ಉತ್ತರಪ್ರದೇಶದ ವಜ್ರ ಮುಷ್ಟಿ ಮತ್ತೊಮ್ಮೆ ದಲಿತರ ಮೇಲೆ ಎರಗಿದೆ

Update: 2018-09-17 07:38 GMT

ಭಾಗ 1

          ಭೀಮ್ ಸೇನೆಯ ನಾಯಕ ಚಂದ್ರಶೇಖರ್ ಆಝಾದ್

ಕಳೆದ ವರ್ಷ ಉತ್ತರಪ್ರದೇಶದ ಸಹಾರನ್‌ಪುರದಲ್ಲಿ ಸಂಭವಿಸಿದ ಜಾತಿ ಹಿಂಸೆಯಲ್ಲಿ ಒಳಗೊಂಡಿದ್ದರೆಂದು ಆಪಾದಿಸಲಾದ ಮೂರು ಮಂದಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯ ಅಡಿಯಲ್ಲಿ ಬಂಧಿಸಲಾಗಿತ್ತು. ಸೆಪ್ಟಂಬರ್ 4ರಂದು ಅಲಹಾಬಾದ್ ಹೈಕೋರ್ಟ್ ಆ ಮೂವರ ಪ್ರತಿಬಂಧಕಾಜ್ಞೆಯನ್ನು ರದ್ದುಪಡಿಸಿತು. ಕಳೆದ ವರ್ಷ ಮೇ ತಿಂಗಳಲ್ಲಿ ಠಾಕೂರರ ಮತ್ತು ದಲಿತರ ನಡುವೆ ಮೂರು ಪ್ರತ್ಯೇಕ ಹಿಂಸಾ ಘಟನೆಯಲ್ಲಿ ತಿಕ್ಕಾಟ ನಡೆದಿತ್ತು, ಆ ಘರ್ಷಣೆಯಲ್ಲಿ ಪ್ರತಿ ಸಮುದಾಯದಿಂದ ಓರ್ವ ಮೃತಪಟ್ಟಿದ್ದ. ಹಿಂಸೆಯ ಬಳಿಕ ಹಲವಾರು ಮಂದಿ ಠಾಕೂರರನ್ನು ಮತ್ತು ದಲಿತರನ್ನು ಬಂಧಿಸಲಾಗಿತ್ತು. ಕರಾಳ ಎನ್‌ಎಸ್‌ಎಯನ್ನು ಆರು ಮಂದಿ ವಿರುದ್ಧ ಬಳಸಲಾಗಿತ್ತು. ಭೀಮ್ ಸೇನೆಯ ನಾಯಕ ಚಂದ್ರಶೇಖರ್ ಆಝಾದ್ ಸೇರಿದಂತೆ ಮೂವರು ದಲಿತರು ಮತ್ತು ಮೂವರು ಠಾಕೂರರು.

ಅಲಹಾಬಾದ್ ಹೈಕೋರ್ಟ್‌ನಿಂದ ಈಗ ಬಿಡುಗಡೆ ಪಡೆದಿರುವ ಮೂವರು ಠಾಕೂರರು, ದಲಿತರ ವಿರುದ್ಧ ಎನ್‌ಎಸ್‌ಎ ಇನ್ನೂ ಚಾಲ್ತಿಯಲ್ಲಿದೆ ಮತ್ತು ಅವರು ಇನ್ನೂ ಜೈಲಿನಲ್ಲೇ ಇದ್ದಾರೆ. ಎನ್‌ಎಸ್‌ಎಯ ಅವಧಿ ಕೊನೆಗೊಳ್ಳುತ್ತದೆ ಎನ್ನುವಾಗಲೆಲ್ಲ, ಸರಕಾರವು ಚುರುಕಾಗಿ ಅದನ್ನು ನವೀಕರಿಸಿರುವುದು ದಲಿತರ ವಿರುದ್ಧ ಮಾತ್ರ.

ದಲಿತ ಸಮುದಾಯವನ್ನು ಪ್ರತಿನಿಧಿಸುವ ನ್ಯಾಯವಾದಿಗಳಲ್ಲಿ ಒಬ್ಬರಾಗಿರುವ ದಿಲೀಪ್ ಕುಮಾರ್ ಪ್ರಕಾರ, ಠಾಕೂರರ ಮತ್ತು ದಲಿತರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳು ಒಂದೇ ರೀತಿಯವುಗಳು.

