ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಿವಸೇನೆಯ ಮಾಜಿ ಕಾರ್ಪೋರೇಟರ್ ಸಿಟ್ ವಶಕ್ಕೆ

Update: 2018-09-17 15:06 GMT

ಬೆಂಗಳೂರು, ಸೆ.17: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಶಿವಸೇನೆಯ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪಂಗಾರ್ಕರ್ ಎಂಬಾತನನ್ನು ಕರ್ನಾಟಕದ ವಿಶೇಷ ತನಿಖಾ ತಂಡ (ಸಿಟ್) 12 ದಿನಗಳ ಕಾಲ ವಶಕ್ಕೆ ಪಡೆದಿದೆ.

ಸೋಮವಾರ ನಗರದ ಸೆಷನ್ಸ್ ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವೂ ಆರೋಪಿಯನ್ನು 12 ದಿನಗಳ ಕಾಲ ಸಿಟ್ ವಶಕ್ಕೆ ನೀಡಿ ಆದೇಶಿಸಿದೆ. ಗೌರಿ ಲಂಕೇಶ್ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು, ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಟ್ ತಂಡ ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗಾಗಿ ಬಾಡಿ ವಾರೆಂಟ್ ಮೇಲೆ ರಾಜಧಾನಿ ಬೆಂಗಳೂರಿಗೆ ಕರೆ ತಂದಿದ್ದಾರೆ.

ಸಿಟ್ ತನಿಖಾಧಿಕಾರಿಗಳು ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಸುಧನ್ವ ಗೊಂಡೇಲ್ಕರ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ವೇಳೆ ಈತ ನೀಡಿದ್ದ ಮಾಹಿತಿ ಮಾಹಿತಿ ಆಧಾರದ ಮೇಲೆ ಶ್ರೀಕಾಂತ್ ಪಂಗಾರ್ಕರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಾಜಿ ಕಾರ್ಪೊರೇಟರ್ ಆಗಿದ್ದ ಶ್ರೀಕಾಂತ್ ಪಂಗಾರ್ಕರ್, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈಯಲು ಈಗಾಗಲೇ ಸಿಟ್ ವಶದಲ್ಲಿರುವ ಆರೋಪಿಗಳಿಗೆ ಹಣದ ಜತೆಗೆ 7.6 ಎಂಎಂ ಸ್ವದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ಸರಬರಾಜು ಮಾಡಿದ್ದ ಆರೋಪ ಇದೆ ಎನ್ನಲಾಗಿದೆ.

ಯಾರು ಈತ?: ಮುಂಬೈನ ಜಾಲ್ನ ನಿವಾಸಿಯಾದ ಶ್ರೀಕಾಂತ್ ಪಂಗಾರ್ಕರ್ ಶಿವಸೇನೆಯಿಂದ 2001 ರಿಂದ 2011ರವರೆಗೆ ಎರಡು ಬಾರಿ ಸ್ಪರ್ಧಿಸಿ ಮುಂಬೈ ನಗರ ಪಾಲಿಕೆಗೆ ಆಯ್ಕೆಯಾಗಿದ್ದ. ಹಿಂದೂ ಧರ್ಮ, ಧಾರ್ಮಿಕತೆ, ಆಚಾರ-ವಿಚಾರಗಳ ಬಗ್ಗೆ ಅತೀವ ಒಲವು ಹೊಂದಿದ್ದ ಈತ ಯಾರಾದರೂ ಹಿಂದೂ ಧರ್ಮದ ಬಗ್ಗೆ ಲಘುವಾಗಿ ಮಾತನಾಡುವುದು, ಅವಹೇಳನ ಮಾಡುವುದು ಇಲ್ಲವೇ ಟೀಕಿಸುವುದನ್ನು ಮಾಡಿದರೆ ಸಹಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

ವಿಚಾರವಾದಿಗಳ ಹತ್ಯೆಯಲ್ಲಿ ಈತನ ಪ್ರಮುಖ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ಈತನ ಬಂಧನದಿಂದ ಕೆಲವು ಸ್ಪೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರೆಲ್ಲರೂ ನ್ಯಾಯಾಂಗ ವಶದಲ್ಲಿದ್ದಾರೆ.

ಸುಪಾರಿ
ಗೌರಿ ಲಂಕೇಶ್ ಹತ್ಯೆ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಅಮೋಲ್ ಕಾಳೆ ಮತ್ತು ಅಮೀತ್ ದಿಗ್ವೇಕರ್ ಜತೆ ಶ್ರೀಕಾಂತ್ ಪಂಗಾರ್ಕರ್ ಸಂಪರ್ಕ ಇಟ್ಟುಕೊಂಡಿದ್ದ. ಮಹಾರಾಷ್ಟ್ರದಲ್ಲಿ ಹತ್ಯೆಗೊಳಗಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ್ ಪನ್ಸಾರೆಯನ್ನು ಹತ್ಯೆಗೈಯಲು ಶ್ರೀಕಾಂತ್ ಪಂಗಾರ್ಕರ್ ವೈಭವ್ ರಾತ್, ಶರದ್ ಕಲಸ್ಕರ್ ಮತ್ತು ಸುಧನ್ವ ಗೊಂಡಲ್ಕರ್‌ಗೆ ಈತ ಸುಪಾರಿ ನೀಡಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News