ಬಿಎಸ್‌ವೈ ದಿಢೀರ್ ಶಾಸಕರ ಸಭೆಯತ್ತ ಎಲ್ಲರ ಚಿತ್ತ

Update: 2018-09-17 16:53 GMT

ಬೆಂಗಳೂರು, ಸೆ. 17: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿನ ಆಂತರಿಕ ಬೇಗುದಿಯ ಲಾಭವನ್ನು ಪಡೆದುಕೊಳ್ಳಲು ವಿಪಕ್ಷ ಬಿಜೆಪಿ ಮುಂದಾಗಿದ್ದು, ದಿಢೀರ್ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಶಾಸಕರ ತುರ್ತು ಸಭೆ ಕರೆದಿರುವುದು ರಾಜಕೀಯ ಕುತೂಹಲ ಸೃಷ್ಟಿಸಿದೆ.

ನಾಳೆ(ಸೆ.18) ಅಧಿಕೃತ ಕಾರ್ಯಕ್ರಮ ನಿಮಿತ್ತ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿ ಮುಖಂಡರ ಜತೆ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

‘ನಾಳೆ(ಸೆ.18) ಅಥವಾ ನಾಡಿದ್ದಿನ ಒಳಗೆ ರಾಜ್ಯದಲ್ಲಿನ ಮೈತ್ರಿ ಸರಕಾರ ಬಿದ್ದು ಹೋಗಲಿದೆ’ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ಈ ಮಧ್ಯೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳಾದ ಶಾಸಕರಾದ ಎಂಟಿಬಿ ನಾಗರಾಜ್, ಭೀಮಾನಾಯ್ಕಿ ಹಾಗೂ ಡಾ.ಸುಧಾಕರ್, ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸುಭದ್ರವಾಗಿದೆ. ಯಾವುದೇ ಅಡೆಚಣೆಗಳಿಲ್ಲದೆ ಈ ಸರಕಾರ ಐದು ವರ್ಷ ಪೂರೈಸುತ್ತದೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಬಿಜೆಪಿ ದಿಢೀರ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಳಿಸಿದೆ.

ಈ ನಡುವೆ ಮೈತ್ರಿ ಸರಕಾರದ ಪಾಲುದಾರಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 12ಕ್ಕೂ ಹೆಚ್ಚು ಮಂದಿ ಶಾಸಕರು ನಾಳೆ(ಸೆ.18) ರಾಜ್ಯಪಾಲರಿಗೆ ರಾಜೀನಾಮೆ ನೀಡಲಿದ್ದಾರೆಂದು ಊಹಾಪೋಹದ ಸುದ್ದಿಗಳು ಹರಿದಾಡುತ್ತಿದ್ದು, ನಾಳೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News