26 ವರ್ಷಗಳಿಂದ ಈ ದೇಗುಲ ಸಂರಕ್ಷಣೆ ಮಾಡಿದ್ದು ಮುಸ್ಲಿಮರು!

Update: 2018-09-17 03:49 GMT

ಮುಝಾಫರ್‌ ನಗರ, ಸೆ.17: ನಗರದ ಲದ್ದೇವಾಲ ರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ, ಪುಟ್ಟ ಕೊಳಕು ಫಲಕವೊಂದು ಈ ಪ್ರದೇಶಕ್ಕೆ ಸ್ವಾಗತಿಸುತ್ತದೆ. ಇಲ್ಲಿ ಕಾಂಕ್ರಿಟ್ ಮನೆಗಳ ಸಾಲಿನ ನಡುವಿನ ಓಣಿಗಳು ಎಷ್ಟು ಇಕ್ಕಟ್ಟು ಎಂದರೆ ಕೇವಲ ನಾಲ್ಕು ಅಡಿ ಅಗಲ. ಇಂಥ ವಾತಾವರಣದಲ್ಲಿ ಹಿಂದೂ ಕುಟುಂಬಗಳು 1990ರ ದಶಕದಲ್ಲಿ ಬಿಟ್ಟುಹೋದ ಪುಟ್ಟ ದೇಗುಲವಿದೆ.

26 ವರ್ಷಗಳಿಂದ ಈ ದೇಗುಲದ ಸಂರಕ್ಷಣೆ ಹೊಣೆ ಇಲ್ಲಿನ ಮುಸ್ಲಿಂ ನಿವಾಸಿಗಳದ್ದು. ಪ್ರತಿ ದಿನ ದೇವಾಲಯ ಸ್ವಚ್ಛಗೊಳಿಸಿ, ಪ್ರತಿ ದೀಪಾವಳಿಗೆ ಸುಣ್ಣ ಬಳಿಯುತ್ತಾರೆ. ಆಕ್ರಮಣಕಾರರು ಹಾಗೂ ಬೀದಿ ಪ್ರಾಣಿಗಳಿಂದ ರಕ್ಷಿಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯದ ಲದ್ದೇವಾಲಾ ಪ್ರದೇಶದಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ನಡೆದ ಕೋಮುಗಲಭೆಯಲ್ಲಿ ಹಿಂದೂ ಕುಟುಂಬಗಳು ಊರು ಬಿಟ್ಟು ಹೋದದ್ದನ್ನು ಮೆಹರ್‌ಬಾನ್ ಅಲಿ (60) ನೆನಪಿಸಿಕೊಳ್ಳುತ್ತಾರೆ.

"ಜಿತೇಂದ್ರ ಕುಮಾರ್ ನನ್ನ ಆತ್ಮೀಯ ಸ್ನೇಹಿತ. ಉದ್ವಿಗ್ನತೆಯ ಹೊರತಾಗಿಯೂ ಊರು ಬಿಡದಂತೆ ಆತನನ್ನು ತಡೆಯುವ ಎಲ್ಲ ಪ್ರಯತ್ನ ಮಾಡಿದೆ. ಆದರೆ ಹಲವು ಹಿಂದೂ ಕುಟುಂಬಗಳ ಜತೆ ಅವರೂ ಊರು ಬಿಟ್ಟರು. ಕೆಲ ದಿನಗಳಲ್ಲಿ ವಾಪಸ್ಸಾಗುವುದಾಗಿ ಹೇಳಿ ಹೋದರು. ಆ ಬಳಿಕ ಇದುವರೆಗೂ ಇಲ್ಲಿನ ನಿವಾಸಿಗಳೇ ದೇವಾಲಯ ರಕ್ಷಿಸಿಕೊಂಡು ಬಂದಿದ್ದೇವೆ" ಎಂದು ವಿವರಿಸುತ್ತಾರೆ.

35 ಕುಟುಂಬಗಳು ವಾಸಿಸುವ ಇಲ್ಲಿ ಅಲಿಯಂಥ ಹಲವು ಮಂದಿ ಹಿಂದೂ ಬಾಂಧವರು ವಾಪಾಸಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ದೇವಾಲಯ 1970ರಲ್ಲಿ ನಿರ್ಮಾಣವಾಗಿದ್ದು, ಆಗ ಸುಮಾರು 20 ಹಿಂದೂ ಕುಟುಂಬಗಳು ಇಲ್ಲಿ ವಾಸವಿದ್ದವು ಎಂದು ಸ್ಥಳೀಯರು ಹೇಳುತ್ತಾರೆ. "ದೇವಾಲಯವನ್ನು ಅಚ್ಚುಕಟ್ಟಾಗಿ ನೋಡಿಕೊಂಡು ಬಂದಿದ್ದೇವೆ. ಹಿಂದೂಗಳು ವಾಪಸ್ಸಾಗಿ ದೇವಾಲಯವನ್ನು ತಮ್ಮ ನಿಯಂತ್ರಣಕ್ಕೆ ಪಡೆಯಬೇಕು ಎಂಬುದು ನಮ್ಮ ಬಯಕೆ" ಎಂದು ಝಹೀರ್ ಅಹ್ಮದ್ ಹೇಳುತ್ತಾರೆ.

"ಪ್ರತಿ ದೀಪಾವಳಿಗೆ ದೇವಾಲಯಕ್ಕೆ ಬಣ್ಣ ಹಚ್ಚಲು ಸ್ಥಳೀಯರು ಹಣ ಸಂಗ್ರಹಿಸುತ್ತಾರೆ. ಪ್ರತಿದಿನವೂ ಸ್ವಚ್ಛಗೊಳಿಸುತ್ತಾರೆ. ಆದರೆ ದೇವಾಲಯದಲ್ಲಿ ಮೂರ್ತಿ ಇಲ್ಲ. 1992ರವರೆಗೂ ಇದ್ದ ಮೂರ್ತಿಯನ್ನು ಹಿಂದೂ ಕುಟುಂಬಗಳು ಊರು ಬಿಡುವ ವೇಳೆ ತಮ್ಮೊಂದಿಗೆ ಒಯ್ದಿದ್ದಾರೆ" ಎಂದು ದೇವಾಲಯದ ಪಕ್ಕದ ನಿವಾಸಿ ಅಹ್ಮದ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News