►ಈಗ ಏಳುವ ಪ್ರಶ್ನೆ

ದಲಿತರ ವಿರುದ್ಧ ಮಾತ್ರ ಯಾಕೆ ಎನ್‌ಎಸ್‌ಎ ಇನ್ನೂ ಮುಂದುವರಿದಿದೆ? ‘‘ಸರಕಾರವು ದಲಿತರ ವಿರುದ್ಧ ಪೂರ್ವಗ್ರಹಪೂರಿತವಾಗಿ ನಡೆದಿಕೊಂಡಿದೆ ಎಂಬುದು ಸ್ಪಷ್ಟ. ಠಾಕೂರರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳಲ್ಲಿ ವಾದಿಸಿದ ಸರಕಾರದ ವಕೀಲರು ಠಾಕೂರರ ವಿರುದ್ಧ ಎನ್‌ಎಸ್‌ಎ ಮುಂದುವರಿಸುವಂತೆ ಪ್ರಬಲವಾದ ವಾದ ಮಂಡಿಸಲಿಲ್ಲ. ಅದೇ ವೇಳೆ ಸರಕಾರವನ್ನು ಪ್ರತಿನಿಧಿಸಿದ ನ್ಯಾಯವಾದಿ ದಲಿತರ ವಿರುದ್ಧ, ಅವರ ಬಿಡುಗಡೆಯಾಗದಂತೆ ಸಮರ್ಥವಾಗಿ ವಾದಿಸಿದರು’’.

►ಹಿಂಸೆಯ ಹಿಂದು ಮುಂದು

2017ರ ಎಪ್ರಿಲ್ ಲಾಗಾಯ್ತು ಪ್ರಬಲ ಠಾಕೂರ್ ಜಾತಿ ಮತ್ತು ಅಲ್ಪಸಂಖ್ಯಾಕ ದಲಿತರ ನಡುವೆ ಶಬ್ಬೀರ್‌ಪುರದಲ್ಲಿ ಅಸಮಾಧಾನದ, ಬಿಗು ವಾತಾವರಣದ ಹೊಗೆಯಾಡುತ್ತಿತ್ತು. ರವಿದಾಸ್ ದೇವಾಲಯದಲ್ಲಿ ದಲಿತರು ಬಿ.ಆರ್.ಅಂಬೇಡ್ಕರ್‌ರವರ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸಲು ಬಯಸಿದ್ದರು. ಠಾಕೂರರು ಈ ಪ್ರಸ್ತಾವವನ್ನು ವಿರೋಧಿಸಿದರು. ‘ಶಾಂತಿಯ ಹಿತದೃಷ್ಟಿಯಿಂದ’ ತಮ್ಮ ಯೋಜನೆಯನ್ನು ಮುಂದೂಡುವಂತೆ ಪೊಲೀಸರು ದಲಿತರಿಗೆ ಹೇಳಿದ್ದರು. ‘‘ಒಂದು ದಿನದಲ್ಲಿ ಸಮಾಜದ ಸಹಜ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ದಲಿತರು ಇದನ್ನು ಅರ್ಥ ಮಾಡಿಕೊಳ್ಳಬೇಕು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಆಗ ಸಹಾರನ್‌ಪುರದಲ್ಲಿ ನನ್ನೊಡನೆ ಹೇಳಿದ್ದರು.

2017ರ ಮೇ 15ರಂದು ಠಾಕೂರರು ಮಹಾರಾಣಾ ಪ್ರತಾಪ್‌ನ ವರ್ಧಂತಿಯ ಅಂಗವಾಗಿ ಒಂದು ಮೆರವಣಿಗೆ ನಡೆಸಿದರು. ‘‘ಡಿಜೆ ಅತಿ ಕರ್ಕಶವಾಗಿತ್ತು’’ ಎಂಬ ಕಾರಣಕ್ಕಾಗಿ ದಲಿತರು ಅದನ್ನು ವಿರೋಧಿಸಿದರು. ಖಡ್ಗಗಳು, ದಪ್ಪನೆಯ ಬಿದಿರು ಕೋಲುಗಳು, ನಾಡ ರಿವಾಲ್ವರ್‌ಗಳು ಮತ್ತು ಪೆಟ್ರೋಲ್ ತುಂಬಿದ್ದ ಬಾಟಲಿಗಳೊಂದಿಗೆ ಗುಂಪೊಂದು ದಲಿತರ ಹಳ್ಳಿಯ ಮೇಲೆ ದಾಳಿ ನಡೆಸಿದಾಗ ಹಿಂಸೆ ಭುಗಿಲೆದ್ದಿತು. ದಲಿತರ 55 ಮನೆಗಳು ಬೆಂಕಿಯಲ್ಲಿ ಭಸ್ಮವಾದವು. ಹಲವು ಮಂದಿ ದಲಿತರು ಗಂಭೀರವಾಗಿ ಗಾಯಗೊಂಡರು. ಠಾಕೂರ್ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿ ಮೃತಪಟ್ಟ.

