ರಾಮನಗರ, ಬಿಡದಿ, ಮಂಡ್ಯ ಬೈಪಾಸ್ ರಸ್ತೆ ಕಾಮಗಾರಿ ಆರಂಭ: ಸಚಿವ ಎಚ್.ಡಿ.ರೇವಣ್ಣ

Update: 2018-09-17 14:28 GMT

ಬೆಂಗಳೂರು, ಸೆ. 17: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ(ಹತ್ತು ಪಥ)ಯನ್ನು 7 ಸಾವಿರ ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದು, ಈಗಾಗಲೇ ರಾಮನಗರ, ಬಿಡದಿ, ಮಂಡ್ಯ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿಗೆ ಈಗಾಗಲೇ ಶೇ.80ರಷ್ಟು ಭೂಸ್ವಾಧೀನ ಪೂರ್ಣಗೊಂಡಿದ್ದು, ಉಳಿದ ಶೇ.20ರಷ್ಟು ಭೂಮಿಯನ್ನು ಸೆಪ್ಟಂಬರ್ ಅಂತ್ಯಕ್ಕೆ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಲಾಗುವುದು ಎಂದರು.

ಎಲಿವೇಟೆಡ್ ಕಾರಿಡಾರ್: ರಾಮನಗರ, ಚನ್ನಪಟ್ಟಣ, ಮಂಡ್ಯ, ಮದ್ದೂರು ಪಟ್ಟಣ ಹಾಗೂ ಮೈಸೂರು ಜಂಕ್ಷನ್‌ನಲ್ಲಿ ‘ಎಲಿವೇಟೆಡ್ ಕಾರಿಡಾರ್’ ನಿರ್ಮಿಸಲಾಗುವುದು. ಈ ಕಾರ್ಯಕ್ಕೆ 800 ಕೋಟಿ ರೂ.ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಎಲಿವೇಟೆಡ್ ಕಾರಿಡಾರ್ ಕೆಳಗೆ ಆರು ಪಥದ ರಸ್ತೆ, ಮೇಲ್ಭಾಗದಲ್ಲಿ ವಾಹನಗಳ ಸಂಖ್ಯೆ ಆಧರಿಸಿ ನಾಲ್ಕು ಅಥವಾ ಆರು ಪಥದ ರಸ್ತೆ ನಿರ್ಮಿಸಲಾಗುವುದು ಎಂದ ಅವರು, ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸರಕಾರವೇ ಹಣ ಭರಿಸಲಿದೆ ಎಂದರು.

ಮೊದಲ ಹಂತದಲ್ಲಿ 56 ಕಿ.ಮೀ. ಭೂಸ್ವಾಧೀನಕ್ಕೆ 2,190 ಕೋಟಿ ರೂ., 1,700 ಕೋಟಿ ರೂ.ರಸ್ತೆ ಕಾಮಗಾರಿಗೆ ಬೇಕಾಗುತ್ತದೆ. ಎರಡನೆ ಹಂತದಲ್ಲಿ 69 ಕಿ.ಮೀ 1,131 ಕೋಟಿ ರೂ.ಭೂಸ್ವಾಧೀನಕ್ಕೆ, 2,196 ಕೋಟಿ ರೂ. ರಸ್ತೆ ಕಾಮಗಾರಿಗೆ ಅಗತ್ಯವಿದೆ ಎಂದು ವಿವರಿಸಿದರು.

‘ನಮ್ಮ ಕುಟುಂಬ ಸರಕಾರಿ ಜಮೀನು ಕಬಳಿಸಿದ್ದರೆ ಆ ಭೂಮಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ಹಲವು ಮಂದಿ ವಿವಿಧ ಆರೋಪಗಳನ್ನು ಮಾಡಿದ್ದಾರೆ. ಇಂತಹ ಆರೋಪಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ’

-ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ

‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಿದ್ದರೂ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ. ರಾಜ್ಯಪಾಲರ ಆಡಳಿತ ಬರಬಹುದು ಎಂದು ಬಿಜೆಪಿಯ ನಾಯಕರೇ ನನ್ನ ಬಳಿ ಹೇಳಿದ್ದಾರೆ. ಸಮಯ ಬಂದಾಗ ಆ ನಾಯಕರ ಹೆಸರನ್ನು ಹೇಳುತ್ತೇನೆ. ಯಾವುದೇ ಕಾರಣಕ್ಕೂ ಮೈತ್ರಿ ಸರಕಾರ ಬಿದ್ದು ಹೋಗುವುದಿಲ್ಲ’

-ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News