ಸರಕಾರಿ ಯೋಜನೆಗಳು ರೈತರಿಗೆ ತಲುಪುವಲ್ಲಿ ವಿಫಲ: ಸಚಿವ ಮನಗೂಳಿ ಬೇಸರ

Update: 2018-09-18 13:58 GMT

ಬೆಂಗಳೂರು, ಸೆ.18: ಅರಣ್ಯ ಇಲಾಖೆ ಮೂಲಕ ರೈತರಿಗೆ ತಲುಪಬೇಕಾದ ಸರಕಾರಿ ಯೋಜನೆಗಳು ಯಾವುದೂ ತಲುಪುತ್ತಿಲ್ಲ. ಹೀಗಾಗಿ, ಅಧಿಕಾರಿಗಳು ಸರಕಾರದ ಸೇವೆಗಳು ಮತ್ತು ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ತೋಟಗಾರಿಕೆ ಇಲಾಖೆ ಸಚಿವ ಎಂ.ಸಿ.ಮನಗೂಳಿ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಅರಣ್ಯ ಇಲಾಖೆ ಮತ್ತು ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಬಿದಿರು ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಸಂರಕ್ಷಣೆ, ಅರಣ್ಯ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳಿಗಾಗಿ ಸರಕಾರ ಸಾವಿರಾರು ಕೋಟಿ ಅನುದಾನ ನೀಡುತ್ತದೆ. ಆದರೆ, ಅದು ಸರಿಯಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅರಣ್ಯ ಇಲಾಖೆ ಎಲ್ಲಿದೆ ಎಂಬುದೇ ರೈತರಿಗೆ ತಿಳಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದೇಶದಲ್ಲಿ ಶೇ.25 ರಷ್ಟಿರುವ ಕೃಷಿಕರು ನೀರಾವರಿ ಕೊರತೆಯ ನಡುವೆಯು ಬೇರೆ ದೇಶಗಳಿಗೆ ರಫ್ತು ಮಾಡುವಷ್ಟು ಆಹಾರ ಉತ್ಪನ್ನಗಳಲ್ಲಿ ತೊಡಗಿದ್ದಾರೆ. ದೇಶದಲ್ಲಿ ಶೇ.75 ರಷ್ಟು ಕೃಷಿಕರಿದ್ದು, ಸುಸಜ್ಜಿತ ನೀರಾವರಿ ಮತ್ತು ಯಾಂತ್ರಿಕ ಸೌಲಭ್ಯಗಳಿದ್ದರೂ ಆಹಾರ ಉತ್ಪನ್ನ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿದಿರಿನ ಹಲವು ಉತ್ಪನ್ನಗಳಿವೆ, ಅವುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಜೊತೆಗೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಬಿದಿರಿನ ಕೃಷಿ ಮಾಡಲು ಹೆಚ್ಚಿನ ಆದ್ಯತೆ ನೀಡುವಂತೆ ಮಾಡಬೇಕು. ಆ ಮೂಲಕ ರೈತರನ್ನು ಆರ್ಥಿಕ ಸಬಲರನ್ನಾಗಿಸಲು ಇಲಾಖೆ ಮುಂದಾಗಬೇಕು. ಸರಕಾರಿ ಅಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಅಲ್ಲದೆ, ರೈತರಿಗೂ ಹೆಚ್ಚು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ನದಿಗಳ ಸಂರಕ್ಷಣೆ ಯೋಜನೆಗಾಗಿ ಕಳೆದ ಬಜೆಟ್‌ನಲ್ಲಿ ರಾಜ್ಯ ಸರಕಾರ 10 ಕೋಟಿ ರೂ.ಗಳನ್ನು ಘೋಷಣೆ ಮಾಡಿದೆ. ಇನ್ನೂ ಹೆಚ್ಚಿನ ಹಣ ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಾಂತಪ್ಪ ಮಾತನಾಡಿ, ಬಿದಿರು ಆಧುನಿಕ ಕಲ್ಪವೃಕ್ಷವಿದ್ದಂತೆ. ರಾಜ್ಯದ ಒಟ್ಟು ಅರಣ್ಯ ಪ್ರದೇಶದಲ್ಲಿ 3,500 ಹೆಕ್ಟೇರ್‌ನಷ್ಟು ವಿವಿಧ ತಳಿಗಳ ಬಿದಿರು ಬೆಳೆಯಲಾಗುತ್ತಿದೆ. ರೈತರ ಜಮೀನುಗಳಲ್ಲಿ 2,500 ಹೆಕ್ಟೇರ್, ಮೀಸಲು ಅರಣ್ಯ 13,500 ಹೆಕ್ಟೇರ್ ಬೆಳೆಯಲಾಗಿದೆ. ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯ ಎರಡನೇ ಹಂತದ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 220 ಕೋಟಿ ಘೋಷಿಸಿದ್ದು, ಈಗಾಗಲೇ 28 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಬಿದಿರು ಆಧಾರಿತ ಉದ್ಯಮ ಅಭಿವೃದ್ಧಿ ಮತ್ತು ಬಿದಿರು ಉತ್ಪನ್ನಗಳ ಆಮದು ಕಡಿಮೆ ಮಾಡುವ ಸಲುವಾಗಿ ರೈತರಿಗೆ ಪ್ರತಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸಲು ಮೂರು ವರ್ಷ ಅವಧಿಗೆ 50 ಸಾವಿರ ಸಹಾಯಧನ ನೀಡಲಾಗುತ್ತಿದೆ. ಹೈಟೆಕ್ ನರ್ಸರಿಗಾಗಿ 8 ರಿಂದ 10 ಲಕ್ಷದವರೆಗೂ ಅನುದಾನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಸಿ.ಜಯರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಿದಿರು ಶೇ.35ರಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಕಾಡಿನಲ್ಲಿನ ಬಿದಿರು ನಾಶವಾಗುತ್ತಿದೆ. ಆನೆಗಳಿಗೆ ಬಿದಿರು ಹುಲ್ಲು ಸಿಗುತ್ತಿಲ್ಲವಾದ್ದರಿಂದ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗುತ್ತಿವೆ. ನಾವು ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡಿದ್ದೇವೆ. ಇದರಿಂದಾಗಿಯೇ ವಾತಾವರಣ ಏರುಪೇರಾಗಿ ಪ್ರವಾಹ ಮತ್ತು ಬರಗಾಲ ಉಂಟಾಗುತ್ತಿದೆ.

-ಅ.ದೇವೇಗೌಡ, ವಿಧಾನ ಪರಿಷತ್ ಸದಸ್ಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News