಂಧ ಪಡದವು ಎಂದು ಭಾವಿಸುವಂತೆ ಮಾಡಿವೆ. ಬದುಕಿನ ಸ್ವರೂಪದ ನಿರ್ಣಯವು ವ್ಯಕ್ತಿಯ ಕೈಯಲ್ಲಿ ಅಲ್ಲದೆ, ಪರಕೀಯವಾದ ಚರಿತ್ರೆಯ ನಿಷ್ಠುರ ಚಲನೆಯಲ್ಲಿ ಇದೆ ಎಂದು ಭಾವಿಸಿದರೆ ಲೌಕಿಕ ಬೇರೆ, ಧಾರ್ಮಿಕವೇ ಬೇರೆ. ಪಂಪ ಇಂಥ ತಲ್ಲಣಗೊಳಿಸುವ ಒಂದು ದ್ವಂದ್ವದಲ್ಲಿ ಒದ್ದಾಡಿದ್ದನೇ ಹೇಗೆ ಎನ್ನುವುದನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಭಾವಿಸುವ ಅಗತ್ಯವಿದೆ. ಜನಪದ ಮನಸ್ಸಿಗೆ ಇವೆರಡೂ ಒಂದಕ್ಕೊಂದು ವಿರೋಧವೂ ಅಲ್ಲ; ಸಂಬಂಧವಿರದಂಥವೂ ಅಲ್ಲ. ಅವು ಒಂದರೊಳಗೆ ಇನ್ನೊಂದು ಹಾಸುಹೊಕ್ಕಾಗಿರಬೇಕೆಂದು ಬಯಸುವಂಥವು. ಲೌಕಿಕ ವಾತಾವರಣದಲ್ಲಿ ಹೊಸ ಧಾರ್ಮಿಕತೆಯನ್ನೂ, ಧಾರ್ಮಿಕ ನೆಲೆಯಲ್ಲಿ ಹೊಸ ಲೌಕಿಕತೆಯನ್ನೂ ಕಾಣುವ ಬಗೆಯನ್ನು ಜನಪದ ಅಭಿವ್ಯಕ್ತಿಗಳಲ್ಲಿ ಪ್ರಮುಖವಾದ ವಿನ್ಯಾಸವಾಗಿಯೇ ಗುರುತಿಸಬಹುದಾಗಿದೆ. ಇಲ್ಲದಿದ್ದರೆ ಮಾದಪ್ಪನ ಕಾವ್ಯವನ್ನೂ, ಮಂಟೇಸ್ವಾಮಿ ಕಾವ್ಯವನ್ನೂ ಮತ್ತು ನಿರ್ವಾಣಸ್ವಾಮಿ ಕುರಿತ ಕಾವ್ಯವನ್ನೂ ಅರ್ಥಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ. ರಾಜೇಗೌಡರು ತಮ್ಮ ಸಂಶೋಧನೆಯಲ್ಲಿ ತಂಬೂರಿ ಸಂಪ್ರದಾಯದ ಹಾಡುಗಾರರು ಹಾಡಿರುವ ಲೌಕಿಕ ಕಥನದಲ್ಲಿ ಸೂಕ್ಷ್ಮವಾಗಿ ತುಡಿಯುತ್ತಿರುವ ಹೊಸ ಧಾರ್ಮಿಕ ಆಶಯಗಳನ್ನೂ, ನಿರ್ವಾಣಸ್ವಾಮಿ ಮುಂತಾದ ಕಥನದಲ್ಲಿ ಕಾಣಸಿಗುವ ಹೊಸ ಲೌಕಿಕ ಆಶಯಗಳನ್ನೂ ಈ ಹಿನ್ನೆಲೆಯಲ್ಲಿಯೇ ಅರ್ಥಪೂರ್ಣವಾಗಿ ಗುರುತಿಸಿದ್ದಾರೆ. ನಿರ್ವಾಣಸ್ವಾಮಿಯನ್ನು ಕುರಿತ ಅವರ ವಿವರಣೆಯು ಮಂಟೇಸ್ವಾಮಿ ಮುಂತಾದವರ ಸಾಲಿನಲ್ಲಿ ಸೇರುವಂಥ ವ್ಯಕ್ತಿತ್ವವೊಂದರ ಅನ್ವೇಷಣೆಯೂ ಆಗಿದೆ.

ಮಂಟೇಸ್ವಾಮಿ ಕಥೆಯನ್ನು ಹೇಳುವ ನೀಲಗಾರರು ಬಳಸುವ ಮುಖ್ಯ ವಾದ್ಯವೂ ತಂಬೂರಿ. ತಂಬೂರಿಯನ್ನು ಬಳಸಿ ಹಾಡುವ ಹಾಸನದ ಸುತ್ತಮುತ್ತ ಇರುವ ಈ ಹಾಡುಗಾರರಿಗೂ ಹಾಗೂ ನೀಲಗಾರರಿಗೂ ಇರುವ ಪ್ರಮುಖ ಭಿನ್ನತೆಗಳನ್ನು ರಾಜೇಗೌಡರು ತಮ್ಮ ಪ್ರಬಂಧದಲ್ಲಿ ಚರ್ಚಿಸಿದ್ದಾರೆ. ಒಂದೇ ಬಗೆಯ ಜೀವನ ಆಶಯಗಳನ್ನು ವಿಸ್ತರಿಸುವ ಭಿನ್ನಭಿನ್ನ ಕವಲುಗಳಾಗಿ ಕರ್ನಾಟಕದ ಈ ಜನಪದ ಸಮುದಾಯಗಳು ಕಾಣುತ್ತವೆ.

