ಸೌದಿಯಿಂದ ಮರಳುವವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಆಗ್ರಹ

Update: 2018-09-17 05:30 GMT

► ವಿಸ್ತೃತ ಅಧ್ಯಯನ ವರದಿ ಸಿದ್ಧಪಡಿಸಿದ ಸೌದಿ ಅರೇಬಿಯಾದ ಐಎಸ್‌ಎಫ್

ಸೌದೀಕರಣದ ಪರಿಣಾಮ ಸ್ವದೇಶಕ್ಕೆ ವಾಪಸ್ ಆಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರಿಂದ ಕರ್ನಾಟಕ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅನಿರೀಕ್ಷಿತ ತುರ್ತುಪರಿಸ್ಥಿತಿಯ ವಾತಾವರಣ ಸೃಷ್ಟಿಯಾದಂತಿವೆ. ಸೌದಿ ಅರೇಬಿಯಾದಲ್ಲಿ ನಡೆದ ಆರ್ಥಿಕ ಸ್ಥಿತ್ಯಂತರ ಮತ್ತು ಅನಿವಾಸಿ ಭಾರತೀಯ-ಸೌದಿ ಕನ್ನಡಿಗರ ಮೇಲೆ ಆದ ಪರಿಣಾಮದ ಬಗ್ಗೆ ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯ ಇಂಡಿಯನ್ ಸೋಶಿಯಲ್ ಫೋರಂ (ಐಎಸ್‌ಎಫ್) ಕರ್ನಾಟಕ ಇದರ ವತಿಯಿಂದ ಪ್ರಧಾನ ಕಾರ್ಯದರ್ಶಿ ಸಲಾಹುದ್ದೀನ್ ತುಮಕೂರು ನೇತೃತ್ವದ ತಂಡವು ಕಳೆದ 6 ತಿಂಗಳಲ್ಲಿ ಅಧ್ಯಯನ ನಡೆಸಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೆಲವು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ಅಧ್ಯಯನ ವರದಿಯ ಆಯ್ದ ಭಾಗವನ್ನು ಇಲ್ಲಿ ದಾಖಲಿಸಲಾಗಿದೆ.

ಸೌದಿ ಅರೇಬಿಯಾ ಮತ್ತು ಕನ್ನಡಿಗರ ನಂಟು ಸುಮಾರು 50 ವರ್ಷಗಳಷ್ಟು ಹಳೆಯದ್ದು. ಅಂದರೆ 1970ರ ಬಳಿಕ ದಕ್ಷಿಣ ಕನ್ನಡ, ಉಡುಪಿ, ಭಟ್ಕಳ ಮತ್ತಿತರ ಪ್ರದೇಶದ ಜನರು ಅದರಲ್ಲೂ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ಸೌದಿಯಲ್ಲಿ ಬದುಕು ಅರಸಿಕೊಂಡು ಹೋಗಿದ್ದರು. ಜೊತೆಗೆ ಮೈಸೂರು, ಹುಬ್ಬಳ್ಳಿ ಹಾಗೂ ಹೈದರಾಬಾದ್-ಕರ್ನಾಟಕ ಗಡಿ ಪ್ರದೇಶಗಳಿಂದಲೂ ಉದ್ಯೋಗಿಗಳು ಸೌದಿ ಸೇರಿದ್ದರು. ಸುಮಾರು 25 ಲಕ್ಷ ಅನಿವಾಸಿ ಕನ್ನಡಿಗರಿಗೆ ಸೌದಿ ಅರೇಬಿಯಾ ಆಶ್ರಯ ನೀಡಿತ್ತು. ಹಾಗಾಗಿಯೇ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದ್ದಿದ್ದವು. ಲಭ್ಯ ಅಂಕಿಅಂಶಗಳ ಪ್ರಕಾರ ಸೌದಿ ಕನ್ನಡಿಗರಿಂದ 2017-18ನೇ ಸಾಲಿನಲ್ಲಿ ರಾಜ್ಯದ ಆರ್ಥಿಕತೆಗೆ ಸುಮಾರು 100 ಕೋಟಿ ಅಮೆರಿಕನ್ ಡಾಲರ್ ಹರಿದುಬಂದಿತ್ತು.

