ಕನ್ನಡ ಕಲಿಕೆಗೊಂದು ಹೊಸ ವಿಶಿಷ್ಟ ಜಾಲತಾಣ

Update: 2018-09-17 06:43 GMT

# ಶೀಘ್ರದಲ್ಲೇ ಲೋಕಾರ್ಪಣೆ

ದಿಲ್ಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾನಿಲಯ(ಜೆ.ಎನ್.ಯು.)ದ ಕನ್ನಡ ಅಧ್ಯಯನ ಪೀಠವು ಕನ್ನಡೇತರರು ಕನ್ನಡವನ್ನು ಕಲಿಯಲು ಸಹಾಯ ಮಾಡುವಂಥ ಹೊಸಬಗೆಯ ಜಾಲತಾಣವೊಂದನ್ನು ಸಿದ್ಧಪಡಿಸಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನದ ಸಹಾಯದಿಂದ ಸಿದ್ಧಪಡಿಸಲಾಗಿರುವ 'ಕನ್ನಡ ಕಲಿಕೆ' ಹೆಸರಿನ ಈ ಜಾಲತಾಣ ಸದ್ಯದಲ್ಲೇ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. 

ಜಾಲತಾಣದ ಸ್ವರೂಪ

'ಕನ್ನಡ ಕಲಿಕೆ' ಜಾಲತಾಣದ ಬಗ್ಗೆ ಮಾಹಿತಿ ನೀಡಿರುವ ಜೆ.ಎನ್.ಯು. ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಪ್ರೊಫೆಸರ್ ಡಾ.ಪುರುಷೋತ್ತಮ ಬಿಳಿಮಲೆ, ಭಾಷಾ ಕಲಿಕೆಗೆ ಸಾಮಾನ್ಯವಾಗಿ ಸಿದ್ಧಪಡಿಸಲಾಗುತ್ತಿರುವ ಜಾಲತಾಣಗಳು ಪಠ್ಯ ಪುಸ್ತಕಗಳನ್ನೇ ಅಂತರ್ಜಾಲಕ್ಕೆ ಅಳವಡಿಸಿರುತ್ತವೆ. ಪ್ರಕಟಿತ ಪುಸ್ತಕಗಳ ಮಾದರಿಯಲ್ಲಿಯೇ ಇರುವ ಇವು ಆಧುನಿಕ ತಂತ್ರಜ್ಞಾನದ ಪೂರ್ಣ ಪ್ರಯೋಜನವನ್ನು ಪಡೆಯುವಲ್ಲಿ ಬಹುತೇಕವಾಗಿ ವಿಫಲವಾಗಿರುತ್ತವೆ. ಹಾಗೆಯೇ ಮೊಬೈಲ್ ಫೋನ್ ಗಳಲ್ಲಿ ಇವುಗಳ ಉಪಯೋಗ ಮಾಡುವುದೂ ಸುಲಭವಾಗಿರುವುದಿಲ್ಲ. ಇಂಥ ಮಿತಿಗಳನ್ನು ಮೀರಲು ಸಿದ್ಧಪಡಿಸಲಾದ ಪ್ರಸ್ತುತ ಜಾಲತಾಣದಲ್ಲಿ ಭಾಷಾ ಕಲಿಕೆಯ ನಾಲ್ಕು ಪ್ರಮುಖ ಕೌಶಲ್ಯಗಳಾದ ಆಲಿಸುವಿಕೆ, ಮಾತಾಡುವಿಕೆ, ಓದುವಿಕೆ  ಮತ್ತು ಬರೆಯುವಿಕೆಯನ್ನು ಪ್ರೋತ್ಸಾಹಿಸಲು 30 ವೀಡಿಯೋಗಳನ್ನು ಪಠ್ಯವಾಗಿ ಬಳಸಿಕೊಳ್ಳಲಾಗಿದೆ. ಹೀಗೆ ಮಾಡುವಾಗ ಭಾಷಾ ಕಲಿಸುವಿಕೆಯಲ್ಲಿ ಅಂತಾರಾಷ್ಟ್ರೀಯವಾಗಿ ಅನುಸರಿಸಲಾಗುತ್ತಿರುವ ಸಂವಹನ, ಸಂಸ್ಕೃತಿ, ಸಂಪರ್ಕ, ಹೋಲಿಕೆ ಮತ್ತು ಸಮುದಾಯದ ಮಾದರಿಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಈ ವಿಧಾನದಲ್ಲಿ ಅನ್ಯಭಾಷಾ ಪರಿಸರದಲ್ಲಿ ಕನ್ನಡವು ಸಂವಹನಗೊಳ್ಳಬೇಕಾದ ರೀತಿ, ಭಿನ್ನ ಸಂಸ್ಕೃತಿಗಳ ನಡುವೆ ಕನ್ನಡವು ಅನುಷ್ಠಾನಗೊಳ್ಳಬೇಕಾದ ಬಗೆ, ಬೇರೆ ಭಾಷೆಯವರೊಡನೆ ಕನ್ನಡವು ಸಂಪರ್ಕ ಸಾಧಿಸಲು ತಯಾರಾಗಬೇಕಾದ ರೀತಿ, ಭಾಷಾ ಕಲಿಕೆಯಲ್ಲಿ ಸಹಜವಾಗಿ ಏರ್ಪಡುವ ತೌಲನಿಕ ದೃಷ್ಟಿಕೋನ ಹಾಗೂ ಯಾವ ಸಮುದಾಯಕ್ಕೆ ಕನ್ನಡವನ್ನು ಹೇಳಿಕೊಡಲಾಗುವುದು ಎಂಬ ಪ್ರಜ್ಞೆ - ಇವಿಷ್ಟನ್ನೂ ಗಮನದಲ್ಲಿರಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

