ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಬಲಿಪ ನಾರಾಯಣಗೆ ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’

Update: 2018-09-17 17:04 GMT

ಬೆಂಗಳೂರು, ಸೆ.17: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ನೀಡುವ ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಯನ್ನು ಮಂಗಳೂರು ಜಿಲ್ಲೆಯ ಮೂಡಬಿದಿರೆಯ ಯಕ್ಷಗಾನ ಪ್ರಸಂಗಗಳ ಕರ್ತೃ ಹಾಗೂ ಭಾಗವತ ಬಲಿಪ ನಾರಾಯಣ ಅವರಿಗೆ ನೀಡಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ತಿಳಿಸಿದ್ದಾರೆ.

ಸೋಮವಾರ ನಗರದ ಕನ್ನಡದ ಭವನದ ಅಕಾಡೆಮಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 65 ವರ್ಷಗಳಿಂದ ಯಕ್ಷಗಾನ ಕಲೆಯನ್ನು ಪ್ರದರ್ಶಿಸಿಕೊಂಡು ಬಂದಿರುವ ಬಲಿಪ ನಾರಾಯಣ ಅವರು, ಇಂದಿಗೂ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಇಳಿವಯಸ್ಸಿನಲ್ಲಿಯೂ ತೆಂಕುತಿಟ್ಟು ಯಕ್ಷಗಾನದ ಬಗ್ಗೆ ನಿಖರವಾಗಿ ಮಾತನಾಡಬಲ್ಲ, ನೂರಾರು ಪ್ರಸಂಗಗಳನ್ನು ಕಂಠದಲ್ಲಿ ಕಟ್ಟಿಕೊಂಡಿರುವ ಅವರಿಗೆ ಈ ಪ್ರಶಸ್ತಿ ಸೂಕ್ತವಾಗಿದೆ ಎಂದು ಹೇಳಿದರು.

ಅದೇ ರೀತಿಯಲ್ಲಿ ಗೌರವ ಪ್ರಶಸ್ತಿಗೆ ಮದ್ದಳೆ ವಾದಕ ಶಂಕರ ಭಾಗವತ(ಯಲ್ಲಾಪುರ, ಶಿರಸಿ), ತಾಳಮದ್ದೆ ಅರ್ಥಗಾರಿಕೆಕಾರ ಬರೆ ಕೇಶವ ಭಟ್(ಬಂಟ್ವಾಳ), ಬಡಗುತಿಟ್ಟು ಯಕ್ಷಗಾನ ವಿದ್ವಾಂಸ ಎಚ್.ಶ್ರೀಧರ ಹಂದೆ ಕೋಟ(ಕೋಟ, ಕುಂದಾಪುರ), ಮೂಡಲಪಾಯ ಯಕ್ಷಗಾನ ಭಾಗವತ ಎ.ಎಂ.ಶಿವಶಂಕರಯ್ಯ(ಅರಳಗುಪ್ಪೆ, ತುಮಕೂರು) ಹಾಗೂ ಮೂಡಲಪಾಯ ಯಕ್ಷಗಾನ ಪಾತ್ರಧಾರಿ ಕರಿಯಣ್ಣ(ಬನಶಂಕರಿ, ಬೆಂಗಳೂರು) ಅವರುಗಳಿಗೆ ನೀಡಲಾಗುತ್ತಿದೆ ಎಂದರು.

ಇದೇ ವೇಳೆಯಲ್ಲಿ ಪುಸ್ತಕ ಬಹುಮಾನಕ್ಕೆ ಬಲಿಪ ನಾರಾಯಣ ಅವರ ‘ಬಲಿಪರ ಜಯಲಕ್ಷ್ಮಿ’(ಪ್ರಸಂಗ ಸಂಕಲನ) ಹಾಗೂ ಡಾ.ಜಿ.ಎಸ್.ಭಟ್ ಅವರ ‘ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’(ಸಂಶೋಧನಾ ಗ್ರಂಥ) ಆಯ್ಕೆಯಾಗಿವೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ಕೊನೆವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಉಡುಪಿಯಲ್ಲಿ ನಡೆಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಪಾರ್ತಿಸುಬ್ಬ ಪ್ರಶಸ್ತಿಯು 1 ಲಕ್ಷ ರೂ.ಗಳ ನಗದು, ವಾರ್ಷಿಕ ಗೌರವ ಪ್ರಶಸ್ತಿಯು 50 ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಹಾಗೂ ಪುಸ್ತಕ ಬಹುಮಾನವು 25 ಸಾವಿರ ನಗದು ಮತ್ತು ಸ್ಮರಣಿಕೆ, ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಅಕಾಡೆಮಿ ವತಿಯಿಂದ ಐದು ಸಾವಿರ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಚಾಲನೆಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ 500 ಪ್ರಸಂಗಗಳನ್ನು ಅಕಾಡೆಮಿ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುತ್ತದೆ. ವಿವಿಧ ಜಿಲ್ಲೆಗಳಲ್ಲಿ ಎರಡು ತಿಂಗಳ ಯಕ್ಷಗಾನ ಮತ್ತು ಮೂಡಲಪಾಯ ಯಕ್ಷಗಾನ ಹಾಗೂ ವೇಷಭೂಷಣ, ಮುಖವೀಣೆ ಮುಂತಾದ ಕಲಾ ಪ್ರಕಾರಗಳಲ್ಲಿ 100 ತರಬೇತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಯಕ್ಷಗಾನಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿ, ಕಥಾ ಕಮ್ಮಟ, ಕಾರ್ಯಾಗಾರಗಳು ನಡೆಸಲು ತೀರ್ಮಾನಿಸಲಾಗಿದೆ. ಗುರುಕುಲ ಕೇಂದ್ರಗಳಲ್ಲಿ ಯಕ್ಷಗಾನ ಅಭ್ಯಾಸ ಮಾಡುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹಧನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಸಾಕ್ಷಚಿತ್ರ, ಹೊರನಾಡಿನ ಕಾರ್ಯಕ್ರಮಗಳು, ಗಡಿನಾಡು ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಜಶೇಖರ್ ಹೆಬ್ಬಾರ್, ಡಾ.ರಾಧಾಕೃಷ್ಣ ಊರಾಳ ಹಾಗೂ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News