ಎಸ್ಸಿ-ಎಸ್ಟಿಗೆ ನಿಗದಿಯಾದ ಹಣ ದರ್ಬಳಕೆ: ಬಸವರಾಜ್

Update: 2018-09-16 16:36 GMT

ಬೆಂಗಳೂರು, ಸೆ. 16: ಎಸ್ಸಿ-ಎಸ್ಟಿ ವರ್ಗದ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗೆ ನಿಗದಿಯಾದ ಹಣವನ್ನು ಸೇತುವೆ, ರಸ್ತೆ ನಿರ್ಮಾಣಕ್ಕೆ ಬಳಸುವ ಮೂಲಕ ದಲಿತರಿಗೆ ದಕ್ಕಬೇಕಾದ ಸೌಲಭ್ಯಗಳಿಂದ ವಂಚಿಸಲಾಗಿದೆ ಎಂದು ಕರ್ನಾಟಕ ದಲಿತ ಹಕ್ಕುಗಳ ಸಮಿತಿಯ ಸಹ ಸಂಚಾಲಕ ಬಸವರಾಜ್ ಆರೋಪಿಸಿದ್ದಾರೆ.

ರವಿವಾರ ರಾಜಾಜಿನಗರದ ಇಎಂಎಸ್ ಭವನದಲ್ಲಿ ಕರ್ನಾಟಕ ದಲಿತ ಹಕ್ಕುಗಳ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ರಕ್ಷಣೆಗಾಗಿ ದೇಶ ಪ್ರೇಮಿಗಳೆಲ್ಲ ಒಂದಾಗಿಯೆಂಬ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ನೀತಿ ಬದಲಿಸಲು ನಾವು ಹೋರಾಡಬೇಕಿದೆ. ದಲಿತರಿಗೆ 80ಸಾವಿರ ಕೋಟಿ ಹಣ ಮೀಸಲಿಟ್ಟಿರುವುದಾಗಿ ಹೇಳುತ್ತಿದ್ದ ರಾಜ್ಯ ಸರಕಾರ ಈ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ದಲಿತರ ಸ್ಥಿತಿಯಲ್ಲಿ ಬದಲಾವಣೆ ತರಲು ಸರಕಾರ ಕೂಡಲೇ ಪ್ರತಿ ಕುಟುಂಬಕ್ಕೆ 5ಎಕರೆ ಜಮೀನು ಮಂಜೂರು ಮಾಡುವ ಮೂಲಕ ದಲಿತರು ಸ್ವಾವಲಂಬಿಯಾಗಿ ಬದಕಲು ಉತ್ತೇಜನ ನೀಡುವ ಜತೆಗೆ ವಾಸಕ್ಕೆ ಯೋಗ್ಯವಾದ ಹಿತ್ತಲು ಸಹಿತ ವಸತಿಯನ್ನು ಮಂಜೂರು ಮಾಡಬೇಕು. ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಹ ಸಂಚಾಲಕ ಎನ್.ರಾಜಣ್ಣ ಮಾತನಾಡಿ, ಭಾರತಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷ ಕಳೆದರೂ ದಲಿತರು ಅಸ್ಪಶ್ಯತೆಯ ಕೂಪದಲ್ಲಿ ನರಳುವಂತ ಸ್ಥಿತಿ ಇರುವುದು, ತಾರತಮ್ಯದ ಸೂಚಕವಾಗಿದ್ದು, ಸುಪ್ರೀಂ ಕೋರ್ಟ್ ದಲಿತರ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಡ್ತಿ ಮೀಸಲಾತಿ ಕುರಿತು ನೀಡಿದ ತೀರ್ಪುಗಳು ದಲಿತ ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಡ್ತಿ ಮೀಸಲು ಸೌಲಭ್ಯದಿಂದ ದಲಿತರನ್ನು ವಂಚಿಸುವ ಕೇಂದ್ರ ಸರಕಾರದ ನೀತಿಯ ವಿರುದ್ಧ ನಾವು ಪ್ರತಿಭಟಿಸಬೇಕಾಗಿದೆ. ಸಂವಿಧಾನದ 117ನೇ ತಿದ್ದುಪಡಿ ಕಾಯ್ದೆ ಅಂಗೀಕಾರ ಮಾಡಿ 9ನೇ ಶೆಡ್ಯೂಲ್‌ಗೆ ಸೇರಿಸುವ ಮೂಲಕ ದಲಿತ ನೌಕರರ ಹಿತ ಕಾಪಾಡಲು ನಾವು ಧ್ವನಿಯಾಗಬೇಕಾಗಿದೆ ಎಂದರು.

ಗುಜರಾತ್‌ನ ಊನದಲ್ಲಿ ಹಸು ಚರ್ಮ ಸುಲಿದರು ಎಂಬ ಆರೋಪದಲ್ಲಿ ಅಮಾನವೀಯವಾಗಿ ದಾಳಿ ನಡೆಸಿರುವುದು, ಚಾಮರಾಜನಗರದಲ್ಲಿ ದಲಿತರ ತಲೆ ಕಡಿದ ಘಟನೆ, ಮರಕುಂಬಿಯಲ್ಲಿನ ಕೊಲೆ, ಹಾಸನದ ಸಿಂಗರನಹಳ್ಳಿ ದೇವಾಲಯ ಪ್ರವೇಶ ನಿರಾಕರಣೆ, ಮಂಡ್ಯದಲ್ಲಿ ಮರ್ಯಾದೆ ಹತ್ಯೆ, ಉಡುಪಿಯ ಮಡೆ ಸ್ನಾನ, ಪಂಕ್ತಿಭೇದ, ಬೆಂಡಿಗೇರಿಯಲ್ಲಿ ಮಲ ತಿನ್ನಿಸಿದ ಮುಂತಾದ ಘಟನೆಗಳು, ದಲಿತರ ಹೀನ ಸ್ಥಿತಿಯನ್ನು ನೆನಪಿಸುತ್ತವೆ ಎಂದು ವಿಷಾದಪಟ್ಟರು.

ಇಷ್ಟೊಂದು ವ್ಯಾಪಕ ಪ್ರಕರಣಗಳು ನಡೆಯುತ್ತಿದ್ದರು ಕಟ್ಟುನಿಟ್ಟಿನ ಕ್ರಮ ಜಾರಿಗೆ ತರುವ ಬದಲಿಗೆ ಕೇಂದ್ರ ಸರಕಾರ, ಈ ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ದಲಿತರ ಮೇಲಿನ ದೌರ್ಜನ್ಯಗಳು ವ್ಯಾಪಕವಾಗಿ ನಡೆಯಲು ಪ್ರೇರೇಪಿಸುತ್ತಿರುವುದು ಖಂಡನೀಯವಾಗಿದೆ ಎಂದರು.

ದೇಶದಲ್ಲಿ 2.3ಲಕ್ಷ ಹಾಗೂ ರಾಜ್ಯದಲ್ಲಿ 10ಸಾವಿರ ದಲಿತರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆ ತಿಳಿಸಿದೆ.

-ಬಸವರಾಜ್,  ದಲಿತ ಹಕ್ಕುಗಳ ಸಮಿತಿ ಸಹ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News