ಸೌದಿಯ ಅನಿವಾಸಿ ಕನ್ನಡಿಗರಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಅಂದರೆ ಕಾರ್ಮಿಕರು, ಕುಶಲಕರ್ಮಿಗಳು, ಅರೆಕುಶಲ ಕರ್ಮಿಗಳು ಅಧಿಕ ಸಂಖ್ಯೆ ಯಲ್ಲಿದ್ದರು. ಈ ಶ್ರಮಿಕ ವರ್ಗದ ಆದಾಯವು ಪ್ರಮುಖವಾಗಿ ದಿನಬಳಕೆ, ಗೃಹಬಳಕೆಯ ವಸ್ತುಗಳು, ಮಕ್ಕಳ ವಿದ್ಯಾಭ್ಯಾಸ, ಕಟ್ಟಡ ನಿರ್ಮಾಣ, ಜಮೀನು ಖರೀದಿ ಹಾಗೂ ದಾನಧರ್ಮ ಇತ್ಯಾದಿಗೆ ವಿನಿಯೋಗವಾಗುತ್ತಿತ್ತು. ಇದು ರಾಜ್ಯದ ಅದರಲ್ಲೂ ಮುಖ್ಯವಾಗಿ ಕರಾವಳಿ ಪ್ರದೇಶದ ಆರ್ಥಿಕ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿತ್ತು.

ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆಯಿಂದಾಗಿ ಉಂಟಾದ ಆರ್ಥಿಕ ಕುಸಿತ, ಕೊಲ್ಲಿ ಪ್ರದೇಶದಲ್ಲಿನ ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿನ ಸೌದೀಕರಣ ಪ್ರಕ್ರಿಯೆಯು ಭಾರೀ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರು ತಮ್ಮ ತಾಯ್ನೆಲಕ್ಕೆ ಹಿಂದಿರುಗುವಂತೆ ಮಾಡುತ್ತಿವೆ. ಅಂದರೆ ಸೌದಿ ಅರೇಬಿಯಾ ಸರಕಾರವು ತನ್ನ ಆರ್ಥಿಕತೆಯನ್ನು ಕೇವಲ ತೈಲದ ಮೇಲೆ ಅವಲಂಬಿಸದೆ ವೈವಿಧ್ಯಮಯಗೊಳಿಸಲು ಹೊರಟಿದೆ. 'ವಿಷನ್ 2030' ಹೆಸರಿನಲ್ಲಿ ಅದು ತೈಲೇತರ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ವಿಶಾಲ ಮೂಲ ಹೂಡಿಕೆಯ ಉದ್ದೇಶದಲ್ಲಿ ಆರ್ಥಿಕ ವೈವಿಧ್ಯತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಆರ್ಥಿಕತೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಹಾಗೂ ಸೌದಿಯ ಯುವ ಜನಾಂಗದ ನಿರುದ್ಯೋಗ ಸಮಸ್ಯೆಯನ್ನು ಕೊನೆಗೊಳಿಸಲು ವೀಸಾ ನಿಬಂಧನೆಗಳನ್ನು ಹೇರಲಾಗುತ್ತಿದೆ. ಸೌದಿ ಅರೇಬಿಯಾವು ಇನ್ನು ಕೇವಲ ತೈಲದ ಮೇಲೆ ಅವಲಂಬಿತವಾಗುವುದು ಅಸಾಧ್ಯವಾಗಿದ್ದು, ಉದ್ಯೋಗ ಹಾಗೂ ಆರ್ಥಿಕತೆಯನ್ನು ಬಲಪಡಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದ್ಯೋಗ ವಲಯದಲ್ಲಿ ಸರಕಾರವು ಸೌದೀಕರಣ ನೀತಿಯನ್ನು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿದೆ.

