ಬೆಂಗಳೂರು: ವಿವಿಧ ಪ್ರಕರಣಗಳ 11 ಆರೋಪಿಗಳ ಸೆರೆ, 32 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

Update: 2018-09-17 16:36 GMT

ಬೆಂಗಳೂರು, ಸೆ.17: ಸುಲಿಗೆ, ವಾಹನ ಕಳ್ಳತನ, ರಕ್ತಚಂದನ ಸಾಗಾಟ ಪ್ರಕರಣ ಸಂಬಂಧ 11 ಜನರನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ ರಕ್ತ ಚಂದನ ಮತ್ತು 22 ವಾಹನಗಳು ಸೇರಿ 32 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡುವಲ್ಲಿ ನಗರದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಅಪರಾಧ ವಿಮರ್ಶಾ ಸಭೆಯಲ್ಲಿ ಬೈಕ್ ಕಳ್ಳರನ್ನು ಪತ್ತೆಹಚ್ಚಲು ಹಿರಿಯ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದರು. ಅದರಂತೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಅವರು ವಿಶೇಷ ತಂಡಗಳನ್ನು ರಚಿಸಿದ್ದರು. ಈ ತಂಡಗಳು ಅ.16ರಿಂದ ಸೆ.14ರವರೆಗೆ ಒಟ್ಟು 30 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಒಟ್ಟು 11 ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾಲು ವಶಕ್ಕೆ ಪಡೆದಿದ್ದಾರೆ.

ವರ್ತೂರು ಪೊಲೀಸ್ ಠಾಣೆಯ ಎಸ್ಸೈ ಬಿ.ರಾಮಚಂದ್ರ, ಪಿಎಸ್ಸೈ ಧರಣೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸರಗಳ್ಳತನ, ಕನ್ನಗಳವು, ಬೈಕ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಎಚ್‌ಎಸ್‌ಆರ್ ಲೇಔಟ್‌ನ ನಿವಾಸಿ ಮಣಿಕಂಠ (24), ಕೋರಮಂಗಲದ ಕುಮಾರ್ ಎಂಬವರನ್ನು ಬಂಧಿಸಿ 7.65 ಲಕ್ಷ ರೂ.ಬೆಲೆಬಾಳುವ 205 ಗ್ರಾಂ ತೂಕದ ಚಿನ್ನಾಭರಣ, 2 ಬೈಕ್ ವಶಕ್ಕೆ ಪಡೆಯಲಾಗಿದೆ. ಇವರ ಬಂಧನದಿಂದ 2 ಸರಗಳ್ಳತನ, ರಾತ್ರಿ ಕಳವು ಮತ್ತು 4 ಇತರ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.

ಕೆಆರ್ ಪುರಂ ಪೊಲೀಸ್ ಠಾಣೆಯ ಎಸ್ಸೈ ಎಚ್.ಜಯರಾಜ್, ಪಿಎಸ್ಸೈ ಮಂಜುನಾಥ್ ಅವರ ನೇತೃತ್ವದ ತಂಡ, ವಿಶೇಷ ಕಾರ್ಯಾಚರಣೆ ನಡೆಸಿ, ಬೈಕ್ ವಾಹನ ಕಳವು ಮಾಡುತ್ತಿದ್ದ ತಮಿಳುನಾಡಿನ ಅಂಬೂರು ನಿವಾಸಿ ನಿಯಾಝ್ ಅಹ್ಮದ್ (45) ಎಂಬಾತನನ್ನು ಬಂಧಿಸಿ, 9.50 ಲಕ್ಷ ರೂ.ಬೆಲೆಬಾಳುವ 14 ಬೈಕ್‌ಗಳನ್ನು ವಶಪಡಿಸಿಕೊಂಡಿದೆ. ಮಾರತ್‌ಹಳ್ಳಿ ಪೊಲೀಸ್ ಠಾಣೆಯ ಎಸ್ಸೈ ಸಾದಿಕ್ ಪಾಷಾ, ಪಿಎಸ್ಸೈ ನಾಗರಾಜು ಮತ್ತು ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ, ಸುಲಿಗೆ ಮಾಡುತ್ತಿದ್ದ ಬೆಳ್ಳಂದೂರು ನಿವಾಸಿ ಶಿವ (20), ವರ್ತೂರು ನಿವಾಸಿ ರಾಜಮಾಣಿಕ್ಯ (35) ಎಂಬವರನ್ನು ಬಂಧಿಸಿ, ಅವರಿಂದ 9 ಮೊಬೈಲ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಆಟೊ ಜಪ್ತಿ ಮಾಡಿದ್ದಾರೆ.

ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಎಸ್ಸೈ ಪ್ರವೀಣ್ ಬಾಬು ಮತ್ತು ಪಿಎಸ್ಸೈ ಸೋಮಶೇಖರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿ ಅರುಣ್ ಕುಮಾರ್ (19) ಎಂಬಾತನನ್ನು ಬಂಧಿಸಿ 2 ಬೈಕ್, 2 ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ.

ರಕ್ತಚಂದನ: ಮಹದೇವಪುರ ಎಸ್ಸೈ ಶ್ರೀನಿವಾಸ್, ಪಿಎಸ್ಸೈ ಜಿ. ನಾರಾಯಣಸ್ವಾಮಿ ಅವರ ನೇತೃತ್ವದ ತಂಡ ಸೆ.2ರಂದು ಮಹದೇವಪುರದ ಟಿನ್‌ಫ್ಯಾಕ್ಟರಿ ಬಳಿ ಕಾರ್ಯಾಚರಣೆ ನಡೆಸಿ, ರಕ್ತ ಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಹಿಡಿದು 10 ಲಕ್ಷ ರೂ.ಬೆಲೆಬಾಳುವ ರಕ್ತ ಚಂದನ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಸಂಬಂಧ ತಮಿಳುನಾಡಿನ ತಿರುವಣ್ಣಾಮಲೈ ವೇಲುವಣಕಂಬಾಡಿ ನಿವಾಸಿಗಳಾದ ಮಂಜುನಾಥ್ (21), ಗೋವಿಂದರಾಜು (20), ಸೇಲಂ ಕುಂಬಪಾಡಿ ನಿವಾಸಿಗಳಾದ ಗೋವಿಂದರಾಜು (36) ಮತ್ತು ಸರವಣ (23) ಎಂಬುವರನ್ನು ಬಂಧಿಸಲಾಗಿದೆ.

ಮಾರತ್‌ಹಳ್ಳಿ ಠಾಣೆಯ ಎಸ್ಸೈ ಸಾದಿಕ್ ಪಾಷಾ, ಪಿಎಸ್ಸೈ ಗುರುಪ್ರಸಾದ್ ನೇತೃತ್ವದ ವಿಶೇಷ ತಂಡವು, ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿ, ಅಪರಿಚಿತ ದಾರಿಹೋಕರಿಗೆ ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ವಶಕ್ಕೆ ಪಡೆದಿದೆ.

ಈತ ನಾಗೇಶ ಎಂಬಾತನ ಜೊತೆ ಸೇರಿ ನಗರದ ವಿವಿಧೆಡೆ ಸುಲಿಗೆ ಮತ್ತು ಕಳವು ಮಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, 4 ಲಕ್ಷ ರೂ.ಬೆಲೆಬಾಳುವ ವಿವಿಧ ಕಂಪೆನಿಯ 18 ಮೊಬೈಲ್ಗಳು, 3 ಬೈಕ್ ಜಪ್ತಿ ಮಾಡಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News