ವಿದ್ಯಾರ್ಥಿ ವೇತನಕ್ಕಾಗಿ ಸುಧಾರಿತ ವ್ಯವಸ್ಥೆ ಜಾರಿ

Update: 2018-09-17 17:09 GMT

ಬೆಂಗಳೂರು, ಸೆ.17: ಒಂದೇ ಅರ್ಜಿ ಸಲ್ಲಿಸುವ ಮೂಲಕ ವಿದ್ಯಾರ್ಥಿ ವೇತನ ಪಡೆಯಬಹುದಾದ ಸುಧಾರಿತ ವ್ಯವಸ್ಥೆ (ಸ್ಕಾಲರ್‌ಶಿಪ್ ಪೋರ್ಟಲ್ ಯೋಜನೆ)ಯನ್ನು ಸರಕಾರ ಜಾರಿಗೊಳಿಸಿದ್ದು, ಅದರಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಎಲ್ಲ ಅರ್ಹ ಶಾಲಾ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನ ನೀಡಲು ಜಿಲ್ಲಾಡಳಿತದಿಂದ ಕ್ರಿಯಾ ಯೋಜನೆ ರೂಪಿಸಲಾಗಿದೆ.

ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರ ಸಲ್ಲಿಕೆಗೆ ವಿಳಂಬ, ವಿದ್ಯಾರ್ಥಿ ಸಾಧನೆ ಟ್ರಾಕಿಂಗ್ ವ್ಯವಸ್ಥೆಯ (ಎಸ್‌ಎಟಿಎಸ್) ಗುರುತಿನ ಸಂಖ್ಯೆ ನೀಡಿಕೆಯಲ್ಲಿ ಲೋಪ ಸೇರಿದಂತೆ ಅನೇಕ ಕಾರಣಗಳಿಂದಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿನ ಸುಮಾರು 42 ಸಾವಿರಕ್ಕೂ ಅಧಿಕ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಇಂತಹ ಲೋಪಗಳು ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದ್ದು, ಸುಧಾರಿತ ಸ್ಕಾಲರ್‌ಶಿಪ್ ಪೋರ್ಟಲ್ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು, ಈ ಯೋಜನೆ ಅಡಿ ಕೆಲಸ ಮಾಡುತ್ತಿದ್ದು, ಮಾಸಾಂತ್ಯದೊಳಗೆ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳನ್ನು ಯೋಜನೆ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ.

ಶಾಲೆಗಳ ವಿವರ: ಬೆಂಗಳೂರು ದಕ್ಷಿಣ, ಪೂರ್ವ, ಉತ್ತರ ಹಾಗೂ ಆನೇಕಲ್ ತಾಲೂಕಿನಲ್ಲಿ 4,625 ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳಿದ್ದು, 13,61,362 ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ, 25,516 ಪ್ರೌಢಶಾಲೆಗಳಲ್ಲಿ 26,92,215 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ.

ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ: ಮೊಟ್ಟ ಮೊದಲ ಬಾರಿಗೆ ಪೋರ್ಟಲ್ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆ ಜಾರಿಗೊಂಡಿದೆ. ಆದರೆ, ಆನ್‌ಲೈನ್ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯಿಲ್ಲದ ಅಥವಾ ಸ್ಥಳೀಯವಾಗಿ ಇಂಟರ್‌ನೆಟ್ ಸೌಲಭ್ಯವಿಲ್ಲದವರಿಗೆ ಅನುಕೂಲವಾಗುವಂತೆ ಅರ್ಜಿ ಭರ್ತಿ ಮಾಡಲು ನೆರವಾಗುವಂತೆ ಕ್ಷೇತ್ರ ಶಿಕ್ಷಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಬೆಂಗಳೂರು ಒನ್, ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ, ತಾ.ಪಂ, ಬಿಇಒ ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಈ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅದರಂತೆ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ?: ವೇತನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯು ವೆಬ್‌ಸೈಟ್ www.scholarships.net.in ನಲ್ಲಿ ಲಭ್ಯವಾಗುತ್ತದೆ. ಇಲ್ಲಿ ವಿದ್ಯಾರ್ಥಿಯ ಎಸ್‌ಎಟಿಎಸ್ ಗುರುತಿನ ಸಂಖ್ಯೆ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ ಅಥವಾ ಇಐಡಿ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಮಾಹಿತಿ, ಇ-ಸೈನ್, ಮೊಬೈಲ್ ಸಂಖ್ಯೆ ಸೇರಿದಂತೆ ಪೂರಕ ಮಾಹಿತಿ ಭರ್ತಿ ಮಾಡಬೇಕು. ಅರ್ಜಿ ಸ್ವೀಕೃತಿ ಬಗ್ಗೆ ವಿದ್ಯಾರ್ಥಿಗಳು ನೀಡಿದ ಮೊಬೈಲ್ ಸಂಖ್ಯೆಗೆ ಖಾತರಿ ಸಂದೇಶ ರವಾನೆಯಾಗುತ್ತದೆ. ಈ ಪ್ರಕ್ರಿಯೆ ಮುಗಿದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿ ವೇತನ ಸಂದಾಯವಾಗಲಿದೆ ಎಂದು ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News