ತಂಬೂರಿಯವರ ಹಾಡುಗಳ ಧಾಟಿ, ಲಯ, ಶೈಲಿಯನ್ನು ಕುರಿತಂತೆ ವಿಶಿಷ್ಟ ವಿವರಗಳನ್ನು ಸಂಶೋಧಕರು ತಮ್ಮ ಬರಹದಲ್ಲಿ ಗುರುತಿಸಿದ್ದಾರೆ. ತಂಬೂರಿಯವರ ಹಾಡಿನ ಸುಮಾರು ಅರವತ್ತು ಧಾಟಿಗಳನ್ನು ಗುರುತಿಸಬಹುದಾಗಿ ಶ್ರೀ ರಾಜೇಗೌಡರು ಹೇಳುತ್ತಾರೆ. ಜನಪದ ಹಾಡುಗಳ ಧಾಟಿಯನ್ನು ಕುರಿತ ಗ್ರಹಿಕೆ ಸಂಪೂರ್ಣವಾಗಿ ನವೀನವಾದದ್ದು. ಏಕೆಂದರೆ ಇದುವರೆಗೂ ಜನಪದ ಸಾಹಿತ್ಯವನ್ನು ಗ್ರಹಿಸಿದ ಹಾಗೂ ಅವುಗಳ ಲಯಧಾಟಿಯನ್ನು ಸಾಹಿತ್ಯ ವಲಯದಲ್ಲಿ ಬಳಸಿದ ಅನೇಕ ಪ್ರಸಿದ್ಧ ವಿದ್ವಾಂಸರು ಜನಪದ ಹಾಡಿನ ಮಟ್ಟುಗಳನ್ನು ಮೂರು ಅಥವಾ ನಾಲ್ಕಕ್ಕೇ ಗುರುತಿಸಿ, ಅಷ್ಟೇ ಸಾಧ್ಯತೆಗಳು ಮಾತ್ರ ಸಾಧ್ಯವೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕ ಬಾರಿ ಈ ಕಾರಣದಿಂದ ಇಂಥ ಸಾಹಿತ್ಯಜ್ಞ ಜನಪದ ವಿದ್ವಾಂಸರು ಹೇಳುವ ಹಾಡೂ ಕನಿಷ್ಠ ಲಯ ಧಾಟಿಯ ಏಕತಾನತೆಗೆ ಒಳಗಾಗಿರುವುದನ್ನು ನಾನು ಗಮನಿಸಿದ್ದೇನೆ. ರಾಜೇಗೌಡರ ಈ ಹೊಸ ಗ್ರಹಿಕೆ, ಜನಪದ ಹಾಡುಗಳ ಅಭಿವ್ಯಕ್ತಿಯ ಧಾಟಿಯಲ್ಲಿ ಹೊಸ ಬಗೆಯ ಅನ್ವೇಷಣೆ ಬೇಕೆನ್ನುವುದನ್ನು ಸ್ಪಷ್ಟಪಡಿಸುತ್ತಿದೆ.

ರಾಜೇಗೌಡರ ಈ ಸಂಶೋಧನಾ ಕೃತಿಯಲ್ಲಿ ಪ್ರತಿ ಅಧ್ಯಾಯದಲ್ಲೂ ಹೊಸ ಸಂಗತಿಗಳನ್ನು ಹಿಡಿಯಬೇಕೆನ್ನುವ ಅವರ ಅನ್ವೇಷಕ ಪ್ರವೃತ್ತಿಯು ತಂಬೂರಿ ಸಂಪ್ರದಾಯ ಹಾಗೂ ಅವರ ಕಾವ್ಯವನ್ನು ಕುರಿತಂತೆ ಅನೇಕ ಹೊಸ ವಿಷಯಗಳನ್ನು ಮಂಡಿಸುತ್ತಿದೆ. ಮುಖ್ಯವಾಗಿ ಮೂರು, ನಾಲ್ಕು ಹಾಗೂ ಐದನೆಯ ಅಧ್ಯಾಯಗಳು ಈ ಪುಸ್ತಕದ ಜೀವನಾಡಿಗಳು. ಈ ಪ್ರಬಂಧದಲ್ಲಿ ಮಂಡನೆಯಾದ ಅನೇಕ ವಿವರಗಳು ಹೊಸ ಸಂವಾದ ಹಾಗೂ ಚರ್ಚೆಗೆ ಕಾರಣವಾದರೆ ಪ್ರಬಂಧದ ಮೌಲ್ಯವು ಇನ್ನಷ್ಟು ಹೆಚ್ಚುತ್ತದೆ ಎಂದು ನಾನು ಭಾವಿಸುತ್ತೇನೆ.

Writer - ಡಾ. ಬಸವರಾಜ ಕಲ್ಗುಡಿ

contributor

Editor - ಡಾ. ಬಸವರಾಜ ಕಲ್ಗುಡಿ

contributor

Similar News