ಮಾಲಿನ್ಯದಲ್ಲೂ ಮಸಲತ್ತು

Update: 2018-09-17 06:08 GMT

ಮಾಲಿನ್ಯವೆಂಬುದು ಎಲ್ಲೋ ದೂರದ ಮುಂಬೈ, ಬೆಂಗಳೂರು, ಲಂಡನ್, ನ್ಯೂಯಾರ್ಕ್‌ನಂತಹ ನಗರಗಳನ್ನಷ್ಟೇ ಕಾಡುವ ಒಂದು ಸಾಂಕ್ರಾಮಿಕವೆಂದು ನಗರಗಳಿಂದ ದೂರ ಹಳ್ಳಿಗಳಲ್ಲಿ ತಮ್ಮ ಪಾಡಿಗೆ ತಾವು ಬದುಕುವವರು ತಿಳಿಯುವ ಕಾಲ ಕಳೆದು ಹೋಗಿದೆ. ಅಣುಬಾಂಬ್ ಸ್ಫೋಟದ ಬಳಿಕ ಸಂಭವಿಸುವ ಗಡಿ ರಹಿತವಾದ ಅಣು ವಿಕಿರಣದಂತೆಯೇ ಮಾಲಿನ್ಯವು ಜಗದಗಲ ಜನರ ಜೀವಬಲಿ ಪಡೆಯುತ್ತಿದೆ .

ದಶಕಗಳ ಹಿಂದೆ ವಿಶ್ವದ ಬೃಹತ್ ನಗರಗಳನ್ನಷ್ಟೆ ಕಾಡುತ್ತಿದ್ದ ಪರಿಸರ ಮಾಲಿನ್ಯ ಇದೀಗ ಚಿಕ್ಕಪುಟ್ಟ ಪಟ್ಟಣಗಳ, ಜಿಲ್ಲಾ ಕೇಂದ್ರಗಳ ನಿವಾಸಿಗಳ ಮನೆ ಬಾಗಿಲನ್ನು ತಟ್ಟಲಾರಂಭಿಸಿದೆ. ಇತ್ತೀಚೆಗೆ, ಕಳೆದ ಆಗಸ್ಟ್ 3 ಮತ್ತು 4ರ ರಾತ್ರಿ ವೇಳೆ ಉಡುಪಿಯ ನಿವಾಸಿಗಳು ಆಕಾಶದಿಂದ ಬೀಳುತ್ತಿದ್ದ ನುಣ್ಣಗೆಯ ಬಿಳಿ ಪುಡಿಯನ್ನು ಗಮನಿಸಿದರು. ಮರುದಿನ ಬೆಳಗ್ಗೆ ತಮ್ಮ ವಾಹನಗಳ ಮೇಲೆ ಹಾಗೂ ಗಿಡ ಮರಗಳ ಎಲೆಗಳ ಮೇಲೆ ಅದು ಶೇಖರವಾಗಿರುವುದು ಕಂಡು ಬಂತು. ಅದಕ್ಕೆ ಸ್ವಲ್ಪ ಉಪ್ಪಿನ ರುಚಿ ಮತ್ತು ತೀವ್ರತರವಾದ ವಾಸನೆಯಿರುವುದನ್ನು ಕೆಲವರು ಗಮನಿಸಿದರು. ಅದನ್ನು ಪರೀಕ್ಷಿಸಿದ ಸುರತ್ಕಲ್‌ನ ಎನ್‌ಐಟಿಕೆ ತಜ್ಞರು ಅದು ಚರ್ಮ ಮತ್ತು ಶ್ವಾಸಕೋಶದ ಅಲರ್ಜಿಗಳನ್ನು ಹಾಗೂ ಕ್ಯಾನ್ಸರನ್ನು ಉಂಟುಮಾಡಬಲ್ಲದು ಎಂದರು.