30 ವೀಡಿಯೋಗಳೇ ಪಠ್ಯಗಳು:

 ಸಾಮಾನ್ಯವಾದ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಪಾಠಗಳ ಬದಲಾಗಿ ಈ ಜಾಲತಾಣದಲ್ಲಿ 4ರಿಂದ 6 ನಿಮಿಷಗಳ ವ್ಯಾಪ್ತಿಯ, ಸರಾಸರಿ 500 ಪದಗಳಿರುವ  ಒಟ್ಟು 30 ವೀಡೀಯೋಗಳನ್ನು ಅಳವಡಿಸಲಾಗಿದೆ. ನೈಜ ಸಂದರ್ಭದಲ್ಲಿ ದಾಖಲಿಸಲಾದ ಈ ವೀಡಿಯೋಗಳು ಕನ್ನಡ ಭಾಷೆಯನ್ನು ಅದರ ಸಹಜ  ಸಂದರ್ಭದಲ್ಲಿರಿಸಿ ವಿವರಿಸುತ್ತವೆ ಮತ್ತು ಮೇಲೆ ಹೇಳಿದ ನಾಲ್ಕು ಕೌಶಲಗಳಲ್ಲಿ ಮೊದಲನೆಯ ಮೂರನ್ನು ( ಆಲಿಸುವುದು, ಮಾತಾಡುವುದು ಮತ್ತು ಓದುವುದು)   ಸುಲಭವಾಗಿ ಕಲಿಯಲು ಅನುವು ಮಾಡಿಕೊಡುತ್ತವೆ. ಜೊತೆಗೆ ಕನ್ನಡ ಪದಗಳ ಉಚ್ಛಾರಣೆಯನ್ನೂ ಅದು ಸ್ಪಷ್ಟಪಡಿಸುತ್ತದೆ.

