ತೈಲ ಬೆಲೆ ವಿರೋಧಿಸಿ ಬೋರ್‌ವೆಲ್ ಮಾಲಕರ ಪ್ರತಿಭಟನೆ

Update: 2018-09-16 14:15 GMT

ಬೆಂಗಳೂರು, ಸೆ.16: ತೈಲ ಬೆಲೆ ಏರಿಕೆ ಹಾಗೂ ವಾಹನ ಬಿಡಿಭಾಗಗಳ ದುಬಾರಿಯಿಂದಾಗಿ 500ಕ್ಕೂ ಹೆಚ್ಚು ಬೋರ್‌ವೆಲ್ ಲಾರಿಗಳ ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ರಕ್ಷಣೆ ಮಾಡಬೇಕು ಎಂದು ಬೋರ್‌ವೆಲ್ ಮಾಲಕ ಸಂಘದ ಕಾರ್ಯದರ್ಶಿ ಎಸ್.ನಾಗೇಶ್ ಆಗ್ರಹಿಸಿದರು.

ರವಿವಾರ ಕೆಂಗೇರಿ ಉಪನಗರದ ಸೊನ್ನೇನಹಳ್ಳಿ ಮುಖ್ಯರಸ್ತೆಯಲ್ಲಿ ಸಮಾವೇಶಗೊಂಡು ಮಾತನಾಡಿದ ಅವರು, ಬಿಡಿಭಾಗಗಳ ಏರಿಕೆ ಮತ್ತು ತೈಲ ಬೆಲೆ ಹೇರಿಕೆಯಿಂದಾಗಿ, ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ನಿತ್ಯ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಬೋರ್‌ವೆಲ್ ಕೊರಿಸುವ ಗ್ರಾಹಕರು ಸಹಕಾರ ನೀಡುವಂತೆ ಮನವಿ ಮಾಡಿದರು.

ಸಂಘದ ನಿರ್ದೇಶಕ ಅನಿಲ್ ಕುಮಾರ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೋರ್‌ವೆಲ್ ಮಾಲಕರು ತೊಂದರೆಗೆ ಸಿಲುಕಿದ್ದು, ದೇಶದಲ್ಲೇ ಮೊದಲ ಬಾರಿಗೆ 500ಕ್ಕೂ ಹೆಚ್ಚು ವಾಹನಗಳನ್ನು ಒಂದೆಡೆ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದೇವೆ. ನಾವು ಸರಕಾರದ ವಿರುದ್ಧ ಮುಷ್ಕರ ನಡೆಸುತ್ತಿಲ್ಲ. ಬದಲಾಗಿ ನಮ್ಮ ಉದ್ಯಮವನ್ನು ಮುನ್ನೆಡಸಲು ಆರ್ಥಿಕವಾಗಿ ಸಾಧ್ಯವಾಗದೆ ನಷ್ಟಕ್ಕೀಡಾಗಿ ಎಲ್ಲರೂ ವಹಿವಾಟು ನಿಲ್ಲಿಸಿದ್ದೇವೆ ಎಂದು ತಿಳಿಸಿದರು.

ಲಾರಿ ಮಾಲಕರಿಗೆ ವಾರ್ಷಿಕ ಸುಮಾರು 40 ರಿಂದ 50 ಲಕ್ಷ ರೂ. ನಷ್ಟ ಉಂಟಾಗುತ್ತಿದೆ. ಆದ್ದರಿಂದ ಕೇಂದ್ರ ಸರಕಾರ ರೈತರು, ಲಾರಿ, ಬಸ್ ಮಾಲಕರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿ ಚದರಡಿಗೆ 60 ರೂ.ಗಳನ್ನು ಶುಲ್ಕವಾಗಿ ವಸೂಲಿ ಮಾಡುತ್ತಿದ್ದೇವೆ, ನಮಗೆ ಪ್ರತಿ ಬೋರ್‌ವೆಲ್ ಕೊರೆಯಲು ಕನಿಷ್ಠ 50 ರೂ. ವೆಚ್ಚವಾಗುತ್ತಿದೆ. ಈಗಾಗಲೇ, ಒಂದು ಕೋಟಿಗೂ ಹೆಚ್ಚು ಮೌಲ್ಯದ ವಾಹನಗಳನ್ನು ಇಟ್ಟುಕೊಂಡು ವಹಿವಾಟು ನಡೆಸುವುದು ದುರಸ್ತವಾಗಿದ್ದು, ನಷ್ಟದ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಿಳಿಸಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News