ಮಾಲಿನ್ಯವೆಂಬುದು ಎಲ್ಲೋ ದೂರದ ಮುಂಬೈ, ಬೆಂಗಳೂರು, ಲಂಡನ್, ನ್ಯೂಯಾರ್ಕ್‌ನಂತಹ ನಗರಗಳನ್ನಷ್ಟೇ ಕಾಡುವ ಒಂದು ಸಾಂಕ್ರಾಮಿಕವೆಂದು ನಗರಗಳಿಂದ ದೂರ ಹಳ್ಳಿಗಳಲ್ಲಿ ತಮ್ಮ ಪಾಡಿಗೆ ತಾವು ಬದುಕುವವರು ತಿಳಿಯುವ ಕಾಲ ಕಳೆದು ಹೋಗಿದೆ. ಅಣುಬಾಂಬ್ ಸ್ಫೋಟದ ಬಳಿಕ ಸಂಭವಿಸುವ ಗಡಿ ರಹಿತವಾದ ಅಣು ವಿಕಿರಣದಂತೆಯೇ ಮಾಲಿನ್ಯವು ಜಗದಗಲ ಜನರ ಜೀವಬಲಿ ಪಡೆಯುತ್ತಿದೆ . ಲಭ್ಯ ವರದಿಗಳ ಪ್ರಕಾರ, 2015ರಲ್ಲಿ ವಿಶ್ವದಲ್ಲಿ 90 ಲಕ್ಷ ಮಂದಿ ವಿವಿಧ ರೀತಿಯ ಮಾಲಿನ್ಯಗಳಿಂದಾಗಿ ಮೃತಪಟ್ಟರು. ಜಲಮಾಲಿನ್ಯವು ದಿನವೊಂದರ ಸುಮಾರು 14,000 ಸಾವುಗಳಿಗೆ ಕಾರಣ ವಾಗಿದೆ. 2013ರಲ್ಲಿ ಭಾರತದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಮಲಿನ ಜಲ ಸೇವನೆ ಕಾರಣಗಳಿಂದಾಗಿ ಅನಾರೋಗ್ಯ ಪೀಡಿತರಾದರು ಮತ್ತು 1,535 ಮೃತಪಟ್ಟರು. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು. ವಿಶ್ವ ಆರೋಗ್ಯ ಸಂಸ್ಥೆ 2007ರಲ್ಲಿ ಅಂದಾಜಿಸಿದಂತೆ ಪ್ರತಿವರ್ಷ ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ 5ಲಕ್ಷ ಮಂದಿ ಸಾಯುತ್ತಾರೆ. ಮುಂದುವರಿದ ರಾಷ್ಟ್ರಗಳು ತಮ್ಮ ತಮ್ಮ ದೇಶಗಳಲ್ಲಿ ಮಾಲಿನ್ಯದ ಪ್ರಮಾಣವನ್ನು ಕಡಿತಗೊಳಿಸಿ ವಿಶ್ವಮಾಲಿನ್ಯ ಪ್ರತಿಶತದಲ್ಲಿ ತಮ್ಮ ಪಾಲು ತುಂಬಾ ಕಡಿಮೆ ಇದೆಯೆಂದು ಜಾಗತಿಕ ಪರಿಸರ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತವೆ. ಆದರೆ ಇದಕ್ಕಾಗಿ ಅವುಗಳು ಏನೇನು ಕಸರತ್ತು ಮಸಲತ್ತು ಮಾಡುತ್ತವೆ ಮತ್ತು ಹೇಗೆ ತಮ್ಮ ದೇಶದ ಮಾಲಿನ್ಯವನ್ನು ಬಡ ವಿದೇಶಗಳಿಗೆ ಗುತ್ತಿಗೆ ನೀಡುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯ, ಆಘಾತ ಎರಡೂ ಏಕಕಾಲದಲ್ಲಿ ಆಗದೆ ಇರದು.