ಆಸಕ್ತರು ಮೊದಲು ವೀಡಿಯೋವನ್ನು ಧ್ಯಾನಿಸಿ ನೋಡಬಹುದು. ಆನಂತರ ವೀಡಿಯೋದಲ್ಲಿ ಬಳಕೆಯಾದ ಪಠ್ಯವನ್ನು ಕೇಳಬಹುದು ಮತ್ತು ಓದಬಹುದು. ಅಗತ್ಯಬಿದ್ದರೆ ಸುಲಭವಾಗಿ ಅದನ್ನು ಪುನರಾವರ್ತಿಸಿಕೊಳ್ಳಬಹುದು. ಈ ಹಂತದಲ್ಲಿ ಅದು ಅರ್ಥವಾಗದಿದ್ದರೆ ಅದರ ಇಂಗ್ಲಿಷ್ ಅನುವಾದವನ್ನೂ ಗಮನಿಸಬಹುದು. ವೀಡಿಯೋದಲ್ಲಿ ಬಳಕೆಯಾದ ಮುಖ್ಯ ಪದಗಳ ಪಟ್ಟಿಯನ್ನು ಆಂಗ್ಲಾನುವಾದದ ಸಹಿತ ನೀಡಲಾಗಿದೆ, ವ್ಯಾಕರಣ ರೂಪಗಳನ್ನೂ ಕೊಡಲಾಗಿದೆ. ಕೊನೆಯಲ್ಲೆ ಮನೆಗೆಲಸ ನೀಡಲಾಗಿದೆ. ಈ ಮನೆಗೆಲಸವನ್ನು ಜಗತ್ತಿನ ಯಾವ ಮೂಲೆಯಿಂದಾದರೂ ಮಾಡಿ ಕಳಿಸಿದರೆ, ಅದನ್ನು ತಿದ್ದಿ ಹಿಂದಕ್ಕೆ ಕಳಿಸುವ ವ್ಯವಸ್ಥೆಯನ್ನೂ ಜಾಲತಾಣದಲ್ಲಿ ಅಳವಡಿಸಲಾಗಿದೆ. ಮುಂಚಿತವಾಗಿ ಸಮಯ ನಿಗದಿಪಡಿಸಿಕೊಂಡರೆ ಅಧ್ಯಾಪಕರನ್ನು ನೇರವಾಗಿ ಸಂಪರ್ಕಿಸಿ ಚರ್ಚಿಸಲು ಅವಕಾಶ ಮಾಡಿಕೊಡಲಾಗಿದೆ.  

ಸದ್ಯ ಜಾಲತಾಣದಲ್ಲಿ ಲಭ್ಯವಿರುವ ವೀಡಿಯೋಗಳು ಈ ಕೆಳಗಿನಂತಿವೆ
1.      ಶಿಶು ಗೀತೆಗಳು
2.     ಕನ್ನಡ ಪತ್ರಿಕೆಗಳು
3.     ನಮ್ಮ ಆಹಾರ
4.    ತರಕಾರಿ ಮಾರುಕಟ್ಟೆ
5.     ಅಧುನಿಕ ಕೃಷಿ 
6.    ಕಾಫಿ ಬೆಳೆ
7.     ಯಕ್ಷಗಾನದ ಬಣ್ಣಗಳು
8.     ಬಹುರೂಪಿಗಳು
9.    ಕೊಡಗು ಸೀರೆ
10.   ಕಡಲು
11.    ಮಂಟೆಸ್ವಾಮಿ ಕಾವ್ಯ
12.   ಜನಪದ ಲೋಕ
13.   ಮೆಕ್ಕಿಕಟ್ಟೆಯ ಉರುಗಳು
14.   ಕುಡುಬಿಯರು
15.   ಕುಶಲ ಕರ್ಮಿಗಳ ಕತೆ
16.   ಕನ್ನಡ ಸಂಶೋಧನೆ
17.    ಪತ್ರಿಕೋದ್ಯಮ
18.   ದಾಸರ ಪದಗಳು
19.   ಹೋಟೆಲ್ ಮೈಲಾರಿ
20.  ಭೂತರಾಧನೆ
21.   ರಂಗಾಯಣ
22.  ಹೋಟೆಲ್ ಉದ್ಯಮ
23.  ಕುಶಲಕರ್ಮಿಗಳ ಶಿಕ್ಷಣ ಸಂಸ್ಥೆ 
24.  ಹಂಚಿನ ಕಾರ್ಖಾನೆ
25.  ಶ್ರೀರಂಗಪಟ್ಟಣ
26.  ರಂಗ ಗೀತೆ
27.   ಹಂಪಿ
28.  ಕಲಾವಿದನ ಆತ್ಮಕತೆ
29.  ರವೀಂದ್ರ ಕಲಾಕ್ಷೇತ್ರ ಮತ್ತು
30.  ಜಾಗತೀಕರಣ.