ಹಿಂಸೆ ನಡೆದ ಕೆಲವು ದಿನಗಳ ಬಳಿಕ ಭೀಮ್ ಸೇನೆಯು ಶಬ್ಬೀರ್‌ಪುರದಲ್ಲಿ ನಡೆದ ಹಿಂಸೆಯ ವಿರುದ್ಧ ಪ್ರತಿಭಟಿಸಲು ಸಹಾರನ್‌ಪುರದಲ್ಲಿ ಒಂದು ಮಹಾ ಪಂಚಾಯತ್ ನಡೆಸಲು ತೀರ್ಮಾನಿಸಿತು. ಆಗ ಪೊಲೀಸರು ದಲಿತರಿಗೆ ಅನುಮತಿ ನೀಡಲು ನಿರಾಕರಿಸಿದರು. ಪ್ರತಿಭಟನೆ ಹಿಂಸಾರೂಪ ತಳೆದು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲುಗಳನ್ನು ತೂರಲಾಯಿತು ಮತ್ತು ಒಂದು ಪೊಲೀಸ್ ಪೋಸ್ಟನ್ನು ಹಾನಿಗೊಳಿಸಲಾಯಿತು.

ಮೇ 23ರಂದು ಮಾಯಾವತಿಯವರು ಶಬ್ಬೀರ್‌ಪುರಕ್ಕೆ ಭೇಟಿ ನೀಡಿ ಒಂದು ಸಾರ್ವಜನಿಕ ಸಭೆ ನಡೆಸಿದರು. ಸಭೆಯ ಬಳಿಕ ತಮ್ಮ ಹಳ್ಳಿಗೆ ಮರಳುತ್ತಿದ್ದ ದಲಿತರ ಒಂದು ತಂಡದ ಮೇಲೆ ಸರ್ಸಾವಾದ ಸಮೀಪ ಠಾಕೂರರು ದಾಳಿ ನಡೆಸಿದರು. ದಾಳಿಯಲ್ಲಿ ಓರ್ವ ದಲಿತ ಕೊಲ್ಲಲ್ಪಟ್ಟು, ಇತರ ಹಲವರು ಗಂಭೀರವಾಗಿ ಗಾಯಗೊಂಡರು.

ಶಬ್ಬೀರ್‌ಪುರ ಹಿಂಸೆಗೆ ಸಂಬಂಧಿಸಿ ಆರು ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು. ಒಂದು ದಲಿತರಿಂದ, ಒಂದು ಪೊಲೀಸರಿಂದ ಮತ್ತು ನಾಲ್ಕು ಠಾಕೂರರಿಂದ ದಾಖಲಾದವು. ಹಿಂಸೆಯಲ್ಲಿ ಕೊಲೆಯಾದ ಒಬ್ಬನ ಕೊಲೆಗೆ ಸಂಬಂಧಿಸಿ ಹಳ್ಳಿಯ ಸರಪಂಚನೂ ಸೇರಿದಂತೆ ಐದು ಮಂದಿ ದಲಿತರ ವಿರುದ್ಧ ಮೊಕದ್ದಮೆ ಹೂಡಲಾಯಿತು. 50ಕ್ಕೂ ಹೆಚ್ಚು ಮಂದಿ ದಲಿತರನ್ನು ಬಂಧಿಸಲಾಯಿತು. ಆದರೆ ಅದೇ ವೇಳೆ ಕೇವಲ ಒಂಬತ್ತು ಮಂದಿ ಠಾಕೂರರನ್ನು ಮಾತ್ರ ಬಂಧಿಸಲಾಯಿತು. ಕೊಲೆ ಆಪಾದಿತರೆಂದು ಆಪಾದಿಸಲಾದ ಇಬ್ಬರ ಮೇಲೆ ಆ ಬಳಿಕ ಎನ್‌ಎಸ್‌ಎ ಬಳಸಲಾಯಿತು. ಅವರು ಇನ್ನೂ ಜೈಲಿನಲ್ಲೇ ಇದ್ದಾರೆ.

ಸಹಾರನ್‌ಪುರ ಹಿಂಸೆಗೆ ಸಂಬಂಧಿಸಿ ಭೀಮ್ ಸೇನೆಯ ಪ್ರತಿಯೊಬ್ಬ ಸದಸ್ಯರ ವಿರುದ್ಧ ಮೊಕದ್ದಮೆ ಹೂಡಲಾಯಿತು. ಪೊಲೀಸರಿಂದ ಅವಿತುಕೊಂಡಿರುವಾಗಲೇ ಅವರಲ್ಲಿ ಹಲವರು ರಾಷ್ಟ್ರಮಟ್ಟದ ಖ್ಯಾತಿಗೆ ಏರಿದರು. ಜೂನ್‌ನಲ್ಲಿ ಆಝಾದ್ ಮತ್ತು ಭೀಮ್ ಸೇನೆಯ ಇತರ ಹಲವರನ್ನು ಬಂಧಿಸಲಾಯಿತು. ನವೆಂಬರ್ 2ರಂದು ಆಝಾದ್‌ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತು. ಒಂದು ದಿನದ ಬಳಿಕ ಅವರನ್ನು ಎನ್‌ಎಸ್‌ಎ ಪ್ರಯೋಗಿಸಿ ಬಂಧಿಸಲಾಯಿತು.

