ದ.ಕನ್ನಡದ ವಿನುತ ಕೊಲೆ ಪ್ರಕರಣ: ಸೈನೈಡ್ ಕಿಲ್ಲರ್ ಮೋಹನ್ ಸಲ್ಲಿಸಿದ ಮೇಲ್ಮನವಿ ಅರ್ಜಿ ಅಂಗೀಕರಿಸಿದ ಹೈಕೋರ್ಟ್

Update: 2018-09-17 17:14 GMT

ಬೆಂಗಳೂರು, ಸೆ.17: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿನುತ ಎಂಬ ಯುವತಿಯ ಕೊಲೆ ಪ್ರಕರಣದಲ್ಲಿ ಆರೋಪಿ ಸೈನೈಡ್ ಮೋಹನ್‌ಗೆ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.

ದಕ್ಷಿಣ ಕನ್ನಡದ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯನ್ನು ಗಲ್ಲುಶಿಕ್ಷೆಗೆ ಮಾರ್ಪಾಡುಗೊಳಿಸುವಂತೆ ಕೋರಿ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಸಲ್ಲಿಸಿರುವ ಮೇಲ್ಮನವಿ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು. ಈ ವೇಳೆ, ಬೇರೊಂದು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗ ಕಾರಾಗೃಹದಲ್ಲಿದ್ದ ಸೈನೈಡ್ ಮೋಹನ್‌ನನ್ನು ಪೊಲೀಸರು ಬಾಡಿ ವಾರೆಂಟ್ ಮೇಲೆ ಕರೆತಂದು ನ್ಯಾಯಪೀಠದ ಮುಂದೆ ಹಾಜರುಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಕೊಡುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿದ ಹೈಕೋರ್ಟ್, ಎಲ್ಲ ದಾಖಲೆಗಳನ್ನು ಒಳಗೊಂಡ ಪೇಪರ್ ಬುಕ್ ಸಿದ್ಧಪಡಿಸಿ ಆದರ ಪ್ರತಿಯನ್ನು ಮೋಹನ್‌ಗೂ ಒದಗಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ಮೇಲ್ಮನವಿ ವಿಚಾರಣೆಯಲ್ಲಿ ಮೋಹನ್ ತನ್ನ ಪರವಾಗಿ ತಾನೇ ವಾದ ಮಂಡಿಸುವುದಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾನೆ.

ಪ್ರಕರಣವೇನು: 2009ರ ಸೆ.17ರಂದು ಮಡಿಕೇರಿ ಬಸ್ ನಿಲ್ದಾಣದ ಮಹಿಳೆಯರ ಶೌಚಗೃಹದ ಬಳಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಸೈನೈಡ್ ಮೋಹನನ್ನು ಬಂಧಿಸಿದ್ದರು. 2017ರ ಸೆ.13ರಂದು ದಕ್ಷಿಣ ಕನ್ನಡ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆ ರದ್ದು ಕೋರಿ ಮೋಹನ್ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

ಬಂಟ್ವಾಳದ ಅನಿತಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಾಡುಗೊಳಿಸಿದ್ದ ಹೈಕೋರ್ಟ್, ಬೆಳ್ತಂಗಡಿಯ ಲೀಲಾ ಕೊಲೆ ಪ್ರಕರಣದಲ್ಲಿ ಮೋಹನ್‌ನನ್ನು ಖುಲಾಸೆಗೊಳಿಸಿದೆ. ಆದರೆ, ಸುಳ್ಯದ ಸುನಂದಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News