ಇವು ಸ್ಥೂಲವಾಗಿ ಕನ್ನಡದ ಪ್ರಾದೇಶಿಕ ವೈವಿಧ್ಯಗಳನ್ನು ಪ್ರತಿನಿಧಿಸುವುದರ ಜೊತೆಗೆ, ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನು ಜನರು ಬಳಸುತ್ತಿರುವ ರೀತಿಯ ಬಗೆಗೆ ಬೆಳಕು ಚೆಲ್ಲುತ್ತದೆ. ಈ ವೀಡಿಯೋಗಳನ್ನು ನೋಡುವವರು ಭಾಷೆಯ ಜೊತೆಗೆ ಕನ್ನಡ ಸಂಸ್ಕೃತಿಯ ಕಡೆಗೂ ಗಮನಹರಿಸುತ್ತಾರೆ.
 
ಉದಾಹರಣೆಗೆ ಶಿಶು ಗೀತೆಗಳು ಎಂಬ ಹೆಸರಿನ ವೀಡಿಯೋವನ್ನು ಕ್ಲಿಕ್ ಮಾಡಿದರೆ, ಅದರಲ್ಲಿ 'ಹುಯ್ಯೋ ಹುಯ್ಯೋ ಮಳೆರಾಯ', 'ತಕ ತಕ ಥೈ', ಮತ್ತು 'ಆನೆ ಬಂತೊಂದಾನೆ' ಹಾಡುಗಳು ಸಿಗುತ್ತವೆ. ಮೊದಲನೇ ಹಾಡಿನಲ್ಲಿ ‘ಹುಯ್ಯೋ ಹುಯ್ಯೋ’ ‘ಬಾರೋ ಬಾರೋ’, ‘ಸುರಿಯೋ ಸುರಿಯೋ’  ಎಂಬ ಸಾಲುಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತವೆ. ‘ಮಳೆರಾಯ’ ಹಾಗೂ ‘ನೀರಿಲ್ಲ’ ಪದಗಳೂ ಆಗಾಗ ಕಿವಿಗೆ ಬೀಳುತ್ತವೆ. ಮಕ್ಕಳು ಸಹಜವಾಗಿ ಅವುಗಳನ್ನು ಅಬಿನಯಿಸಿ ತೋರಿಸುವುದರಿಂದ ಪದಗಳ ಅರ್ಥ ಸ್ಪಷ್ಟತೆ ಇನ್ನೂ ಹೆಚ್ಚಾಗುತ್ತದೆ. ಇದೇ ರೀತಿ ಎರಡನೆಯ ಹಾಡಿನಲ್ಲಿ ತಕ ತಕ ಥೈ, ಕೈ, ಮೇಲೆ-ಕೆಳಗೆ , ಮುಂದೆ- ಹಿಂದೆ, ಚಾಚುಮೊದಲಾದ ಪದಗಳು ಬಳಕೆಯಾಗಿದ್ದು ಅವು ಅಲ್ಪ ಪ್ರಾಣ -ಮಹಾಪ್ರಾಣ ಹಾಗೂ ವಿರುದ್ಧಾರ್ಥಕ ಪದಗಳನ್ನು ವಿವರಿಸಲು ಸಹಾಯ ಮಾಡುತ್ತವೆ. ಮೂರನೆಯದಾದ ‘ಆನೆ ಬಂತೊಂದಾನೆ ‘ ಹಾಡಿನಲ್ಲಿ ಸಣ್ಣ, ದೊಡ್ಡ, ಕಪ್ಪು, ಹೊಟ್ಟೆ, ಅಗಲ, ಉದ್ದ, ಮೋಟು, ಮೊದಲಾದ ವಿಶೇಷಣಗಳನ್ನು ಪ್ರಸ್ತುತ ಪಡಿಸಲಾಗಿದೆ.   ಹೀಗೇ ಎಲ್ಲಾ ವೀಡಿಯೋಗಳೂ ಕಲಿಕೆಗೆ ವಿಶೇಷವಾಗಿ ಸಹಕರಿಸುತ್ತವೆ.