2017ರ ಎಪ್ರಿಲ್‌ನಿಂದ ಸೌದಿ ಅರೇಬಿಯಾದ ಶಾಪಿಂಗ್‌ಮಾಲ್‌ಗಳಲ್ಲಿ ವಿದೇಶಿಯರು ಕೆಲಸ ನಿರ್ವಹಿಸದಂತೆ ಕಾರ್ಮಿಕ ಇಲಾಖೆ ನಿರ್ಬಂಧ ಹೇರಿತ್ತು. 2018ರ ಜನವರಿಯ ಬಳಿಕ ವಿದೇಶಿ ಕಾರ್ಮಿಕರನ್ನು ನೇಮಿಸುವ ಉದ್ಯೋಗದಾತರು ವಲಸಿಗ ತೆರಿಗೆಯನ್ನೂ ಪಾವತಿಸುತ್ತಿದ್ದು, ಇದು ವಿದೇಶಿಯರಿಗಿಂತ ಸೌದಿ ನಾಗರಿಕರ ನೇಮಕಕ್ಕೆ ಉತ್ತೇಜನ ನೀಡಿದಂತಿವೆ. 2017ರ ಜುಲೈ ಬಳಿಕ ವಲಸಿಗರು ತಮ್ಮನ್ನು ಅವಲಂಬಿಸಿರುವ ಕುಟುಂಬದ ಸದಸ್ಯರ ಮೇಲೂ ಅಧಿಕ ಕೌಟುಂಬಿಕ ತೆರಿಗೆ ಹೇರಿದೆ. ಅಂದರೆ ಪ್ರತೀ ಅವಲಂಬಿತರ ಮೇಲೆ ಮಾಸಿಕ 400 ಸೌದಿ ರಿಯಾಲ್‌ಗಳನ್ನು 2020ರ ತನಕ ಪಾವತಿಸಬೇಕಿದೆ. ಇದು ಭಾರತೀಯ ಕಾರ್ಮಿಕರ ಅವಕಾಶಗಳನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ, ತಮ್ಮ ಉಳಿತಾಯಕ್ಕೂ ಹೊಡೆತ ನೀಡಲಿದೆ. 2018ರ ಜನವರಿಯಲ್ಲಿ ತೆರಿಗೆ ಮತ್ತು ಶೇ.5ರಷ್ಟು ಮೌಲ್ಯವರ್ಧಿತ ತೆರಿಗೆಯನ್ನೂ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಜೀವನ ನಿರ್ವಹಣಾ ವೆಚ್ಚವು ತೀವ್ರವಾಗಿ ಏರಿಕೆಯಾಗಲಿದೆ.

ಅನಿವಾಸಿ ಸೌದಿ ಕನ್ನಡಿಗರ ಮೇಲೆ ಬೀರುತ್ತಿರುವ ಪರಿಣಾಮ

ಈ ವರ್ಷದ ಸೆಪ್ಟಂಬರ್ 11ರ ಬಳಿಕ ಸೌದಿ ಅರೇಬಿಯಾದಲ್ಲಿ ನಿರ್ಬಂಧಿಸಲ್ಪಟ್ಟ 12 ವಲಯ ಗಳಲ್ಲಿ ಬಹುಪಾಲು ಅನಿವಾಸಿ ಭಾರತೀಯರು ಕೆಲಸ ನಿರ್ವಹಿಸುವ ಕಿರು ಮತ್ತು ಮಧ್ಯಮ ಕೈಗಾರಿಕೆಗಳು ಕೂಡಾ ಒಳಪಡುತ್ತವೆ. ಈ ವಲಯಗಳನ್ನು ಹೊಸ ನಿಯಮಗಳು ತೀವ್ರವಾಗಿ ಬಾಧಿಸಲಿವೆ. ಉದ್ಯೋಗ ನಷ್ಟ, ಕೌಟುಂಬಿಕ ತೆರಿಗೆ ಪಾವತಿಯಿಂದಾಗಿ ಉಳಿತಾಯದಲ್ಲಿ ಕುಸಿತ ಹಾಗೂ ಇದರಿಂದ ತಮ್ಮ ಸ್ವಂತ ಊರಿಗೆ ಕಳುಹಿಸಲಾಗುತ್ತಿದ್ದ ಮೊತ್ತದಲ್ಲಿ ಕಡಿತವಾಗಲಿದೆ. ಇದು ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ತೀವ್ರ ಪರಿಣಾಮ ಉಂಟು ಮಾಡಲಿದೆ. ಹಠಾತ್ತಾಗಿ ಉಂಟಾದ ನಿರುದ್ಯೋಗದಿಂದಾಗಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಲಿದ್ದು, ಸಾಮಾಜಿಕ ಅಸ್ಥಿರತೆಯೂ ಎದುರಾಗಲಿದೆ. 

