ಸೆ.19: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಶತಮಾನೋತ್ಸವ ಆಚರಣೆ

Update: 2018-09-17 14:51 GMT

ಬೆಂಗಳೂರು, ಸೆ. 17: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಒಂದು ಶತಮಾನ ಪೂರೈಸಿರುವ ಹಿನ್ನೆಲೆಯಲ್ಲಿ ಸೆ.19ರಂದು ಬಿಬಿಎಂಪಿ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಹಾಗೂ ರಾಜ್ಯ ಪರಿಷತ್ ಸಾಮಾನ್ಯ ಸಭೆ ಏರ್ಪಡಿಸಲಾಗಿದೆ.

ಸೋಮವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, 100ನೆ ರಾಜ್ಯ ಪರಿಷತ್ ಸಾಮಾನ್ಯ ಸಭೆ ಅರಮನೆ ರಸ್ತೆಯ ಶಾಂತಿ ಗೃಹದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ ಎಂದರು.

ರಾಜಮಾತೆ ಡಾ.ಪ್ರಮೋದಾ ದೇವಿ ಒಡೆಯರ್, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಮುಖ್ಯ ರಾಷ್ಟ್ರೀಯ ಆಯುಕ್ತ ಡಾ.ಕೆ.ಕೆ.ಖಂಡೇಲ್ ವಾಲ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಹಾಗೂ ಬಿಬಿಎಂಪಿ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ಜರುಗಲಿದ್ದು, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಶಾಂತಿ, ಅರಿವು ಮತ್ತು ಸಹಕಾರಗಳ ಬೆಳವಣಿಗೆಯೊಂದಿಗೆ ಸಾಮರಸ್ಯ ಹೊಂದಿರುವ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಅನ್ನು ಎಲ್ಲ ಶಾಲಾ ಕಾಲೇಜಿನಲ್ಲೂ ಕಡ್ಡಾಯಗೊಳಿಸುವಂತೆ ಸಂಸತ್ತಿನಲ್ಲಿ ಕಾಯ್ದೆ ರೂಪಿಸಬೇಕು. ಇನ್ನು ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲೂ ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ರಾಜ್ಯದಾದ್ಯಂತ ಸ್ಕೌಟ್ಸ್ ಅಂಡ್ ಗೈಡ್ಸ್‌ನಲ್ಲಿ 5.2ಲಕ್ಷ ವಿದ್ಯಾರ್ಥಿಗಳು ಇದ್ದು, ಶಿಕ್ಷಕರು ಮಕ್ಕಳಲ್ಲಿ ಸೇವಾ ಮನೋಭಾವವನ್ನು ಬೆಳೆಸಿದ್ದಾರೆ ಎಂದ ಅವರು, ಬಿಬಿಎಂಪಿ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದ ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯು 1ಕೋಟಿ ಹಣವನ್ನು ನೀಡಿದೆ ಎಂದರು.

ಪ್ರಧಾನಿಗೆ ಪತ್ರ

ಕೇಂದ್ರದ ರೈಲ್ವೆ ಸೇರಿದಂತೆ ಇನ್ನಿತರೆ ಇಲಾಖೆಗಳ ನೇಮಕಾತಿಯಲ್ಲಿ ಪ್ರಸ್ತುತ ಇರುವ ಶೇ.2 ಮೀಸಲಾತಿಯನ್ನು ಶೇ.5ರಷ್ಟು ಹೆಚ್ಚಿಸಬೇಕೆಂದು ಪ್ರಧಾನಿ ಮಂತ್ರಿಗೆ ಪತ್ರ ಬರೆಯಲಾಗಿದೆ.

-ಪಿ.ಜಿ.ಆರ್.ಸಿಂಧ್ಯ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ರಾಜ್ಯ ಮುಖ್ಯ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News