ಇತ್ತೀಚೆಗೆ ಬೆಳಕಿಗೆ ಬಂದ ಸಂಗತಿಯೊಂದಕ್ಕೆ ನಮ್ಮ ಮಾಧ್ಯಮಗಳು ಹೆಚ್ಚು ಮಹತ್ವ ನೀಡಲಿಲ್ಲ. ‘ಅದು ಬಿಗ್ ಬ್ರದರ್’ ಅಮೆರಿಕ ಒಳಗೊಂಡಿರುವ ವಿಷಯವಾಗಿರುವುದು ಇದಕ್ಕೆ ಕಾರಣವಿದ್ದಿರಬಹುದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಬ್ರಾಡ್ ಪ್ಲುಮರ್‌ನ ಒಂದು ವರದಿಯ ಪ್ರಕಾರ ಈಗ ವಿಶ್ವದ ಶ್ರೀಮಂತ ರಾಷ್ಟ್ರಗಳು ತಮ್ಮ ದೇಶದ ಒಳಗೆ ಪರಿಸರ ಮಾಲಿನ್ಯ ಕಾಪಾಡಿಕೊಳ್ಳುವುದಕ್ಕಾಗಿ ಪರಿಸರ ಮಾಲಿನ್ಯವನ್ನೇ ಹೊರಗುತ್ತಿಗೆ ನೀಡುತ್ತಿದೆ!

ವಿಪರೀತ ಪರಿಸರ ಮಾಲಿನ್ಯ ಉಂಟು ಮಾಡುವ ಉಕ್ಕು, ಸಿಮೆಂಟ್ ಮತ್ತಿತರ ಸರಕುಗಳನ್ನು ತಮ್ಮ ದೇಶದಲ್ಲೇ ಉತ್ಪಾದಿಸುವ ಬದಲು ಇವುಗಳನ್ನು ಚೀನಾ, ಭಾರತದಂತಹ ದೇಶಗಳಲ್ಲಿರುವ ಕಾರ್ಖಾನೆಗಳಿಂದ ಹೆಚ್ಚು ಹೆಚ್ಚು ಆಮದು ಮಾಡಿಕೊಳ್ಳುತ್ತಿವೆ. ಈ ಮೂಲಕ ಅವುಗಳು ತಮ್ಮ ದೇಶದೊಳಗೆ ಉಂಟಾಗುವ ಕಾರ್ಬನ್ ಮಾಲಿನ್ಯವನ್ನು ತಡೆಯುತ್ತಿವೆ. ಇದು ತನ್ನ ಮನೆಯ ಕಾಂಪೌಂಡಿನ ಕಸ, ಕೊಳೆಯನ್ನು ಶ್ರೀಮಂತನೊಬ್ಬ ಬಡವನಿಗೆ ಲಾಭದ ಆಸೆ ತೋರಿಸಿ ಅವನ ಮನೆಯ ಆವರಣಕ್ಕೆ ರವಾನಿಸಿದಂತೆ. ಉದಾಹರಣೆಗೆ, ಬ್ರಿಟನ್ 1990 ಮತ್ತು 2015ರ ಅವಧಿಯಲ್ಲಿ ತನ್ನ ದೇಶದ ಗಡಿಗಳೊಳಗೆ ಉಂಟಾಗುವ ದೇಶೀಯ ಹೊಗೆ ಮಾಲಿನ್ಯ (ಎಮಿಶನ್ಸ್)ಗಳನ್ನು ಮೂರನೇ ಒಂದರಷ್ಟು ಪಾಲು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು. ತೀವ್ರ ಇಂಧನದ (ಎನರ್ಜಿ ಇಂಟೆನ್ಸಿವ್) ಉದ್ಯಮಗಳು ವಿದೇಶಗಳಿಗೆ ವಲಸೆ ಹೋದದ್ದರಿಂದ ಇದು ಸಾಧ್ಯವಾಯಿತು. ಲಂಡನ್‌ನ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಲು ಮತ್ತು ಕಾರುಗಳನ್ನು ತಯಾರಿಸಲು ಆಮದು ಮಾಡಿಕೊಳ್ಳಲಾದ ಕಬ್ಬಿಣ ಮತ್ತು ಉಕ್ಕನ್ನು ಅದು ತನ್ನ ದೇಶದಲ್ಲೇ ಉತ್ಪಾದಿಸುತ್ತಿದ್ದಲ್ಲಿ, ಅದರ ಹೊಗೆ ಮಾಲಿನ್ಯ ಹೆಚ್ಚೇ ಆಗುತ್ತಿತ್ತು. ಹೀಗೆ, ಎಮಿಶನ್‌ಗಳನ್ನು ಹೊರಗುತ್ತಿಗೆ ಮೂಲಕ ಕಡಿತಮಾಡಿಕೊಂಡು ತಮ್ಮ ಹೆಗ್ಗಳಿಕೆಯನ್ನು ಶ್ರೀಮಂತರಾಷ್ಟ್ರಗಳು ವಿಶ್ವಕ್ಕೆ ಸಾರುತ್ತಿರುವಾಗ ಜಾಗತಿಕ ಪರಿಸರ ಮಾಲಿನ್ಯಕ್ಕೆ ಅವುಗಳು ವೌನವಾಗಿ ತಮ್ಮ ಕೊಡುಗೆನೀಡುತ್ತಲೆ ಇರುತ್ತವೆ.