ಸೌದಿ ಅರೇಬಿಯಾವು ಯುವ ಜನಾಂಗ ಮತ್ತು ಪದವೀಧರರಿಗೆ ಉದ್ಯೋಗಾವಕಾಶ ಗಳನ್ನು ನೀಡತೊಡಗಿದೆ. ಸೌದಿ ಅರೇಬಿಯಾದಿಂದ ಇಳಿಮುಖಗೊಂಡ ಹಣಕಾಸಿನ ಒಳಹರಿವು, ಅದರೊಂದಿಗೆ ಅಂತರ್ ಸಂಬಂಧ ಹೊಂದಿರುವ ದಿನಬಳಕೆಯ ವಸ್ತುಗಳ ಖರೀದಿ, ಶಿಕ್ಷಣ, ಆರೋಗ್ಯ ಕ್ಷೇತ್ರ, ವ್ಯಾಪಾರ, ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ ಹಾಗೂ ವಿಮಾನ ನಿಲ್ದಾಣ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

► ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಸೌದಿ ಅರೇಬಿಯಾದ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಡಾ.ಅಲಿ ಅಲ್ ಘಫೀ ಈ ಹಿಜರಿ ವರ್ಷಾರಂಭ ಅಂದರೆ 2018ರ ಸೆಪ್ಟೆಂಬರ್ 11ರ ಬಳಿಕ 12 ವಲಯಗಳಲ್ಲಿ ವಿವಿಧ ಹಂತಗಳಲ್ಲಿ ವಲಸಿಗರ ನೇಮಕಾತಿಗೆ ನಿರ್ಬಂಧ ಹಾಗೂ ಸ್ವದೇಶಿಗಳ ನೇಮಕಾತಿ ಪ್ರೋತ್ಸಾಹಕ್ಕಾಗಿ ಸಚಿವಾಲಯದ ಹೊಸ ತೀರ್ಮಾನವನ್ನು ಹೊರಡಿಸಿದ್ದಾರೆ. ಅಂದರೆ ಕಾರು ಹಾಗೂ ಮೋಟಾರ್ ಬೈಕ್ ಶೋರೂಮ್ಗಳು, ರೆಡಿಮೇಡ್ ಬಟ್ಟೆ ಮಳಿಗೆಗಳು, ಗೃಹ ಮತ್ತು ಕಚೇರಿ ಪೀಠೋಪಕರಣ ಮಳಿಗೆಗಳು, ಗೃಹಬಳಕೆ ಮತ್ತು ಅಡುಗೆ ಪಾತ್ರೆಗಳ ಅಂಗಡಿಗಳಲ್ಲಿ ಶೇ.70ರಷ್ಟು ಸೌದೀಕರಣಗೊಳಿಸಲಾಗಿದೆ. ಇದರ ಪರಿಣಾಮವು ದಮ್ಮಾಮ್, ರಿಯಾದ್, ಜಿದ್ದಾದ ಮೇಲಾಗಿದೆ. ಅಲ್ಲಿನ ಅಂಗಡಿ ಮಾರುಕಟ್ಟೆಗಳಲ್ಲಿ ಅನಿವಾಸಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದು, ಸೆ.11ರ ಬಳಿಕ ಒಂದಷ್ಟು ರಿಯಾಯಿತಿ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅಂದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ವಿದೇಶಿ ಕಾರ್ಮಿಕರನ್ನು ಪತ್ತೆ ಹಚ್ಚುತ್ತಿದ್ದಾರೆ. ಸಿಕ್ಕಿಬಿದ್ದರೆ ಭಾರೀ ಮೊತ್ತದ ದಂಡ ಪಾವತಿಸಬೇಕಾದೀತು ಎಂದು ಹೆದರಿ ಅನೇಕರು ಅಡಗಿ ಕೂರುವಂತಾಗಿದೆ. ಕೆಲವರು ಈಗಾಗಲೇ ತವರು ಸೇರಲಾರಂಭಿಸಿದ್ದಾರೆ.