ವ್ಯಾಕರಣ ಸೂತ್ರಗಳು
ಜಾಲತಾಣದ ಇನ್ನೊಂದು ಮಗ್ಗುಲಲ್ಲಿ ಪ್ರಾಯೋಗಿಕವಾಗಿ ಅಗತ್ಯವಾಗಿರುವ ವ್ಯಾಕರಣ ಸೂತ್ರಗಳನ್ನು ನೀಡಲಾಗಿದೆ. ಅವುಗಳೆಂದರೆ-
1.      ಕನ್ನಡ ವರ್ಣಮಾಲೆ
2.     ವರ್ಣಮಾಲೆಯ  ಹೆಚ್ಚುವರಿ ಗುಣಗಳು
3.     ಒತ್ತಕ್ಷರಗಳು
4.    ಆಜ್ಞಾರ್ಥಕ ರೂಪಗಳು
5.     ಸರ್ವನಾಮಗಳು
6.    ನಾಮಪದಗಳು
7.     ಕ್ರಿಯಾಪದ ರಹಿತ ವಾಕ್ಯಗಳು
8.     ವರ್ತಮಾನ ಕಾಲ
9.    ಭೂತ ಕಾಲ
10.   ಭವಿಷ್ಯ ಕಾಲ
11.    ವಿಭಕ್ತಿಗಳು
12.   ಕೃದಂತಗಳು
13.   ಗುಣವಾಚಕಗಳು ಹಾಗೂ ಕ್ರಿಯಾ ವಿಶೇಷಣಗಳು
14.   ಅಂಕೆಗಳು
15.   ಪ್ರೇರಣಾತ್ಮಕ ಪ್ರತ್ಯಯಗಳು
16.   ಕ್ರಿಯಾ ಪದಗಳ ವಿವಿಧ ರೂಪಗಳು
17.    ಪ್ರಶ್ನಾರ್ಥಕ ಪದಗಳು ಹಾಗೂ
18.   ಲಿಖಿತ ಮತ್ತು ಆಡು ಮಾತಿನ ರೀತಿಗಳು.

ವರ್ಣಮಾಲೆಯನ್ನು ಕಲಿಸಲು ಬಿಳಿ ಹಲಗೆಯ ಮೇಲೆ ಅಕ್ಷರ ಮೂಡುವ ವಿಧಾನವನ್ನು ಅಳವಡಿಸಲಾಗಿದೆ. ಈ ವ್ಯಾಕರಣ ರೂಪಗಳನ್ನು ಮತ್ತು ವೀಡಿಯೋಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಬೋಧಕರು ತೋರಿಸಿಕೊಳ್ಳಬೇಕು.

ಹೀಗೆ ಇದೊಂದು ಹೊಸಬಗೆಯ ಪ್ರಯತ್ನ. ಉರ್ದು ಮತ್ತು ಹಿಂದಿ ಭಾಷೆಗಳನ್ನು ಹೊರತುಪಡಿಸಿದರೆ ಬೇರಾವ ಭಾರತೀಯ ಭಾಷೆಯಲ್ಲೂ ಇಂಥ ಪ್ರಯೋಗ ನಡೆದಿಲ್ಲ. ಹೊಸ ಹೊಸ ವೀಡಿಯೋಗಳನ್ನು ಸೇರಿಸುವುದರ ಮೂಲಕ ಈ ಜಾಲತಾಣವನ್ನುನವೀಕರಿಸುತ್ತಲೇ ಹೋಗಬಹುದು. ಅದೇ ರೀತಿ ಉಪಯೋಗಿಸುವವರ ಅನುಭವ ಮತ್ತು ಅಭಿಪ್ರಾಯಗಳನ್ನು ಗಮನಿಸಿಕೊಂಡು ಪರಿಷ್ಕರಿಸಲೂ ಅವಕಾಶವಿದೆ ಎಂದು ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News