ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ ಕನ್ನಡ ಕಡೆಗಣನೆ: ಎಸ್‌ಜಿ ಸಿದ್ದರಾಮಯ್ಯ ಅಸಮಾಧಾನ

Update: 2018-09-17 16:58 GMT

ಬೆಂಗಳೂರು, ಸೆ. 17: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ ಕನ್ನಡ ಕಡೆಗಣನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ನಗರದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, 20 ದಿನಗಳಲ್ಲಿ ನಿಗಮವು ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲು ಸರಕಾರದ ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಮಾಡುವುದಾಗಿ ನಿಗಮದ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಇಡೀ ರಾಜ್ಯಕ್ಕೆ ತಂತ್ರಜ್ಞಾನ ಅವಶ್ಯಕತೆಗಳನ್ನು ಒದಗಿಸಿಕೊಡುವ ಜತೆಗೆ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದು ಎಲ್ಲಾ ಇಲಾಖೆಗಳೊಂದಿಗೆ ನಿಗಮದ ಕಾರ್ಯ ವ್ಯಾಪ್ತಿಯಿದ್ದರೂ ಸಹ ನಿಗಮದ ಆಡಳಿತವು ಇಂಗ್ಲಿಷ್ ಭಾಷೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತ ಒಳ ವ್ಯವಹಾರಗಳು, ನಿಗಮದ ಮೊಹರುಗಳು, ಅಂತರ್ಜಾಲ ತಾಣ, ಕಡತಗಳಲ್ಲಿನ ಟಿಪ್ಪಣಿಗಳೆಲ್ಲದರಲ್ಲೂ ಇಂಗ್ಲಿಷ್ ಬಳಕೆಯನ್ನು ಪುನರಾವರ್ತನೆ ಮಾಡಿದರೆ ಸರಕಾರಕ್ಕೆ ಶಿಸ್ತುಕ್ರಮ ಜರುಗಿಸಲು ಶಿಫಾರಸು ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. 

ಪ್ರೊ.ಚಂದ್ರಶೇಖರ ಪಾಟೀಲ್ ಮಾತನಾಡಿ, ನಿಗಮದ ಅಧಿಕಾರಿ ನೌಕರರೆಲ್ಲರೂ ಕನ್ನಡದವರೇ ಆಗಿದ್ದರೂ ಇಂಗ್ಲಿಷ್ ವ್ಯಾಮೋಹದಲ್ಲಿ ಆಡಳಿತ ನಡೆಸುತ್ತಿರುವುದು ಖಂಡನೀಯ. ಅಂತೆಯೇ ನಿಗಮವು ಎಚೆತ್ತುಕೊಳ್ಳದಿದ್ದಲ್ಲಿ ಪ್ರಾಧಿಕಾರವು ನಿಗಮದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು.

ನಿಗಮದಲ್ಲಿ ಶೇ.20ರಷ್ಟೂ ಸಹ ಕನ್ನಡ ಅನುಷ್ಠಾನವಾಗದೇ ಇರುವುದಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಹೊರಗುತ್ತಿಗೆ ಆಧಾರದಲ್ಲಿ ರಾಜ್ಯದ ವಿವಿಧ ಇಲಾಖೆಗಳಿಗೆ ಏಜೆನ್ಸಿಗಳ ಮೂಲಕ ಮಾನವ ಸಂಪನ್ಮೂಲವನ್ನು ಸರಬರಾಜು ಮಾಡುತ್ತಿರುವ ಒಡಂಬಡಿಕೆಯಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ವೃಂದದ ನೌಕರಿಯಲ್ಲಿ ಶೇ.100ರಷ್ಟು ಪ್ರಥಮ ಆದ್ಯತೆ ನೀಡಬೇಕೆಂದರು.

ಪರಿಶೀಲನಾ ಸಮಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಭಾಕರ್ ಪಟೇಲ್, ಗಿರೀಶ್ ಪಟೇಲ್, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜೆ.ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News