ಅಮೆರಿಕನ್ನರು ಬಳಸುವ ಬಿಟ್ಟು ಕಾರುಗಳು, ಬಟ್ಟೆ ಹಾಗೂ ಇತರ ವಸ್ತುಗಳನ್ನು ಉತ್ಪಾದಿಸುವಾಗ ಉಂಟಾಗುವ ಪರಿಸರ ಮಾಲಿನ್ಯಕ್ಕೆ ಅಮೆರಿಕವನ್ನು ಜವಾಬ್ದಾರಿಯಾಗಿ ಮಾಡುವುದಾದಲ್ಲಿ, ಅದರ ಒಟ್ಟು ಕಾರ್ಬನ್ ಎಮಿಶನ್ ಈಗ ಇರುವುದಕ್ಕಿಂತ ಶೇಕಡಾ 14ರಷ್ಟು ಹೆಚ್ಚು ಆಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಅದು ಹೊರದೇಶಗಳಿಂದ ಮಾಲಿನ್ಯ ಉತ್ಪಾದಕ ಸಾಮಗ್ರಿಗಳನ್ನು ಬೃಹತ್ ಪ್ರಮಾಣದಲ್ಲಿ ಆಮದುಮಾಡಿಕೊಳ್ಳುತ್ತದೆ;

ಹಾಗಾಗಿ, ವಿಶ್ವದಲ್ಲಿ ಅತ್ಯಂತ ಬೃಹತ್ ಪ್ರಮಾಣದಲ್ಲಿ ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡನ್ನು ಸೇರಿಸುವ ಚೀನಾ ವಿಶ್ವದ ಕಾರ್ಖಾನೆಯಾಗಿ ಉಳಿದಿದೆ, ಎನ್ನುತ್ತದೆ ವರದಿ. 2015 ರಲ್ಲಿ ಚೀನಾದ ವಾತಾವರಣದಲ್ಲಿ ಸೇರಿಕೊಂಡ ಒಟ್ಟು ಹೊಗೆಯ, ಎಮಿಶನ್‌ಗಳ ಶೇಕಡಾ 13 ರಷ್ಟು ಹೊಗೆ ಮಾಲಿನ್ಯ ಅದು ಇತರ ದೇಶಗಳಿಗಾಗಿ ತನ್ನ ನೆಲದಲ್ಲಿ ಉತ್ಪಾದಿಸಿದ ಸರಕುಗಳ ಪರಿಣಾಮವಾಗಿ ಉಂಟಾದ ಮಾಲಿನ್ಯ ಇದೇರೀತಿಯಾಗಿ, ವಾತಾವರಣಕ್ಕೆ ಹೊಗೆ ಉಗುಳುವ ನಿಟ್ಟಿನಲ್ಲಿ ತುಂಬ ವೇಗವಾಗಿ ಸಾಗುತ್ತಿರುವ ನಮ್ಮ ದೇಶ ಪರದೇಶಗಳಿಗೆ ರಫ್ತುಮಾಡುವುದಕ್ಕೆ ತಂದುಕೊಂಡ ಮಾಲಿನ್ಯವು ಒಟ್ಟು ಮಾಲಿನ್ಯದ ಶೇಕಡಾ 20 ಭಾಗ.

