ಉನ್ನತ ಅಂಕ ಪಡೆಯುವ ಗ್ರಾಮ ಪಂಚಾಯತ್‌ಗಳಿಗೆ ಅಧಿಕ ಅನುದಾನ

Update: 2018-09-16 14:35 GMT

ಬೆಂಗಳೂರು, ಸೆ.16: ಶೀಘ್ರದಲ್ಲೇ ಗ್ರಾಮ ಪಂಚಾಯತ್ ಗಳನ್ನು ಶ್ರೇಣಿಕರಿಸಲಾಗುತ್ತದೆ. ಉನ್ನತ ಅಂಕ ಪಡೆದ ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಥಮ ದರ್ಜೆಯ ಗ್ರಾಮ ಪಂಚಾಯತ್‌ಗಳಿಗೆ ಶೇ. 80, ದ್ವಿತೀಯ ದರ್ಜೆ ಗ್ರಾಮ ಪಂಚಾಯತ್‌ಗಳಿಗೆ ಶೇ.70 ಹಾಗೂ ತೃತೀಯ ದರ್ಜೆಯಲ್ಲಿರುವ ಗ್ರಾಮ ಪಂಚಾಯತ್‌ಗಳಿಗೆ ಶೇ. 50 ರಷ್ಟು ಅನುದಾನ ನೀಡಲಾಗುವುದು, ಡಿಸ್ಟಿಂಕ್ಷನ್ ಪಡೆದ ಗ್ರಾಮ ಪಂಚಾಯತ್‌ಗಳಿಗೆ ಪೂರ್ಣ ಪ್ರಮಾಣದ ಅನುದಾನ ಒದಗಿಸಲಾಗುವುದು ಎಂದು ಹೇಳಲಾಗಿದೆ.

ರಾಜ್ಯದಲ್ಲಿ 6 ಸಾವಿರದ 24 ಗ್ರಾಮ ಪಂಚಾಯತ್‌ಗಳಿದ್ದು, 2017-18 ನೇ ಸಾಲಿನಲ್ಲಿ 14 ನೇ ಹಣಕಾಸು ಆಯೋಗದ ಅನುದಾನ ಪಡೆಯಲು ಪ್ರತಿಯೊಂದು ಗ್ರಾಮ ಪಂಚಾಯತ್‌ಗಳು ಆರ್ಥಿಕ ಶಿಸ್ತು ಹಾಗೂ ಗ್ರಾಮಗಳ ಆರೋಗ್ಯದ ಬಗ್ಗೆ ಕಾರ್ಯಕ್ಷಮತೆಯನ್ನು ತೋರಿಸಬೇಕಾಗುತ್ತದೆ. ನಾಲ್ಕು ಹಂತಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಈ ಸಂಬಂಧ ಪ್ರತಿಕಾ ಸಂಸ್ಥೆಯೊಂದಿಗೆ ಮಾತನಾಡಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ದೇಶಕ ಎಂ.ಕೆ.ಕೆಂಪೇಗೌಡ, ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಮಾರ್ಗಸೂತ್ರಗಳನ್ನು ಹೊರಡಿಸಲಾಗಿದೆ. 14 ನೆ ಹಣಕಾಸು ಆಯೋಗದ ಅಡಿಯಲ್ಲಿ ಪ್ರತಿವರ್ಷ ಕೇಂದ್ರ ಸರಕಾರದಿಂದ 2 ಸಾವಿರ ಕೋಟಿ ರೂ. ಪಡೆಯಲಾಗುತ್ತದೆ. ಗ್ರಾಮ ಪಂಚಾಯಲ್ಲಿನ ಜನ ಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಉಳಿದ ಅನುದಾನವನ್ನು ಕಾರ್ಯಕ್ಷಮತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುವುದು, ಗ್ರಾಮ ಪಂಚಾಯತ್‌ಗಳಲ್ಲಿ ಆರೋಗ್ಯಕರ ಪೈಪೋಟಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ರೀತಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯತ್‌ಗಳು ಆನ್‌ಲೈನ್‌ನಲ್ಲಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಬೇಕಾಗುತ್ತದೆ. ನಂತರ ಅಧಿಕಾರಿಗಳು ಮಾಹಿತಿಯನ್ನು ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News