ತೆಲಂಗಾಣದ 21,000 ಮತದಾರರ ವಯಸ್ಸು100ರಿಂದ 2,017ರ ನಡುವೆ!

Update: 2018-09-17 08:31 GMT

ಹೈದರಾಬಾದ್, ಸೆ.17: ಚುನಾವಣಾ ಆಯೋಗವು ಬಿಡುಗಡೆಗೊಳಿಸಿರುವ ತೆಲಂಗಾಣ ರಾಜ್ಯದ ಮತದಾರರ ಪಟ್ಟಿಯಲ್ಲಿ ಸುಮಾರು 21,000 ಮತದಾರರ ವಯಸ್ಸು 100ರಿಂದ 2017ರ ನಡುವೆ ಇದೆಯೆಂಬ ಆಶ್ಚರ್ಯಕರ ಮಾಹಿತಿಯನ್ನು ಕಾಂಗ್ರೆಸ್ ಬಹಿರಂಗ ಪಡಿಸಿದೆ.

ಈ ಬಗ್ಗೆ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ಮನು ಸಿಂಘ್ವಿ ಮಾಹಿತಿ ನೀಡಿದ್ದಾರೆ. ತೆಲಂಗಾಣದ ಮತದಾರರ ಪಟ್ಟಿಯಲ್ಲಿ 70 ಲಕ್ಷ ನ್ಯೂನತೆಗಳಿವೆ ಎಂದು ಆರೋಪಿಸಿದ ಅವರು, ನ್ಯಾಯೋಚಿತವಲ್ಲದ ಚುನಾವಣೆಗಳ ಬಗ್ಗೆ ತಮ್ಮ ಪಕ್ಷ ಸುಪ್ರೀಂ ಕೋರ್ಟ್ ಕದ ತಟ್ಟುವ ಸಾಧ್ಯತೆಯನ್ನೂ ಅಲ್ಲಗಳೆದಿಲ್ಲ. ಮತದಾರರ ಪಟ್ಟಿಯಲ್ಲಿನ ನ್ಯೂನತೆಗಳ ಲಾಭ ಪಡೆಯುವ ಉದ್ದೇಶದಿಂದಲೇ ಟಿಆರ್‌ಎಸ್ ಅವಧಿಪೂರ್ವ ವಿಧಾನಸಭೆಯನ್ನು ವಿಸರ್ಜಿಸಿದೆ ಎಂದು ಅವರು ಆರೋಪಿಸಿದರು.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿದ್ದಂತೆ ತೆಲಂಗಾಣದಲ್ಲೂ ಮತದಾರರ ಪಟ್ಟಿಯಲ್ಲಿರುವ 70 ಲಕ್ಷ ಮತದಾರರಿಗೆ ಒಂದೋ ನಕಲಿ ಹೆಸರುಗಳಿವೆ ಅಥವಾ ಅವರ ಹೆಸರುಗಳ ನಾಪತ್ತೆಯಾಗಿವೆ. ನಾವು ಖಾಸಗಿ ತಪಾಸಣೆ ಮೂಲಕ ಇಷ್ಟೊಂದು ನ್ಯೂನತೆಗಳನ್ನು ಪತ್ತೆ ಹಚ್ಚಿರುವಾಗ ಅಧಿಕೃತ ಪರಿಶೀಲನೆಗಳು ನಡೆದರೆ ಎಷ್ಟೊಂದು ನ್ಯೂನತೆಗಳು ಪತ್ತೆಯಾಗಬಹುದು ಎಂದು ಅವರು ಪ್ರಶ್ನಿಸಿದರು.

ಸುಮಾರು 50 ಲಕ್ಷ ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಹಲವೆಡೆ ಕಾಣಿಸಿಕೊಂಡಿದ್ದು, ಅವರ ಹೆಸರು, ವಯಸ್ಸು, ಲಿಂಗ ಹಾಗೂ ಫೋಟೋಗಳಲ್ಲಿ ಮಾತ್ರ ವ್ಯತ್ಯಾಸವಿಲ್ಲ. ಅದೇ ಆಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವೆ ಹಂಚಿಕೆಯಾಗಿರುವ ಖಮ್ಮಮ್ ಎಂಬಲ್ಲಿನ 9 ಮಂಡಲಗಳಲ್ಲಿ 17 ಲಕ್ಷ ಮತದಾರರ ಹೆಸರುಗಳು ಮತ್ತೆ ಮತ್ತೆ ಕಾಣಿಸಿಕೊಂಡಿವೆ. ಚುನಾವಣಾ ಆಯೋಗವನ್ನು ಸಂಪರ್ಕಿಸಿದಾಗ ಎರಡೂ ರಾಜ್ಯಗಳು ಈ 17 ಲಕ್ಷ ಮತದಾರರು ತಮ್ಮ ರಾಜ್ಯದವರು ಎಂದು ಹೇಳುತ್ತಿವೆ ಎಂದು ತಿಳಿದು ಬಂತು’’ ಎಂದು ಸಿಂಘ್ವಿ ಹೇಳಿದ್ದಾರೆ.

ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ನಂತರವಷ್ಟೇ ಚುನಾವಣೆ ಘೋಷಿಸಬೇಕು ಎಂದ ಅವರು ಕಾಂಗ್ರೆಸ್ ನಿಯೋಗವೊಂದು ಈ ಬಗ್ಗೆ ಚುನಾವಣಾ ಆಯೋಗದ ಗಮನ ಸೆಳೆದಾಗ ಅದು ಮೌನ ವಹಿಸಿತ್ತು ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News