‘ಭೂ ಪರಿರ್ವತನೆ’ಗೆ ಇನ್ನು ಆನ್‌ಲೈನ್ ಮೂಲಕ ಅರ್ಜಿ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ

Update: 2018-09-17 14:44 GMT

ಬೆಂಗಳೂರು, ಸೆ. 17: ‘ಭೂಪರಿವರ್ತನೆ’ಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭೂಪರಿವರ್ತನೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಪರಿವರ್ತನೆಗೆ ಆಗುತ್ತಿದ್ದ ವಿಳಂಬವನ್ನು ತಪ್ಪಿಸಿ, ಸುಗಮ ಮತ್ತು ತ್ವರಿತವಾಗಿ ನಡೆಯಲು ಅನುಕೂಲವಾಗುವಂತೆ 1964ರ ಭೂಕಂದಾಯ ಕಾಯ್ದೆಯ ಕಲಂ-95ಕ್ಕೆ ಈಗಾಗಲೇ ತಿದ್ದುಪಡಿ ತರಲಾಗಿದೆ. ಈ ಸಂಬಂಧ ತಂತ್ರಾಂಶವನ್ನು (ಸಾಫ್ಟ್‌ವೇರ್) ಅಭಿವೃದ್ಧಿ ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಭಾವಿತ ಪರಿವರ್ತನೆ (ಡೀಮ್ಡ್ ಕನ್ವರ್ಷನ್) ಎಂಬ ಸರಳವಾದ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ. ಹೊಸ ನಿಯಮದ ಪ್ರಕಾರ, ಸರಳೀಕೃತ ಭೂಪರಿವರ್ತನೆ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆನ್‌ಲೈನ್ ಮೂಲಕವೇ ಭೂ ಪರಿರ್ವತನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನು ಮೊದಲಿಗೆ ಸಂಬಂಧಪಟ್ಟ ಜಮೀನಿನ ಸರ್ವೆ ನಂಬರ್ ಮತ್ತು ಅಗತ್ಯ ವಿವರಗಳ ಮನವಿ ಸಲ್ಲಿಸಬೇಕು. ನಂತರ, ಅರ್ಜಿದಾರನು ಪ್ರಮಾಣಪತ್ರದೊಂದಿಗೆ ಮನವಿ ಪತ್ರವನ್ನು ಸಲ್ಲಿಸಬೇಕು. ಅರ್ಜಿದಾರನು ಮನವಿಯೊಂದಿಗೆ ಈ ಕೆಳಕಂಡ ಪ್ರಕರಣಗಳಲ್ಲಿ ‘11ಇ’ ನಕ್ಷೆಯನ್ನು ಸಲ್ಲಿಸಬೇಕು. ಭಾಗಶಃ ಭೂಪರಿವರ್ತನೆಗೆ ಸಂಬಂಧಿಸಿದ್ದಲ್ಲಿ, ಪಹಣಿಯಲ್ಲಿ ಒಬ್ಬರಿಗಿಂತ ಹೆಚ್ಚು ಖಾತೆದಾರರ ಹೆಸರು ನಮೂದಾಗಿದ್ದಲ್ಲಿ, ಮನವಿಯು ‘ಪೈಕಿ ಪಹಣಿಗಳನ್ನು’ ಒಳಗೊಂಡಿದ್ದಲ್ಲಿ, ಬಳಿಕ ಈ ಮನವಿಯನ್ನು ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಕಳುಹಿಸಲಾಗುವುದು.

ಅಲ್ಲಿನ ಅಧಿಕಾರಿಗಳು, ಪರಿಶೀಲಿಸಿ ತಮ್ಮ ಅಭಿಪ್ರಾಯವನ್ನು ಸಲ್ಲಿಸುತ್ತಾರೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಸ್ವೀಕೃತವಾಗುವ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಭೂಪರಿವರ್ತನೆಗೆ ಸಂಬಂಧಿಸಿದ ಶುಲ್ಕ ಮತ್ತು ದಂಡವನ್ನು ನಿಗದಿಪಡಿಸಲಾಗುವುದು. ಅರ್ಜಿದಾರನು ಆನ್‌ಲೈನ್ ಮೂಲಕ ನಿಗದಿತ ಶುಲ್ಕ ಮತ್ತು ದಂಡವನ್ನು ಪಾವತಿಸಿ, ಈ ಸಂಬಂಧ ಗಣಕೀಕೃತ ತಾತ್ಕಾಲಿಕ ಶುಲ್ಕ ಸ್ವೀಕೃತಿಯ ವಿವರದ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜಿಲ್ಲಾಧಿಕಾರಿಗಳು ಡಿಜಿಟಲ್ ಅಂಕಿತದ ಮೂಲಕ ಭೂಪರಿವರ್ತನಾ ಆದೇಶವನ್ನು ಹೊರಡಿಸಲಿದ್ದಾರೆ ಎಂದು ಹೇಳಿದರು.

ಅರ್ಜಿದಾರನು ಈ ಆದೇಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಂತೆ, ಭೂಪರಿವರ್ತನೆಯು 1961ರ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ’ದಡಿ ಸರಕಾರವು ಪ್ರಕಟಿಸಿರುವ ಮಾಸ್ಟರ್ ಪ್ಲ್ಯಾನ್‌ಗೆ ಅನುಗುಣವಾಗಿ ಇದ್ದಲ್ಲಿ ಇಂತಹ ಪ್ರಕರಣಗಳನ್ನು ಪರಿಭಾವಿತ ಭೂ ಪರಿವರ್ತನೆ (ಡೀಮ್ಡ್ ಕನ್ವರ್ಷನ್) ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ಭೂ ಪರಿವರ್ತನೆಗೆ ಒಳಪಡುವ ಜಮೀನು ಸ್ಥಳೀಯ ಯೋಜನಾ ಪ್ರದೇಶದ ಒಳಗಿದ್ದು, ಪ್ರಸ್ತಾಪಿತ ಭೂ ಪರಿವರ್ತನೆಯ ಉದ್ದೇಶವು ಮೇಲ್ಕಂಡ ಅಧಿನಿಯಮದ ಉಪಬಂಧದಡಿ ಪ್ರಕಟಪಡಿಸಿದ ಮಾಸ್ಟರ್ ಪ್ಲ್ಯಾನ್‌ನಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕೆ ಅನುಗುಣವಾಗಿಯೂ ಇರಬೇಕು. ಈ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದು ದೇಶಪಾಂಡೆ ಸೂಚಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News