► 2018ರ ನವೆಂಬರ್ 9ರಿಂದ ಇಲೆಕ್ಟ್ರಾನಿಕ್ಸೃ್ ಅಂಗಡಿಗಳು, ಕೈಗಡಿಯಾರ ಮತ್ತು ಗಡಿಯಾರದ ಅಂಗಡಿಗಳು, ಕನ್ನಡಕಗಳ ಅಂಗಡಿಗಳಲ್ಲಿ ವಲಸಿಗರ ನೇಮಕಾತಿಯನ್ನು ನಿರ್ಬಂಧಿಸಲಾಗಿದೆ.

► 2019ರ ಜನವರಿ 7ರಿಂದ ವೈದ್ಯಕೀಯ ಸಾಮಗ್ರಿ ಮತ್ತು ಸರಬರಾಜು ಮಳಿಗೆಗಳು, ಕಟ್ಟಡ ಸಾಮಗ್ರಿ ಮಳಿಗೆಗಳು, ಆಟೊ ಬಿಡಿ ಭಾಗಗಳ ಮಳಿಗೆಗಳು, ಕಾರ್ಪೆಟ್ ಮಾರಾಟ ಮಳಿಗೆಗಳು, ಸಿಹಿತಿನಿಸು ಅಂಗಡಿಗಳಲ್ಲಿ ವಲಸಿಗರ ನೇಮಕಾತಿಯನ್ನೂ ನಿರ್ಬಂಧಿಸಿ ಆದೇಶಿಸಿದೆ.

ರಾಜ್ಯ ಸರಕಾರಕ್ಕೆ ಮಹತ್ವದ ಬೇಡಿಕೆಗಳ ಪಟ್ಟಿ

ಗಲ್ಫ್‌ನಿಂದ ಹಿಂದಿರುಗುತ್ತಿರುವುದರಿಂದ ಎದುರಾಗುವ ಬಿಕ್ಕಟ್ಟು, ರಾಜ್ಯದ ಜನತೆಯ ಸಾಮಾಜಿಕ ಬದುಕು ಮತ್ತು ಆರ್ಥಿಕತೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಲಿದೆ. ಆದ್ದರಿಂದ, ಸೌದಿಯಿಂದ ಹಿಂದಿರುಗುತ್ತಿರುವ ವಲಸಿಗರ ಹಾಗೂ ಸೌದಿ ಅರೇಬಿಯಾದಲ್ಲಿಯೇ ತಮ್ಮ ವಾಸ ಮುಂದುವರಿಸುವ ಅನಿವಾಸಿಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಪ್ರಾಯೋಗಿಕ ಹಾಗೂ ಸೂಕ್ತ ಕಾಯ್ದೆಗಳನ್ನು ರಾಜ್ಯ ಸರಕಾರ ರೂಪಿಸಬೇಕು ಎಂದು ಇಂಡಿಯನ್ ಸೋಶಿಯಲ್ ಫೋರಂ ಕೆಲವು ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟಿವೆ.

