ಏಶ್ಯಕಪ್‌ನಿಂದ ಹೊರಗುಳಿದ ತಮೀಮ್ ಇಕ್ಬಾಲ್

Update: 2018-09-16 18:31 GMT

ದುಬೈ, ಸೆ.16: ಬಾಂಗ್ಲಾದೇಶದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಏಶ್ಯಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಏಶ್ಯಕಪ್‌ನ ಮೊದಲ ಪಂದ್ಯದ ಎರಡನೇ ಓವರ್‌ನಲ್ಲಿ ಸುರಂಗ ಲಕ್ಮಲ್ ಎಸೆದ ಚೆಂಡನ್ನು ಎದುರಿಸಲು ಹೋದ ಇಕ್ಬಾಲ್ ಅವರ ಬಲಮಣಿಕಟ್ಟಿಗೆ ಗಾಯವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ಕಾನಿಂಗ್‌ನಲ್ಲಿ ಅವರ ಮಧ್ಯ ಬೆರಳಿನಲ್ಲಿ ಬಿರುಕುಬಿಟ್ಟಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಆರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಇಕ್ಬಾಲ್ 47ನೇ ಓವರ್‌ನಲ್ಲಿ ಬಾಂಗ್ಲಾದೇಶದ 9ನೇ ವಿಕೆಟ್ ಪತನಗೊಂಡಾಗ ಕ್ರೀಸ್‌ಗೆ ವಾಪಸಾಗಿ ಎಲ್ಲರನ್ನು ಅಚ್ಚರಿಗೊಳಿಸಿದರು. ಶತಕ ವೀರ ಮುಶ್ಫಿಕುರ್ರಹೀಂಗೆ ಸಾಥ್ ನೀಡಿದ ಇಕ್ಬಾಲ್ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿದರು. ಇಕ್ಬಾಲ್ ಅವರ ಈ ಸಾಹಸವನ್ನು ವಿಶ್ವದೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ ಮೂಲಕ ಶ್ಲಾಘಿಸಿದ್ದಾರೆ. ಇಕ್ಬಾಲ್ ಅವರ ವೀರೋಚಿತ ಬ್ಯಾಟಿಂಗ್ ಫಲ ನೀಡಿದ್ದು ಬಾಂಗ್ಲಾದೇಶ 137 ರನ್‌ಗಳಿಂದ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News