ಸಾಂವಿಧಾನಿಕ ಬಿಕ್ಕಟ್ಟು ಎದುರಾದರೆ ಕೈ ಕಟ್ಟಿ ಕೂರಲ್ಲ: ಯಡಿಯೂರಪ್ಪ

Update: 2018-09-17 16:42 GMT

ಬೆಂಗಳೂರು, ಸೆ.17: ಸಮ್ಮಿಶ್ರ ಸರಕಾರ ಪಕ್ಷಗಳ ಒಳ ಜಗಳದಿಂದ ಜರ್ಜರಿತವಾಗಿದ್ದು, ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹೇಳುವುದು ತಪ್ಪೇ? ಒಂದು ರಾಜಕೀಯ ಪಕ್ಷವಾಗಿ ಸಮ್ಮಿಶ್ರ ಸರಕಾರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾದಾಗ ನಾವು ಕೈ ಕಟ್ಟಿ ಕೂರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬಿಕ್ಕಟ್ಟನ್ನು ಬಗೆಹರಿಸಿ ಸರಕಾರ ರಚಿಸಿ ಜನರಿಗೆ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ಈ ರಾಜಕೀಯ ಪ್ರಕ್ರಿಯೆಯಲ್ಲಿ ಸರಕಾರವನ್ನು ಕೆಡವುತ್ತಿದ್ದೇವೆ ಎನ್ನುವ ಭ್ರಮೆ ಅವರಲ್ಲಿ ಇರಬಾರದು ಎಂದರು.

ಕಾಂಗ್ರೆಸ್ ನಾಯಕರ ಅಸಮಾಧಾನವನ್ನು ಹೋಗಲಾಡಿಸಲಾಗದ ಮುಖ್ಯಮಂತ್ರಿ, ಈ ರೀತಿಯ ಸ್ವೇಚ್ಛಾಚಾರದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಯಾವುದೇ ಕಾಂಗ್ರೆಸ್ ಮುಖಂಡರನ್ನು ದೂಷಿಸಿದರೂ ಸರಕಾರ ಉರುಳಿ ಹೋಗುತ್ತದೆ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಯು ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿರಾಯಾಸವಾಗಿ ಸಿಕ್ಕಿರುವ ಮುಖ್ಯಮಂತ್ರಿ ಗಾದಿ ಕೈ ತಪ್ಪುವ ಭಯದಿಂದ ಯಾವುದೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ನನ್ನನ್ನು ಖಳನಾಯಕ ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಅಭಿವೃದ್ಧಿ ವಿಷಯದಲ್ಲೂ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎರಡು ರೂ.ಇಳಿಸಿದ್ದು ಜನರ ಕಣ್ಣಿಗೆ ಮಣ್ಣೆರಚಿದ್ದಾರೆ. ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 1.56 ರೂ. ಏರಿಸಿ ಇಂದು ಎರಡು ರೂಪಾಯಿ ಇಳಿಸಿ ಜನರಿಗೆ ತಲುಪಿಸಿದ ಲಾಭ ಕೇವಲ 44 ಪೈಸೆ ಮಾತ್ರ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News