ಡೇಟಾ ಬ್ಯಾಂಕ್: ಪ್ರಸಕ್ತ ಬಿಕ್ಕಟ್ಟಿನ ಪರಿಣಾಮಕ್ಕೊಳಗಾಗಿರುವ ಅನಿವಾಸಿ ಕನ್ನಡಿಗರ ನಿಖರ ಮಾಹಿತಿಗಳನ್ನು ಸಂಗ್ರಹಿಸಲು ಆನ್‌ಲೈನ್ ದಾಖಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ಶಿಕ್ಷಣ: 2019ರಲ್ಲಿ ಭಾರೀ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರ ಕುಟುಂಬಗಳು ಸ್ವದೇಶಕ್ಕೆ ಹಿಂದಿರುಗುವ ಸಾಧ್ಯತೆ ಇದೆ. ಈ ಮಧ್ಯೆ ಅನಿವಾಸಿ ಭಾರತೀಯ ಸ್ಥಾನಮಾನದಿಂದಾಗಿ ಅನಿವಾಸಿ ಭಾರತೀಯ ಹೆತ್ತವರ ಮಕ್ಕಳು ವೃತ್ತಿಪರ ಶಿಕ್ಷಣ ಪ್ರವೇಶಕ್ಕೆ ದುಬಾರಿ ಶುಲ್ಕ ಪಾವತಿಸಬೇಕಾಗಿದೆ. ಅಂದರೆ ಅನಿವಾಸಿ ಕನ್ನಡಿಗರ ಮಕ್ಕಳಿಗೆ ವೈದ್ಯಕೀಯ, ವ್ಯವಹಾರ ಅಧ್ಯಯನ, ಇಂಜಿನಿಯರಿಂಗ್ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಲ್ಲಿ ಮೀಸಲಾತಿ ನೀಡಬೇಕು. ಶೈಕ್ಷಣಿಕ ಸಂಸ್ಥೆಗಳು ಅರ್ಹತೆಯ ಆಧಾರದ ಮೇಲೆ ದಾಖಲಾತಿ ನಡೆಸಬೇಕು. ವಾಸ್ತವ್ಯ ವಿವರಗಳಂತಹ ವಿಷಯಗಳನ್ನು ತೆಗೆದುಹಾಕಬೇಕು. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕಿಳಿಸಬೇಕು.

ಶೈಕ್ಷಣಿಕ ವರ್ಷವು ಮಾರ್ಚ್/ಎಪ್ರಿಲ್‌ನಲ್ಲಿ ಕೊನೆಗೊಳ್ಳುವುದರಿಂದ ಮುಂದಿನ ವರ್ಷಗಳಲ್ಲಿ ಬಹುಪಾಲು ಕುಟುಂಬಗಳು ಭಾರತಕ್ಕೆ ಹಿಂದಿರುಗಲಿವೆ. ಈ ಹಿನ್ನೆಲೆಯಲ್ಲಿ ಸ್ವಇಚ್ಛೆಯಿಂದ ಭಾರತಕ್ಕೆ ಮರಳಿದ ಕುಟುಂಬದ ಮಕ್ಕಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ದಾಖಲಾತಿ ಸಂದರ್ಭಗಳಲ್ಲಿ ವಾಸ್ತವ್ಯ ಪ್ರಮಾಣ ಪತ್ರ ಮೊದಲಾದ ನಿಯಮಗಳನ್ನು ತೆಗೆದುಹಾಕಬೇಕು.

ಹೆತ್ತವರ ಅನಿವಾಸಿ ಭಾರತೀಯ ಸ್ಥಾನಮಾನದಿಂದಾಗಿ ಸರಕಾರಿ ಸೌಲಭ್ಯಗಳಾದ ಪಡಿತರ ಚೀಟಿ, ಸರಕಾರಿ ವಿದ್ಯಾರ್ಥಿ ವೇತನ, ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲಾ ದಾಖಲಾತಿ ಮೊದಲಾದವುಗಳ ಅಲಭ್ಯತೆಯು ಕಡಿಮೆ ಆದಾಯವಿರುವ ಅನಿವಾಸಿ ಭಾರತೀಯರ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಹೆತ್ತವರ ಅನಿವಾಸಿ ಭಾರತೀಯ ಸ್ಥಾನಮಾನದಿಂದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ದೊರಕುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಬೇಕು.

ವೈದ್ಯಕೀಯ: ಆರ್ಥಿಕವಾಗಿ ಹಿಂದುಳಿದ ಮತ್ತು ಗಲ್ಫ್‌ನಿಂದ ಹಿಂದಿರುಗಿ ಬಂದಿರುವ ಅನಿವಾಸಿ ಭಾರತೀಯರಿಗೆ ಸರಕಾರದ ಆರೋಗ್ಯ ಯೋಜನೆ ದೊರಕುವಂತಾಗಬೇಕು.

