ಪ್ರಗತಿಯಲ್ಲಿರುವ ರಸ್ತೆ-ಸೇತುವೆ ಕಾಮಗಾರಿ ತ್ವರಿತಗತಿ ಪೂರ್ಣ: ಸಚಿವ ಎಚ್.ಡಿ.ರೇವಣ್ಣ

Update: 2018-09-17 14:25 GMT

ಬೆಂಗಳೂರು, ಸೆ. 17: ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 1,764 ಕೋಟಿ ರೂ.ವೆಚ್ಚದ 859 ರಸ್ತೆ-ಸೇತುವೆ ಕಾಮಗಾರಿಗಳನ್ನು ಪುನರ್ ಆರಂಭಿಸಲು ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಏನೂ ಕೆಲಸ ಆಗುತ್ತಿಲ್ಲ ಎಂಬ ಭಾವನೆಯಲ್ಲಿ ಸರಕಾರ ಟೇಕಾಫ್ ಆಗಿಲ್ಲ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

2016-17ನೆ ಸಾಲಿನಲ್ಲಿ ಕೈಗೊಂಡು ಪ್ರಗತಿಯಲ್ಲಿದ್ದ ‘ಅಪೆಂಡಿಕ್ಸ್-ಇ’ನಲ್ಲಿ ಸೇರ್ಪಡೆಯಾಗಿರುವ 5,427 ಕೋಟಿ ರೂ.ವೆಚ್ಚದ 1841 ರಸ್ತೆ-ಸೇತುವೆ ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಕೋರಲಾಗಿದೆ ಎಂದು ಅವರು ವಿವರಿಸಿದರು.

ಕೇಂದ್ರಕ್ಕೆ ಮನವಿ: ಕೇಂದ್ರ ರಸ್ತೆ ನಿಧಿ(ಸಿಆರ್‌ಎಫ್)ಯಡಿ 2016-17ನೆ ಸಾಲಿನಲ್ಲಿ 3,589 ಕೋಟಿ ರೂ.ವೆಚ್ಚದ 567 ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, ಕೇಂದ್ರ ವಾರ್ಷಿಕ 500 ಕೋಟಿ ರೂ.ಗಳನ್ನಷ್ಟೇ ನೀಡುತ್ತಿದ್ದು, 1 ಸಾವಿರ ಕೋಟಿ ರೂ.ಬಿಲ್ ಬಾಕಿಯಿದೆ. ಅನುಮೋದನೆ ನೀಡಿರುವ ಕಾಮಗಾರಿಗಳಿಗೆ ಒಂದೇ ಅವಧಿಯಲ್ಲಿ ಅನುದಾನ ಬಿಡುಗಡೆಗೆ ಕೋರಿ ಕೇಂದ್ರ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಮೂರನೆ ಹಂತದಲ್ಲಿ 4095 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆಗಳನ್ನು 3.5 ಸಾವಿರ ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ನಿರ್ಧರಿಸಿದ್ದು, 127 ಪ್ಯಾಕೇಜ್ ಮೂಲಕ ಟೆಂಡರ್ ಆಹ್ವಾನಿಸಿ ಗುತ್ತಿಗೆದಾರರ ನೇಮಕ ಮಾಡಲಾಗಿದೆ. ಆ ಪೈಕಿ 93 ಪ್ಯಾಕೇಜ್‌ಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, 34 ಕಾಮಗಾರಿಗಳು ಪ್ರಗತಿಯಲ್ಲಿವೆ. ಆ ಕಾಮಗಾರಿಗಳು 2019ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗುರುಪುರ(50 ಕೋಟಿ ರೂ.), ಶಿವಮೊಗ್ಗ ಜಿಲ್ಲೆ ಸಿಗಂಧೂರು(500 ಕೋಟಿ ರೂ.) ಹಾಗೂ ವಿಜಯಪುರದ ಸಂಕೇಶ್ವರ (200 ಕೋಟಿ ರೂ.) ಸೇತುವೆ ಕಾಮಗಾರಿಗೆ ಆರು ತಿಂಗಳಲ್ಲೆ ಡಿಪಿಆರ್ ಸಿದ್ಧಪಡಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ’

-ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News