‘ಖೇಲ್‌ರತ್ನ’ ಪ್ರಶಸ್ತಿಗೆ ವಿರಾಟ್ ಕೊಹ್ಲಿ, ಚಾನು ಹೆಸರು ಶಿಫಾರಸು

Update: 2018-09-17 12:00 GMT

 ಹೊಸದಿಲ್ಲಿ, ಸೆ.17: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಟ್‌ಲಿಫ್ಟರ್ ಸೈಖೋಮ್ ಮಿರಾಬಾಯಿ ಚಾನು ಅವರ ಹೆಸರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಆಯ್ಕೆ ಸಮಿತಿಯು ಶಿಫಾರಸು ಮಾಡಿದೆ.

 ಬಿಸಿಸಿಐ ಎಪ್ರಿಲ್‌ನಲ್ಲಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಸರನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ವಿರಾಟ್ ಕೊಹ್ಲಿ ಹೆಸರನ್ನು ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.

ಒಂದು ವೇಳೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೊಹ್ಲಿ ಹೆಸರು ಅನುಮೋದಿಸಿದರೆ ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾದ ಮೂರನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡುಲ್ಕರ್(1997) ಹಾಗೂ ಎಂಎಸ್ ಧೋನಿ(2007) ಈ ಗೌರವಕ್ಕೆ ಪಾತ್ರರಾಗಿದ್ದರು.

 ಚಾನು ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, 48 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಈ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಗಾಯದ ಸಮಸ್ಯೆಯಿಂದಾಗಿ ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿರಲಿಲ್ಲ.

 ಒಂದು ವೇಳೆ ಚಾನುಗೆ ಖೇಲ್‌ರತ್ನ ಪ್ರಶಸ್ತಿ ಲಭಿಸಿದರೆ, ಕರ್ಣಂ ಮಲ್ಲೇಶ್ವರಿ(1995) ಹಾಗೂ ಎನ್.ಕುಂಜರಾಣಿ(1996) ಬಳಿಕ ಈ ಪ್ರಶಸ್ತಿ ಪಡೆದ ಮೂರನೇ ವೇಟ್‌ಲಿಫ್ಟರ್ ಎನಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News