ಉದ್ಯಮ ಸ್ಥಾಪನೆ: ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತ ಜಮೀನು, ವಿದ್ಯುತ್ ಸರಬರಾಜು, ಅನುಮತಿ ಪತ್ರ ಮೊದಲಾದ ವಿಷಯಗಳಲ್ಲಿ ಸೌದಿಯಿಂದ ಹಿಂದಿರುಗಿದವರಿಗೆ ಆದ್ಯತೆ ನೆಲೆಯಲ್ಲಿ ಸಹಕಾರ ನೀಡಬೇಕು.

ಉದ್ಯೋಗ ಸೃಷ್ಟಿ ಮತ್ತು ಸ್ವಯಂ ಉದ್ಯೋಗ: ಗಲ್ಫ್‌ನಿಂದ ಹಿಂದಿರುಗಿದವರಿಗೆ ಸ್ವಯಂ ಉದ್ಯೋಗ ಯೋಜನೆಗೆ ಸಹಾಯ ನೀಡಬೇಕು. ಸೌದಿಯಿಂದ ಹಿಂದಿರುಗುವ ಅನಿವಾಸಿಗರಿಗೆ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ನೀಡಬೇಕು. ಅಲ್ಲದೆ ಶವರ್ಮ ತಯಾರಿಕೆ, ಸಣ್ಣ ಸೂಪರ್ ಮಾರ್ಕೆಟ್ ನಿರ್ವಹಣೆ, ಮೊಬೈಲ್ ಫೋನ್ ತಾಂತ್ರಿಕ ನೈಪುಣ್ಯತೆ, ಮೆಶಿನ್ ಆಪರೇಟಿಂಗ್, ವೆಲ್ಡಿಂಗ್ ನೈಪುಣ್ಯತೆ ಮೊದಲಾದ ಕೌಶಲಗಳನ್ನು ಹೊಂದಿದ ಕಾರ್ಮಿಕರಿಗೆ ಆರ್ಥಿಕ ಸಹಾಯ ನೀಡಿ ಸ್ವಾವಲಂಬಿಗಳಾಗುವಂತೆ ಮಾಡಬೇಕು. ಸೌದಿಯಲ್ಲಿ ಚಾಲಕ ವೃತ್ತಿಯಲ್ಲಿದ್ದು, ಊರಿಗೆ ಮರಳುವ ಅನಿವಾಸಿಗಳಿಗೆ ಸರಕಾರಿ ಸಾರಿಗೆ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಬೇಕು.

ಸರಕಾರಿ ದಾಖಲೆಗಳು: ಆಧಾರ್ ಕಾರ್ಡ್/ಐಡಿ ಕಾರ್ಡ್ ಅಥವಾ ಇತರ ಯಾವುದೇ ಸರಕಾರಿ ದಾಖಲೆ ಪತ್ರಗಳನ್ನು ಪಡೆಯಲು ಮುಂಗಡ ಕಾಯ್ದಿರಿಸಬೇಕಾಗಿರುವುದರಿಂದ ಹಾಗೂ ಅದು ವಿಳಂಬವಾಗುತ್ತಿರುವುದರಿಂದ ತುಂಬಾ ಕಡಿಮೆ ಅವಧಿಯ ರಜೆಯಲ್ಲಿ ತಮ್ಮೂರಿಗೆ ಬರುವ ಅನಿವಾಸಿ ಭಾರತೀಯರಿಗೆ ಅನನುಕೂಲವಾಗುತ್ತಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂದರೆ ಕಿರು ಅವಧಿಯ ರಜೆಯಲ್ಲಿ ಭಾರತಕ್ಕೆ ಬರುವ ಅನಿವಾಸಿಗಳಿಗೆ ಆಧಾರ್, ಪಾನ್ ಕಾರ್ಡ್ ಇತ್ಯಾದಿ ದಾಖಲೆ ಗಳನ್ನು ಆದ್ಯತೆಯಲ್ಲಿ ಪಡೆಯಲು ಅನಿವಾಸಿ ಭಾರತೀಯ ಗುರುತಿನ ಚೀಟಿ ನೀಡಬೇಕು.