 ಗ್ಲೋಬಲ್ ಎಫಿಶಿಯನ್ಸಿ ಇಂಟಲಿಜನ್ಸ್ ಎಂಬ ಒಂದು ಇಂಧನ ಮತ್ತು ಪರಿಸರ ಸಮಾಲೋಚನಾ ಸಂಸ್ಥೆಯ ಮುಖ್ಯಸ್ಥ ಹಸನ್ ಬೀಗಿ ಬರೆದಿರುವ ಒಂದು ಹೊಸ ವರದಿಯು 15,000 ವಿವಿಧ ರಂಗಗಳಿಂದ ನಡೆಯುವ ಜಾಗತಿಕ ವ್ಯಾಪಾರವನ್ನು ವಿಶ್ಲೇಷಿಸಿ ಸಿದ್ಧಪಡಿಸಿದ ವರದಿಯಾಗಿದ್ದು, ಜಾಗತಿಕ ಕಾರ್ಬನ್ ವ್ಯಾಪಾರದ ಅತ್ಯಂತ ವಿವರವಾದ ಚಿತ್ರಣಗಳಲ್ಲಿ ಒಂದನ್ನು ವಿಶ್ವದ ಮುಂದಿರಿಸಿದೆಂದು ಹೇಳಲಾಗಿದೆ.

ಪ್ಯಾರಿಸ್ ವಾತಾವರಣ ಒಪ್ಪಂದದ ಪ್ರಕಾರ ದೇಶಗಳು ತಮ್ಮ ದೇಶದ ಗಡಿಗಳೊಳಗೆ ಉಂಟುಮಾಡುವ ಹೊಗೆ ಮಾಲಿನ್ಯಕ್ಕೆ ಮಾತ್ರ ಜವಾಬ್ದಾರಿಯಾಗಿರುವುದರಿಂದ ಅವುಗಳು ಮಾಲಿನ್ಯ ಬೈಗುಳದಿಂದ ಬಚಾವಾಗಿಬಿಡುತ್ತವೆ. ಅದೇ ವೇಳೆ, ಚೀನಾ ಅಥವಾ ಭಾರತದಂತಹ ದೇಶಗಳು ಅವುಗಳ ಹೆಚ್ಚಿರುವ ಮಾಲಿನ್ಯದ ಮಟ್ಟಕ್ಕಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೈಗುಳ ಕೇಳಬೇಕಾಗುತ್ತದೆ. ಆದರೆ ಹೊಟ್ಟೆಪಾಡಿಗಾಗಿ ದುಡಿಯುವ ಬಡವನ ಗೋಳು ಆತನಿಗೇ ಗೊತ್ತು. ಪರಿಸರ ಮಾಲಿನ್ಯ ಉಂಟಾಗಿ ನಾಳೆ ಸಾಯುವುದೇ ಆದರೂ ಇವತ್ತು ಬದುಕಿ ಉಳಿಯಬೇಕಲ್ಲ ಎಂಬ ವಾದದ ಮುಂದೆ ನಾವು ವೌನವಾಗಬೇಕಾಗುತ್ತದೆ. ಈಗಾಗಲೇ ಹತ್ತು ಹಲವು ರೀತಿಯ ಬೆದರಿಕೆಗಳಿಗೆ ಹೆದರಿ ವೌನಿಗಳಾಗುತ್ತಿರುವ ಭಾರತೀಯರು ‘ಪರಿಸರ ಮಾಲಿನ್ಯ ತಡೆಯಿರಿ’ ಎಂದು ವಿಶ್ವದ ಮುಂದೆ ಬೊಬ್ಬೆ ಹೊಡೆಯುವ ಸ್ಥಿತಿಯಲ್ಲಿಲ್ಲ. ‘‘ಬಡವಾ ಮಡಗಿದಂಗ್ ಇರು’’ ಎಂಬ ಮಾತು ಬಡವರಿಗಲ್ಲದೆ, ಬಡ ದೇಶಗಳಿಗಲ್ಲದೆ ಶ್ರೀಮಂತರಿಗಾಗಿ ಇರುವ ಮಾತಲ್ಲ ತಾನೆ!

Writer - ಡಾ.ಬಿ.ಭಾಸ್ಕರ ರಾವ್

contributor

Editor - ಡಾ.ಬಿ.ಭಾಸ್ಕರ ರಾವ್

contributor

Similar News