ವಿರೋಧ ಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

Update: 2018-09-18 12:47 GMT

ಬೆಂಗಳೂರು, ಸೆ.18: ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ನಾಯಕರು ಅಧಿಕಾರಕ್ಕಾಗಿ ತಮ್ಮ ಸ್ಥಾನಗಳನ್ನು ಮರೆತು, ಸರಕಾರವನ್ನು ಬೀಳಿಸಲು ಷಡ್ಯಂತ್ರಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. 

ಮಂಗಳವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೆ ರಾಜ್ಯ ಇಲ್ಲವೆ ದೇಶದ ಬೆಳವಣಿಗೆಯಲ್ಲಿ ವಿರೋಧ ಪಕ್ಷದ ಸ್ಥಾನ ಮುಖ್ಯವಾಗಿರುತ್ತದೆ. ಆದರೆ, ಬಿಜೆಪಿ ನಾಯಕರಿಗೆ ಸಮ್ಮಿಶ್ರ ಸರಕಾರವನ್ನು ಬೀಳಿಸುವುದರಲ್ಲಿರುವ ಆಸಕ್ತಿ ಜನರ ಅಗತ್ಯಗಳಿಗೆ ಸ್ಪಂದಿಸುವುದರಲಿ ಇಲ್ಲವೆಂದು ಕಿಡಿಕಾರಿದರು.

ಭೀಕರ ಮಳೆಗೆ ತುತ್ತಾಗಿ ಮನೆ-ಕೃಷಿ ಭೂಮಿಯನ್ನು ಕಳೆದುಕೊಂಡಿರುವ ಕೊಡಗಿನ ಪುನರ್ ನಿರ್ಮಾಣದ ವಿಷಯದಲ್ಲಿ ಬಿಜೆಪಿ ನಾಯಕರು ಒಂದು ಹೇಳಿಕೆ ಕೊಡುತ್ತಿಲ್ಲ. ರಾಜ್ಯದ ಪ್ರವಾಸೋದ್ಯಮದಲ್ಲಿ ಪ್ರಮುಖ ಪ್ರದೇಶವಾಗಿದ್ದ ಕೊಡಗನ್ನು, ಆಗೆಯೆ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಬಿಜೆಪಿ ನಾಯಕರು ತಮ್ಮ ಸ್ವಾರ್ಥ ರಾಜಕಾರಣವನ್ನು ಬಿಟ್ಟು ಕೊಡಗಿನ ಆಮೂಲಾಗ್ರ ಅಭಿವೃದ್ಧಿಯ ವಿಶೇಷ ಅನುದಾನಕ್ಕಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲಿ ಎಂದು ಅವರು ಸಲಹೆ ನೀಡಿದರು.

ಬಿಜೆಪಿಯೆ ಹೊಣೆ: ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು, ಗೊಂದಲಗಳಿಗೆ ಬಿಜೆಪಿ ನಾಯಕರೆ ಸಂಪೂರ್ಣ ಹೊಣೆಗಾರರು. ಸಂವಿಧಾನದಡಿಯಲ್ಲಿ ಅಧಿಕಾರ ನಡೆಸುತ್ತಿರುವ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಹಣದ ಆಮಿಷ ಒಡ್ಡುವುದು, ಬೆದರಿಕೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ. ಇವರ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಪ್ರಾದೇಶಿಕ ಪಕ್ಷವೆ ಸೂಕ್ತ ಆಯ್ಕೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 2ರೂ. ಇಳಿಕೆ ಮಾಡಿದ್ದಾರೆ. ಆದರೆ, ಬಿಜೆಪಿ ಆಡಳಿತವಿರುವ ಯಾವುದೆ ರಾಜ್ಯದಲ್ಲಿ ಬೆಲೆ ಏರಿಕೆಯ ಕುರಿತು ಬಾಯಿ ಬಿಡುತ್ತಿಲ್ಲ. ಒಂದು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ರಾಷ್ಟ್ರೀಯ ಪಕ್ಷಗಳಿಂತ ಪ್ರಾದೇಶಿಕ ಪಕ್ಷವೆ ಸೂಕ್ತವೆಂದು ಅವರು ಅಭಿಪ್ರಾಯಿಸಿದರು.

ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಬೇಡಿ ಎಂದು ದೇಶದ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಮಾತ್ರ ಜನರ ಯಾವುದೆ ಒತ್ತಾಯಕ್ಕೂ ಮಣಿಯದೆ ಪ್ರತಿ ದಿನ ಹೆಚ್ಚಳ ಮಾಡುತ್ತಾ ಹೋಗುತ್ತಿದೆ. ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚಳದಿಂದ 2ಲಕ್ಷ ಕೋಟಿ ರೂ.ಗೂ ಹೆಚ್ಚು ಲಾಭ ಬಂದಿದೆ ಎಂದು ಕೇಂದ್ರ ಸರಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ದರ ಹೆಚ್ಚಳ ಮಾಡಿ, ಜನರಿಂದ ಒತ್ತಾಯಪೂರ್ವಕವಾಗಿ ಹಣ ಪಡೆಯುವುದು ಪ್ರಜಾಪ್ರಭುತ್ವ ಸರಕಾರದ ಲಕ್ಷಣವಲ್ಲ. ಬೆಲೆಯೇರಿಕೆಯಿಂದ ಜನತೆ ತತ್ತರಿಸುತ್ತಿದ್ದರೂ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಕಿಂಚಿತ್ತೂ ಯೋಚನೆಯಿಲ್ಲವಾಗಿದೆ ಎಂದು ಅವರು ವಿಷಾದಿಸಿದರು. ಈ ವೇಳೆ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News