ನಮ್ಮ ಊರು ನಮ್ಮ ನಾಡು: ಸೌದಿಯಲ್ಲಿರುವ ಅನಿವಾಸಿ ಭಾರತೀಯರು ಹಲವಾರು ಸರಕಾರೇತರ ಸಂಘಗಳನ್ನು ನಡೆಸುತ್ತಿದ್ದಾರೆ. ಈ ಸಂಘಗಳನ್ನು 'ನಮ್ಮ ಊರು ನಮ್ಮ ನಾಡು' ಎಂದು ಪರಿಗಣಿಸಿ ಸರಕಾರ ಸಹಾಯ ನೀಡಬೇಕು.

ಸಾಮಾಜಿಕ ಭದ್ರತಾ ಯೋಜನೆಗಳು/ ಪಿಂಚಣಿ ಯೋಜನೆ: ಇಳಿಗಾಲಕ್ಕೆ ಸಹಕಾರಿಯಾಗಲು ಬಹುಪಾಲು ವಲಸಿಗರಿಗೆ ಯಾವುದೇ ವೃದ್ಧಾಪ್ಯ ಯೋಜನೆಗಳಿಲ್ಲ. ಇದಕ್ಕಾಗಿ ಕರ್ನಾಟಕ ಸರಕಾರದಿಂದ ಸಮಾನ ಕೊಡುಗೆ ಇರುವ ವೃದ್ಧಾಪ್ಯ ಯೋಜನೆಗಳನ್ನು ಆರಂಭಿಸಬೇಕು

ಜಿಲ್ಲಾ ಮಟ್ಟದಲ್ಲಿ ಕಲ್ಯಾಣ ಕೇಂದ್ರಗಳ ಸ್ಥಾಪನೆ: ಸೌದಿ ಅರೇಬಿಯಾದಿಂದ ಹಿಂದಿರುಗುವ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಾಗರೋತ್ತರ ಅನಿವಾಸಿ ಕರ್ನಾಟಕ ಕಲ್ಯಾಣ ವಿಭಾಗವನ್ನು ತೆರೆಯಬೇಕು.

ಕರ್ನಾಟಕ ಸಹಾಯವಾಣಿ/ಜಿಲ್ಲಾ ಮಟ್ಟದ ಮಾಹಿತಿ ಕೇಂದ್ರಗಳು: ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದ ಹಿಂದಿರುಗುತ್ತಿರುವ ಅನಿವಾಸಿ ಕನ್ನಡಿಗರ ಪುನರ್ವಸತಿ ಪ್ರಕ್ರಿಯೆಗಾಗಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಬೇಕು. ಈ ಅನಿವಾಸಿಗಳು ಇತರೆ ವಿದೇಶ ಮಾರುಕಟ್ಟೆಗಳಲ್ಲಿ ಕೆಲಸ ನಿರ್ವಹಿಸಲು ಸಹಕಾರಿಯಾಗುವಂತೆ ಸೂಕ್ತ ಸಹಾಯವನ್ನು ನೀಡಬೇಕು.

ನೋಂದಣಿ ಕೇಂದ್ರ ಶೀಘ್ರ ಸ್ಥಾಪನೆ

ಸೌದೀಕರಣದಿಂದಾಗಿ ಸಾಕಷ್ಟು ಸಂಖ್ಯೆಯ ಜನರು ತವರೂರಿಗೆ ಮರಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಸೌದಿಯಿಂದ ಮರಳಿ ಬಂದವರ ನೋಂದಣಿ ಮಾಡಿಸಿಕೊಳ್ಳಲು ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲು ಉದ್ದೇಶಿಸಿದ್ದ ನೋಂದಣಿ ಕೇಂದ್ರವನ್ನು ತೆರೆಯಲು ಆಗಲಿಲ್ಲ. ಶೀಘ್ರ ಅದನ್ನು ತೆರೆಯಲಾಗುವುದು.

 -ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News