ಸರ್ಸಾವ ಹಿಂಸೆಗೆ ಸಂಬಂಧಿಸಿ ಅನೇಕ ಮಂದಿ ಠಾಕೂರರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಯಿತು ಮತ್ತು ಬಳಿಕ ಅವರಲ್ಲಿ ಮೂವರ ವಿರುದ್ಧ ಎನ್‌ಎಸ್‌ಎ ಬಳಸಲಾಯಿತು.

ಈಗ ಚಂದ್ರಶೇಖರ್ ಆಝಾದ್ ಮತ್ತು ದಲಿತ ಸಮುದಾಯದ ಇನ್ನಿಬ್ಬರು ಸದಸ್ಯರು ಇನ್ನೂ ಜೈಲಿನಲ್ಲೇ ಇದ್ದಾರೆ. ಅವರ ವಿರುದ್ಧ ಎನ್‌ಎಸ್‌ಎ ಅನ್ವಯ ಮೊಕದ್ದಮೆಗಳನ್ನು ಹೂಡಲಾಗಿದೆ. ಆದರೆ ಎನ್‌ಎಸ್‌ಎಯ ಪ್ರಕಾರವೇ ಬಂಧಿಸಲ್ಪಟ್ಟಿದ್ದ ಠಾಕೂರರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ದಲಿತರ ವಿರುದ್ಧ ರಾಜ್ಯ ಸರಕಾರದ ವಜ್ರಮುಷ್ಟಿಯ ಪ್ರಹಾರ ನಡೆದಿರುವ ಇಂತಹ ಹಲವಾರು ಉದಾಹರಣೆಗಳಿವೆ. ಉತ್ತರಪ್ರದೇಶದಲ್ಲಿ, ನಿರ್ದಿಷ್ಟವಾಗಿ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಜಾತಿ ಹಿಂಸೆ ಏರುತ್ತಲೇ ಹೋದ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಇಂತಹ ಹಲವಾರು ದಲಿತ ವಿರೋಧಿ ಘಟನೆಗಳು ನಡೆದಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

►ಅಪ್ರಾಪ್ತವಯಸ್ಕರ ಬಂಧನ

ದಲಿತ ದೌರ್ಜನ್ಯ ವಿರೋಧಿ ಕಾಯ್ದೆಯ ಸಡಿಲುಗೊಳಿಸುವಿಕೆಯ ವಿರುದ್ಧ ಎಪ್ರಿಲ್ 2ರಂದು ದಲಿತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಬಂದ್ ಹಿಂಸೆಗೆ ತಿರುಗಿತು. ಉತ್ತರಪ್ರದೇಶದಾದ್ಯಂತ ಹಲವಾರುಹಿಂಸಾತ್ಮಕ ಘಟನೆಗಳು ನಡೆದವು. ಮುಝಫ್ಫರ್‌ನಗರ ಮತ್ತು ಮೀರತ್ ಜಿಲ್ಲೆಗಳು ಹಿಂಸೆಯಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾದ ಜಿಲ್ಲೆಗಳು.

ಘಟನೆಗೆ ಸಂಬಂಧಿಸಿ ಎರಡೂ ಜಿಲ್ಲೆಗಳಲ್ಲಿ 700ಕ್ಕೂ ಹೆಚ್ಚು ಜನರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಅವರಲ್ಲಿ ಹೆಚ್ಚಿನವರು ದಲಿತರು. ಮೀರತ್‌ನಲ್ಲಿ ಸುಮಾರು 200 ಮಂದಿಯನ್ನು, ಮುಝಫ್ಫರ್‌ನಗರದಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಯಿತು. ಇವರಲ್ಲಿ ಹೆಚ್ಚಿನವರು ಇನ್ನೂ ಜೈಲಿನಲ್ಲಿದ್ದಾರೆ.

(ಮುಂದುವರಿಯುವುದು)  ಕೃಪೆ : ದಿ ವೈರ್.ಇನ್

Writer - ಕಬೀರ್ ಅಗರ್ವಾಲ್

contributor

Editor - ಕಬೀರ್ ಅಗರ್ವಾಲ್

contributor

Similar News